ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ,ಸೋಲಿಲ್ಲದ ಸರದಾರ ಬಿರುದಾಂಕಿತ ಸಾರೇಕೊಪ್ಪ ಬಂಗಾರಪ್ಪ ಅವರು ನಾಲ್ಕು ದಶಕಗಳ ಕಾಲ ಮಲೆನಾಡಿನ ರಾಜಕಾರಣವನ್ನು ತಮ್ಮ ಅಂಕೆಯಂತೆ ನಡೆಸಿದವರು. ಅವರ ಆಕಾಂಕ್ಷೆಯಂತೆ ಪಕ್ಷ ನಡೆದುಕೊಳ್ಳಲಿಲ್ಲ ಎಂದರೆ ಮುಲಾಜಿಲ್ಲದೆ ಹೊರಹೋಗುತ್ತಿದ್ದರು. ಆ ಕಾರಣದಿಂದಲೇ ಅವರಿಗೆ ಧೀರ್ಘಕಾಲೀನ ಅಧಿಕಾರವೂ ಸಿಗಲಿಲ್ಲ. ಅವರಿದ್ದಾಗ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಶಕ್ತಿ ಇರುತಿತ್ತು. ಆದರೆ ಆನೆ ನಡೆದದ್ದೇ ದಾರಿ ಎಂಬಂತೆ ಹಲವು ಬಾರಿ ಅವರು ಕಾಂಗ್ರೆಸ್‍ಗೆ ಕೈ ಕೊಟ್ಟು ಹೊಸ ಪಾರ್ಟಿ ಕಟ್ಟುತ್ತಿದ್ದರು. ಸ್ವಂತ ಪಾರ್ಟಿಗಳಲ್ಲಿ ಕೈ ಸುಟ್ಟುಕೊಂಡಿದ್ದೇ ಹೆಚ್ಚಾದರೂ ಕಾಂಗ್ರೆಸ್ ಪಕ್ಷಕ್ಕೆ ತಾವು ಅನಿವಾರ್ಯ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸಿದ್ದರು.
ಈಗ ಅವರ ಮಗ ಕುಮಾರ ಬಂಗಾರಪ್ಪ ಕೂಡಾ ಅಪ್ಪನ ಹಾದಿಯಲ್ಲಿಯೇ ಸಾಗುತ್ತಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ. ಈಗ ಸೊರಬ ಕ್ಷೇತ್ರದಿಂದ ಶಿಸ್ತಿನ ಪಕ್ಷ ಬಿಜೆಪಿಯ ಶಾಸಕರಾಗಿರುವ ಕುಮಾರ್ ಬಂಗಾರಪ್ಪ ಅವರು, ಕ್ಷೇತ್ರದಲ್ಲಿ ತಮ್ಮದೇ ಬಣ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಮೂಲ ಬಿಜೆಪಿಗರಿಂದ ಕೇಳಿಬರುತ್ತಿದೆ.
ಇಬ್ಬಣ ರಾಜಕೀಯ:
ಕಳೆದ ಚುನಾವಣೆ ಹೊತ್ತಲ್ಲಿ ಬಿಜೆಪಿ ಸೇರಿದಿದ್ದರೆ ರಾಜಕೀಯವಾಗಿ ತುಂಬಾ ಹಿನ್ನಡೆ ಅನುಭವಿಸಬೇಕಾಗಿದ್ದ ಕುಮಾರ್ ಬಂಗಾರಪ್ಪ ಸಮಯಕ್ಕೆ ತಕ್ಕ ರಾಜಕೀಯ ತಂತ್ರಗಾರಿಕೆ ಮೆರೆದು ಶಾಸಕರೂ ಆದರು. ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ಅಗ್ರಶ್ರೇಣಿ ನಾಯಕರೇ ಇರುವ ಕಾರಣ ಸಚಿವಗಾದಿ ಹಿಡಿಯಲಾಗಿಲ್ಲ. ಆದರೆ ಸಿ.ಎಂ.ಯಡಿಯೂರಪ್ಪ ಅವರೊಂದಿಗಿನ ಸಖ್ಯದಿಂದಾಗಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪಕ್ಷದ ದೃಷ್ಟಿಯಲ್ಲಿ ಬಿಜೆಪಿ ಕೇಡರ್ ಬೇಸ್ ಸಿಸ್ಟಂಗೆ ಅವರು ಹೊಂದಾಣಿಕೆಯಾದಂತೆ ಕಂಡುಬರುತ್ತಿಲ್ಲ. ತಂದೆ ಬಂಗಾರಪ್ಪರಂತೆ ಎಲ್ಲವೂ ತಮ್ಮ ಮೂಗಿನ ನೇರಕ್ಕೆ ಇರಬೇಕೆಂಬ ಇರಾದೆಯಿಂದ ಕ್ಷೇತ್ರದಲ್ಲಿ ತಮ್ಮದೇ ಆದ ಬಣ ಸೃಷ್ಟಿಸಿಕೊಂಡಿದ್ದಾರೆ.
ತಾಲೂಕು ಬಿಜೆಪಿ ಅಧ್ಯಕ್ಷರನ್ನಾಗಿ ಕೊಟ್ರೇಶ್‍ಗೌಡ ಅವರನ್ನು ಕುಮಾರ್ ನೇಮಕ ಮಾಡಿದ್ದರೆ, ಬಿಜೆಪಿ ಜಿಲ್ಲಾ ಘಟಕವು ಗುರುಪ್ರಸನ್ನಗೌಡ ಎಂಬುವರನ್ನು ನೇಮಕ ಮಾಡಿತ್ತು. ಈ ಎರಡು ಬಣಗಳು ಪ್ರತ್ಯೇಕ ಸಭೆ ನಡೆಸುತ್ತಿವೆ. ಪಟ್ಟಣ ಪಂಚಾಯಿತಿ ಅಧ್ಯಕ್ಷರ ನೇಮಕದಲ್ಲೂ ಇದೇ ರೀತಿಯಾಗಿದ್ದು, ಮೂಲ ಬಿಜೆಪಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕುಮಾರ್ ಬಂಗಾರಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಗಾರಪ್ಪ ಅವರು ಕ್ರಾಂತಿ ರಂಗ, ಕರ್ನಾಟಕ ಕಾಂಗ್ರೆಸ್ ಪಾರ್ಟಿ,ಕರ್ನಾಟಕ ವಿಕಾಸ ಪಾರ್ಟಿ ಸ್ಥಾಪನೆ ಮಾಡಿ ಮತ್ತೆ ಮರಳಿ ಕಾಂಗ್ರೆಸ್‍ಗೆ ಬಂದಾಗಲೂ ಪಕ್ಷದ ಎಲ್ಲ ಅಧಿಕಾರ ತಮ್ಮ ಬೆಂಬಲಿಗರ ಕೈಯಲ್ಲೇ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಪಕ್ಷದ ರಾಜ್ಯ ಘಟನಕದ ಜತೆ ಯಾವತ್ತೂಸಂಘರ್ಷ ಕಾಯ್ದುಕೊಳ್ಳುತ್ತಿದ್ದ ಬಂಗಾರಪ್ಪ ತಮ್ಮದೇ ಬಣ ರಾಜಕಾರಣದಿಂದ ಖ್ಯಾತಿವೆತ್ತಿದ್ದರು ಮತ್ತು ಎಂತದೇ ಸಂದರ್ಭದಲ್ಲಿಯೂ ತಮ್ಮನ್ನು ನಂಬಿದವರಿಗೆ ಅಧಿಕಾರ ಕೊಡಿಸುತ್ತಿದ್ದರು.
ಗ್ರಾಮಪಂಚಾಯಿತಿ ನಿರ್ವಹಣಾ ಸಮಿತಿ:
ದೇಶದುದ್ದಕ್ಕೂ ಅಧಿಕಾರದಲ್ಲಿರುವ ಬಿಜೆಪಿಗೆ ಸೊರಬ ತಾಲೂಕಿನಲ್ಲಿ ಮಾತ್ರ ಗ್ರಾಮ ಪಂಚಾಯಿತಿ ಚುನಾವಣೆ ಹೊತ್ತಲ್ಲಿ ಮಂಡಳ ಅಧ್ಯಕ್ಷರಿಲ್ಲ. ತಾಲೂಕಿನ ಬಣಜಗಳದಿಂದ ಬೇಸತ್ತ ಜಿಲ್ಲಾ ಘಟಕವು ಹಲವು ಸುತ್ತಿನ ಸಂಧಾನ ಮಾಡಿದ್ದರೂ ಫಲಕಾಣಲಿಲ್ಲ. ಆ ಕಾರಣಕ್ಕಾಗಿ ಶಾಸಕ ಕುಮಾರ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ ಹಾಗೂ ಜಿಲ್ಲಾ ಮುಖಂಡ ಆರ್.ಕೆ.ಸಿದ್ದರಾಮಣ್ಣ ನೇತೃತ್ವದಲ್ಲಿ ಪಂಚಾಯಿತಿ ಚುನಾವಣೆ ನಿರ್ವಹಣಾ ಸಮಿತಿ ರಚನೆ ಮಾಡಲಾಗಿದೆ.ಇದರಲ್ಲಿ ಮೂಲ ಬಿಜೆಪಿಗರು ಹಾಗೂ ಕುಮಾರ್ ಬಂಗಾರಪ್ಪ ಬಣವನ್ನು ಸೇರಿಸಿಕೊಳ್ಳಲಾಗಿದೆ. ಪಕ್ಷದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶಾಸಕರ ಕಾರ್ಯಯೋಜನೆಗೆ ಪೂರಕವಾಗಿರಬೇಕೆಂದು ಕುಮಾರ್ ಬಂಗಾರಪ್ಪ ತಮ್ಮ ಆಪ್ತರಿಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ಕೇಡರ್ ಬೇಸ್ ಬಿಜೆಪಿಯಲ್ಲಿ ಇದು ನುಂಗಲಾರದ ತುತ್ತಾಗಿದೆ ಎಂದು ಹೇಳಲಾಗುತ್ತಿದೆ.