ಸೊರಬ: ಗೋ ಮಾಂಸ ರಪ್ತಿನಲ್ಲಿ ವಿಶ್ವದಲ್ಲಿಯೇ ದೇಶ ಎರಡನೇ ಸ್ಥಾನದಲ್ಲಿದ್ದು, ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ ಜನರ ಭಾವನಾತ್ಮಕ ವಿಷಯಗಳೊಂದಿಗೆ ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಲು ಸಜ್ಜಾಗಿರುವುದು ಹಾಸ್ಯಾಸ್ಪದ ವಿಷಯ ಎಂದು ಕೆಪಿಸಿಸಿ ವಕ್ತಾರ ಹಾಗೂ ಗ್ರಾ.ಪಂ ಚುನಾವಣೆ ಉಸ್ತುವಾರ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದರು.
ಪಟ್ಟಣದ ಆಲೇಕಲ್ ಸಭಾಂಗಣದಲ್ಲಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಕರೆದಿದ್ದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಸದಾ ಜನರ ಭಾವನಾತ್ಮಕ ವಿಷಯಗಳೊಂದಿಗೆ ಚುನಾವಣೆಗಳನ್ನು ಎದುರಿಸುವುದು ಅಜೆಂಡಾ ಮಾಡಿಕೊಂಡಿದೆ. ಗ್ರಾ.ಪಂ ಚುನಾವಣೆ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಆದರೆ, ಕೇಂದ್ರ ಸರ್ಕಾರ ಮೊದಲು ಗೋ ಮಾಂಸ ರಫ್ತು ಮಾಡುವುದನ್ನು ತಡೆ ಹಿಡಿಯುವ ಜತೆಗೆ ನಿಷೇಧ ಮಾಡಲಿ ಎಂದು ಸವಾಲು ಹಾಕಿದ ಅವರು, ಜನರಿಗೆ ಹಾಗೂ ರೈತರಿಗೆ ಅನುಕೂಲವಾಗುವ ಕಾಯ್ದೆಗಳನ್ನು ಜಾರಿಗೊಳಿಸದೆ, ರೈತರನ್ನು ಬೀದಿಗೆ ಬಿಟ್ಟು ಲವ್ ಜಿಹಾದ್- ಗೋ ಹತ್ಯೆ ನಿಷೇಧದಂತಹ ಅಪ್ರಸ್ತುತ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಸಲ್ಲದು ಎಂದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲಿ ಲೋಕಾಯುಕ್ತ ಪುನರ್ ಸ್ಥಾಪಿಸುವುದಾಗಿ ತಿಳಿಸಿತ್ತು. ಈಗ ಲೋಕಾಯುಕ್ತ ಬಗ್ಗೆ ರಾಜ್ಯ ಸರ್ಕಾರ ಚಕಾರ ಎತ್ತುತ್ತಿಲ್ಲ. ಇದರ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಕ್ಕಳು ಜೈಲು ಸೇರುತ್ತಾರೆ ಎನ್ನುವ ಭಯವಿದೆ ಎಂದು ಪ್ರಶ್ನಿಸಿದ ಅವರು, ಅತಿವೃಷ್ಠಿಗೆ ಸಿಲುಕಿ ನಿರ್ಗತಿಕರಾದ ಕುಟುಂಬಗಳಿಗೆ ಈವರೆಗೂ ಪರಿಹಾರ ನೀಡುವುದು ಹಾಗೂ ವಸತಿ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಜನ ಸಾಮಾನ್ಯರ ಬದುಕಿಗೆ ಯೋಜನೆಗಳನ್ನು ರೂಪಿಸದೇ, ಕೆಲವೇ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪಿಸಿ ಕೋಟ್ಯಂತರ ರೂ. ಅನುದಾನ ನೀಡಿರುವುದು ಓಲೈಕೆ ರಾಜಕಾರಣದ ಉದ್ಧೇಶವಾಗಿದೆ. ಸರ್ಕಾರಕ್ಕೆ ನಿಗಮ ಮಂಡಳಿಗಳನ್ನು ಸ್ಥಾಪಿಸುವ ಇಚ್ಚಾಶಕ್ತಿ ಇದ್ದರೆ ಎಲ್ಲಾ ಸಮುದಾಯಗಳಿಗೂ ಸ್ಥಾಪಿಸಲಿ ಎಂದು ಆಗ್ರಹಿಸಿದರು.
ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಪಕ್ಷ ಸಂಘಟನೆಯಲ್ಲಿ ಹೊಸ ಚೈತನ್ಯ ಮೂಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಮುಂದಿನ ಎಲ್ಲಾ ಚುನಾವಣೆಗಳಿಗೂ ಗ್ರಾ.ಪಂ ಚುನಾವಣೆ ಅಡಿಪಾಯವಾಗಲಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಬಿಜೆಪಿ ಹೊರತು ಪಡಿಸಿ ಮಧು ಬಂಗಾರಪ್ಪ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಗ್ರಾ.ಪಂ ಚುನಾವಣೆಯನ್ನು ಎದುರಿಸಲಾಗುವುದು. ಈ ಕುರಿತು ಸ್ಥಳೀಯ ಮುಖಂಡರು ಅಭ್ಯರ್ಥಿಗಳ ಆಯ್ಕೆಯ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ. ಮಧು ಬಂಗಾರಪ್ಪ ಕಾಂಗ್ರೆಸ್‍ಗೆ ಬಂದರೆ ಆನೆ ಬಲ ಬಂದಂತೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಬಗ್ಗೆ ಜನತೆ ನಿರೀಕ್ಷೆ ಹೊಂದಿದ್ದಾರೆ. ಪಕ್ಷದ ಚಿಹ್ನೆ ಇಲ್ಲದ ಚುನಾವಣೆ ಆದರೂ ಸಹ, ಪಕ್ಷವನ್ನು ಬೆಂಬಲಿಸಿ ಹಾಗೂ ಪಕ್ಷದ ಬೆಂಬಲಕ್ಕಾಗಿ ಅಭ್ಯರ್ಥಿಗಳು ಪೈಪೋಟಿ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರು ಕ್ಷೇತ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದರೂ, ಪ.ಪಂ ಹಾಗೂ ಪುರಸಭೆ ಸದಸ್ಯರಿಗೆ ಆಸೆ-ಆಮಿಷಗಳನ್ನೊಡುವುದು ಮತ್ತು ಇನ್ನಿತರೆ ಬೆದರಿಕೆಗಳ ಮೂಲಕ ಸೆಳೆದು ಅಧಿಕಾರ ಸ್ಥಾಪಿಸಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಎಪಿಎಂಸಿ, ಭೂ ಸುಧಾರಣೆ ಮತ್ತಿತರ ಕಾಯ್ದೆಗಳು ನೇರವಾಗಿ ಗ್ರಾಮೀಣ ಜನತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕಾರ್ಪೋರೇಟ್ ಸಂಸ್ಥೆಗಳ ಕೈಗೊಂಬೆಯಂತೆ ಸರ್ಕಾರಗಳು ವರ್ತಿಸುತ್ತಿದ್ದು, ಈಗಾಗಲೇ ಭೂ ಸುಧಾರಣೆ ಕಾಯ್ದೆ ಮಸೂದೆ ಅಂಗೀಕಾರವಾಗಿದೆ. ಆದರೆ, ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ ಎಂದ ಅವರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಜಾರಿಗೊಳಿಸಿದ ಆಹಾರ ಕಾಯ್ದೆಯ ಪರಿಣಾಮ ಪ್ರಸ್ತುತ ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಜನತೆ ಆಹಾರದ ಕೊರತೆ ಎದುರಾಗಲಿಲ್ಲ ಎಂದರು.
ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ.ಅಣ್ಣಪ್ಪ ಹಾಲಗಟ್ಟ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಗೌಡ ಸಿ.ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಆರ್.ಹುಲ್ತಿಕೊಪ್ಪ, ಪ.ಪಂ ಸದಸ್ಯರಾದ ಆಫ್ರಿನ್, ಸುಲ್ತಾನ ಬೇಗಂ, ಕೆ. ಮಂಜುನಾಥ್, ಚೌಟಿ ಚಂದ್ರಶೇಖರ್ ಪಾಟೀಲ್, ಹಳೆಸೊರಬ, ಸುಜಾತ ಜೋತಾಡಿ, ಹಬಿಬುಲ್ಲ ಇತರರಿದ್ದರು.
previous post
next post