ಶಿವಮೊಗ್ಗ: ಬಜರಂಗದಳ ಪ್ರಮುಖನ ಮೇಲೆ ಹಲ್ಲೆ ನಡೆಯುತ್ತಿದ್ದಂತೆ ಕೋಮು ಘರ್ಷಣೆ ರೂಪ ಪಡೆದುಕೊಂಡಿದ್ದ ಶಿವಮೊಗ್ಗದಲ್ಲಿ ಜಾರಿ ಮಾಡಿದ್ದ ನಿಷೇಧಾಜ್ಞೆಯ ಲಾಭ ಪಡೆದುಕೊಂಡು ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ನಾಲ್ವರು ದುಷ್ಕರ್ಮಿಗಳನ್ನು ಘಟನೆ ನಡೆದ 24 ಗಂಟೆಗಳಲ್ಲೇ ಪೊಲೀಸರು ಬಂಧಿಸಿದ್ದಾರೆ.
ಅನಾರೋಗ್ಯದಿಂದ ಶಿವಮೊಗ್ಗ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ತಾಯಿಯ ಆರೈಕೆಗಾಗಿ ಬಂದಿದ್ದ ಬಾಲಕಿಯನ್ನು ಪುಸಲಾಯಿಸಿದ್ದ ಅಲ್ಲಿನ ವಾರ್ಡ್‍ಬಾಯ್ ಮನೋಜ್ ತನ್ನ ಮೂವರು ಸ್ನೇಹಿತರೊಡಗೂಡಿ ಸಾಮೂಹಿಕ ಅತ್ಯಾಚಾರಕ್ಕೆ ಕಾರಣನಾಗಿದ್ದ. ಆಸ್ಪತ್ರೆಯಲ್ಲಿ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಮನೋಜ್ ಭಾನುವಾರ ನಗರದಲ್ಲಿ ನಿಷೇಧಾಜ್ಞೆಇದ್ದ ಕಾರಣ ಕ್ಯಾಂಟೀನ್‍ನಲ್ಲಿ ಊಟ ಸಿಗುವುದಿಲ್ಲ ಎಂದು ಹೇಳಿ ಹೊರಗೆ ಕರೆದುಕೊಂಡು ಹೋಗಿದ್ದ. ಪೂರ್ವನಿಗದಿತ ಪ್ಲಾನ್‍ನಂತೆ ಮಾರುತಿ ಓಮ್ನಿಯಲ್ಲಿ ಕುಳಿತಿದ್ದ ಮನೋಜ್‍ನ ಮೂವರು ಗೆಳೆಯರನ್ನು ನೋಡಿ ಬೆದರಿದ್ದ ಬಾಲಕಿಯನ್ನು ಇವರು ನನ್ನ ಸ್ನೇಹಿತರೆ ಮುಂದೆ ಇಳಿದುಹೋಗುತ್ತಾರೆ ಎಂದು ಕಾರು ಹತ್ತಿಸಿಕೊಂಡಿದ್ದ. ಆದರೆ ಬಾಲಕಿಯ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡಿದ್ದ ಆರೋಪಿಗಳು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಆರೋಪಿಗಳ ಬಂಧನ ಹೇಗಾಯಿತು?
ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಯಿಂದ ಬಾಲಕಿಯನ್ನು ಕರೆದೊಯ್ದಿದ್ದ ದುಷ್ಕರ್ಮಿಗಳು ಮಧ್ಯಾಹ್ನ 2 ಗಂಟೆಗೆ ಆಸ್ಪತ್ರೆ ಬಳಿ ಬಿಟ್ಟು ಹೋಗಿದ್ದರು. ಈ ಸಂದರ್ಭ ಸಿಮ್ಸ್‍ನ ಭದ್ರತಾ ಸಿಬ್ಬಂದಿ ಬಾಲಕಿಯ ಚಲನವಲನದಲ್ಲಿ ಅನುಮಾನ ಬಂದು ಅಲ್ಲಿಯೇ ಇದ್ದ ಪೊಲೀಸ್ ಕಂಟ್ರೋಲ್‍ರೂಂಗೆ ಮಾಹಿತಿ ನೀಡಿದ್ದರು. ಪೊಲೀಸರು ಬಾಲಕಿಯನ್ನು ವಿಚಾರಣೆ ಮಾಡಿದಾಗ ಸಾಮೂಹಿಕ ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿತು.
ಮೊದಲೇ ಸೂಕ್ಷ್ಮ ಸನ್ನಿವೇಶ ಇದ್ದ ನಗರದಲ್ಲಿ ಈ ಪ್ರಕರಣ ಮತ್ತಷ್ಟು ತಲೆಬೇನೆ ಮಾಡುವುದು ಖಂಡಿತಾ ಎಂದು ಅರಿತ ಎಸ್ಪಿ ಶಾಂತರಾಜ್ ಅವರು, ಮಹಿಳಾ ಠಾಣೆ ಸಿಪಿಐ ಅಭಯ್ ಪ್ರಕಾಶ್ ಹಾಗೂ ಪಿಎಸ್‍ಐ ಶಾಂತಲಾ ಅವರನ್ನೊಳಗೊಂಡ ತನಿಖಾ ತಂಡ ರಚನೆ ಮಾಡಿದ್ದರು. ಕೂಡಲೇ ಕಾರ್ಯೋನ್ಮುಖವಾದ ಅಭಯಪ್ರಕಾಶ್ ತಂಡ ಮೊದಲು ಪ್ರಮುಖ ಆರೋಪಿ ಮನೋಜ್‍ನನ್ನು ಖೆಡ್ಡಾಕ್ಕೆ ಬೀಳಿಸಿತು. ಅದಾದ ಬಳಿಕ ವೈನ್ಸ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್ ಎಂಬಾತ ಅಂಗಡಿ ಬಂದ್ ಆಗಿದ್ದರಿಂದ ತನ್ನ ರೂಮಿನಲ್ಲಿಯೇ ಮದ್ಯಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭ ರೂಮಿನಲ್ಲಿಯೇ ಪೊಲೀಸರು ಆತನನ್ನು ಲಾಕ್ ಮಾಡಿಕೊಂಡರು. ಈ ಇಬ್ಬರ ಬಂಧನದ ವಿಷಯ ತಿಳಿಯುತ್ತಿದ್ದಂತೆಯೇ ಸೋಮವಾರ ಬೆಳಗ್ಗೆಯೇ ಇನ್ನಿಬ್ಬರು ಆರೋಪಿಗಳಾದ ವಿನಯ್ ಮತ್ತು ಪ್ರಜ್ವಲ್ ಹರಿಹರದ ಕಡೆಗೆ ಬೈಕ್‍ನಲ್ಲಿ ಪರಾರಿಯಾಗುತ್ತಿದ್ದರು. ಆರೋಪಿಗಳ ಮೊಬೈಲ್ ಲೋಕೇಷನ್ ಆಧಾರದ ಮೇಲೆ ಬೆನ್ನತ್ತಿದ ಪೊಲೀಸರು ಅತ್ಯಾಚಾರ ಘಟನೆ ನಡೆದ 24 ತಾಸುಗಳಲ್ಲಿಯೇ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹೊತ್ತಿಗಾಗಲೇ ಶಿವಮೊಗ್ಗದ ಹಲವು ಸಂಘಟನೆಗಳು ಅತ್ಯಾಚಾರ ಆರೋಪಿಯನ್ನು ಬಂಧಿಸುವಂತೆ ಜಿಲ್ಲಾಧಿಕಾರಿ ಹಾಗೂ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದರು. ನಗರದಲ್ಲಿ ವಿಷಮ ಸ್ಥಿತಿ ಇರುವಾಗಲೇ ಬಾಲಕಿ ಮೇಲೆ ದುರುಳರು ನಡೆಸಿದ ಹೀನ ಕೃತ್ಯದಿಂದ ನಗರದ ಜನ ಬೆಚ್ಚಿಬಿದ್ದಿದ್ದರು. ಆದರೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಗಂಗಾಧರ್, ಮಂಜುನಾಥ್,ಸತೀಶ್,ಮಂಜೇಗೌಡ ಮತ್ತು ಅರುಣ್ ಭಾಗವಹಿಸಿದ್ದರು.
previous post
next post