ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಅಭಿವೃದ್ಧಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಿವಮೊಗ್ಗ ಕ್ಷೇತ್ರದ ಶಾಸಕರೂ ಆಗಿರುವ ಕೆ.ಎಸ್. ಈಶ್ವರಪ್ಪ ಅವರು ಕೂಡಲೇ ರಾಜೀನಾಮೆ ನೀಡಿ , ತಮ್ಮ ವೈಫಲ್ಯ ಒಪ್ಪಿಕೊಳ್ಳಬೇಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರದಲ್ಲಿ ಶಾಂತಿ ವಾತಾವರಣ ಮೂಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಉಗುರಿನಲ್ಲಿ ನಿವಾರಣೆಯಾಗಬಹುದಾಗಿದ್ದ ವಿಷಯಕ್ಕೆ ಕೊಡಲಿ ತೆಗೆದುಕೊಂಡಂತಾಗಿದೆ. ಸಚಿವರು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಪೆÇಲೀಸ್ ಇಲಾಖೆಯ ಸಿಬ್ಬಂದಿಯೇ ಮಾತನಾಡುವ ಪರಿಸ್ಥಿತಿಉಂಟಾಗಿದೆ ಎಂದು ದೂರಿದ್ದಾರೆ.
ನಿರ್ಭಯ ಕೇಸ್ ಮಾದರಿಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಟಿಪ್ಪುನಗರದಲ್ಲಿ 9 ವರ್ಷದ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರ ಯತ್ನ ಹಾಗೂ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿರುವ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಘಟನೆಯು ಇಡೀ ಮಲೆನಾಡನ್ನು ಬೆಚ್ಚಿಬೀಳಿಸಿದೆ. ಇದು ದುರ್ಘಟನೆ ಮಾತ್ರ ಅಲ್ಲ. ಆಡಳಿತ ವೈಫಲ್ಯವೂ ಹೌದು ಎಂದಿದ್ದಾರೆ.
ಇನ್ನು ಅಭಿವೃದ್ಧಿ ವಿಷಯದಲ್ಲಿಯೂ ಸಹ ಶಾಸಕ ಈಶ್ವರಪ್ಪ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಸ್ಮಾರ್ಟ್ ಸಿಟಿ ಈಗ ಅಗ್ಲಿ ಸಿಟಿ ಆಗಿದೆ. ಕಾಮಗಾರಿಗಳು ಕಳಪೆ ಆಗಿವೆ ಎಂದು ನಾಗರೀಕರು ಪದೇ ಪದೇ ದೂರುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವುದರ ಬದಲು ಧರ್ಮ, ಜಾತಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾ ಜನರ ನಿಜವಾದ ಸಮಸ್ಯೆ ಮರೆಯುತ್ತಿದ್ದಾರೆ. ಪ್ರತಿ ದಿನ ದುಡಿದು ತಿನ್ನುವವರು ಬದುಕುವುದೇ ಕಷ್ಟ ಆಗುತ್ತಿದೆ.ಕಳೆದ 5 ದಿನಗಳಿಂದಲೂ ಅಂಗಡಿಗಳನ್ನು ಬಂದ್ ಮಾಡಿಸಿರುವುದರಿಂದ ವ್ಯಾಪಾರಸ್ಥರ ಕಷ್ಟ ಹೇಳತೀರದು. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಈ ಕೂಡಲೇ ತಮ್ಮ ವೈಫಲ್ಯ ಒಪ್ಪಿಕೊಂಡು ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.