ಮಗನಿಗೆ ಶಿವಮೊಗ್ಗದ ಕಾಲೇಜಿನಲ್ಲಿಯೇ ಗೌರ್‍ಮೆಂಟ್ ಸೀಟು ಸಿಗಬಹುದಾದ ಪರ್ಸಂಟೇಜ್ ಇತ್ತು. ಒಂದು ವೇಳೆ ಸಿಗದಿದ್ದರೆ ದೂರ ಹೋಗಬೇಕಾದೀತು ಎಂಬ ಅನುಮಾನದಿಂದ ಮ್ಯಾನೇಜ್‍ಮೆಂಟ್ ಕೋಟಾದಲ್ಲಿ ಸೀಟು ಪಡೆದು ಎಂಜನಿಯರಿಂಗ್ ಸೇರಿಸಿದ್ದರು. ಅಷ್ಟು ಅಕ್ಕರೆಯಲ್ಲಿ ಸಾಕಿದ್ದ ಮಗ ಇಂದು ಬಾರದ ಲೋಕಕ್ಕೆ ಹೋಗುತ್ತಾನೆ ಎಂದು ಆ ತಂದೆಗೆ ಗೊತ್ತಿರಲಿಲ್ಲ. ಆ ಹುಡುಗನಿಗೂ ಹಾಗೆ ತಾನು ತನ್ನ ಪುಸ್ತಕ ಮತ್ತು ಮನೆ ಮಂದಿ ಹೊರತಾಗಿ ಬೇರೇನೂ ಗೊತ್ತಿರಲಿಲ್ಲ. ಎಂಜನಿಯರಿಂಗ್ ಮುಗಿಸಿ ಕನಸು ಸಾಕಾರಗೊಳಿಸುತ್ತಾನೆ ಎಂದು ಕನಸು ಹೊತ್ತ ಹೆತ್ತವರಿಗೆ ಮಗ ಮರದಕೊಂಬೆಯಲ್ಲಿ ಶವವಾಗಿದ್ದನ್ನು ಕಂಡು ಆಕಾಶವೇ ಕಳಚಿ ಬಿದ್ದಂತಾಗಿದೆ. ಅಪ್ಪ -ಅಮ್ಮ ತಮ್ಮ ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಈ ದೃಶ್ಯವನ್ನು ನೋಡುತ್ತಿದ್ದ ಜನ ಕೇಳುತ್ತಿದ್ದ ಪ್ರಶ್ನೆ ದೇವ ಈ ಸಾವು ನ್ಯಾಯವೆ ಎಂಬುದಾಗಿತ್ತು.
ಇದು ರಿಪ್ಪನ್‍ಪೇಟ್ ಸಮೀಪದ ಹಾರೋಹಿತ್ತಲು ಗ್ರಾಮದ ಗೇರುಸರ ಯೋಗೇಂದ್ರ ನಾಯ್ಕ ಅವರ ಮಗ ಅರುಣ್ ಕುಮಾರ್ ಸಾವಿನ ಕರುಣಾಜನಕ ಕತೆ. ಶಿವಮೊಗ್ಗದ ಜೆಎನ್‍ಎನ್‍ಸಿಇ ಯಲ್ಲಿ ಎರಡನೇ ವರ್ಷದ ಎಂಜನಿಯರಿಂಗ್ ಓದುತ್ತಿದ್ದ ಅರುಣ್‍ಕುಮಾರ್ ಶವ ಶುಕ್ರವಾರ ಶೆಟ್ಟಿಕೆರೆ ಸಮೀಪದ ದುರ್ಗಮ ಕಾಡಿನಲ್ಲಿ ನೇಣುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಿಗೂಢ ಸಾವು
ಅರುಣ್‍ಕುಮಾರ್ ಸಾವು ನಿಗೂಢವಾಗಿದ್ದು, ಹೆಗಲಿಗೆ ಬ್ಯಾಗು, ಜೇಬಲ್ಲಿ ಮೊಬೈಲ್ ಎಲ್ಲವೂ ಹಾಗೇ ಇದೆ. ನೆಲದಿಂದ ಎರಡು ಅಡಿ ಎತ್ತರದಲ್ಲಿ ಮರದಕೊಂಬೆಯಲ್ಲಿ ನೇತಾಡುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಊರಿನಲ್ಲಿಯೇ ಆನ್ ಲೈನ್‍ನಲ್ಲಿ ಪಾಠ ಕೇಳುತ್ತಿದ್ದ ಅರುಣ್ ಕುಮಾರ್ ಅಲ್ಲಿ ನೆಟ್‍ವರ್ಕ್ ಸಮಸ್ಯೆಯಿಂದ ಶಿವಮೊಗ್ಗದ ಈಡಿಗರ ಹಾಸ್ಟೆಲ್‍ನಲ್ಲಿ ಉಳಿದುಕೊಂಡಿದ್ದ. ಬುಧವಾರ ಹಾಸ್ಟೆಲ್‍ನಿಂದ ಊರಿಗೆ ಹೋಗುವುದಾಗಿ ಹೇಳಿ ಹೋಗಿದ್ದ ಅತ್ತ ಊರಿಗೆ ಬರಲಿಲ್ಲ. ಮನೆಯವರೊಂದಿಗೆ ಸಂಪರ್ಕ ಕಳೆದುಕೊಂಡಿದ್ದರಿಂದ ಗಾಬರಿಯಾಗಿ ಮೊಬೈಲ್ ಲೊಕೇಷನ್ ಆಧಾರದ ಮೇಲೆ ಶೋಧನೆ ಮಾಡಿದಾಗ ಕಾಡಿನಲ್ಲಿ ಶವ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವಂತ ಯಾವ ಕಾರಣವೂ ಇಲ್ಲದ ಅರುಣ್‍ಕುಮಾರ್‍ನನ್ನು ಯಾರೊ ಕೊಲೆ ಮಾಡಿರಬಹುದು ಎಂಬ ಅನುಮಾನವನ್ನು ನೆರೆಹೊರೆಯವರು ವ್ಯಕ್ತಪಡಿಸಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿ
ಗಾಜನೂರು ಮೊರಾರ್ಜಿಶಾಲೆಯಲ್ಲಿ ಅಭ್ಯಾಸ ಮಾಡಿದ್ದ ಅರುಣ್‍ಕುಮಾರ್, ಉನ್ನತ ದರ್ಜೆಯಲ್ಲಿ ಪಾಸಾಗಿ ಶಿಕಾರಿಪುರದ ಮೊರಾರ್ಜಿ ದೇಸಾಯಿ ಕಾಲೇಜಿನಲ್ಲಿ ಕಲಿತು ಉನ್ನತ ಶ್ರೇಣಿಯಲ್ಲಿಯೇ ಪಾಸಾಗಿದ್ದ.
ಆ ಭಾಗಕ್ಕೆಲ್ಲ ಜಾಣ ಹುಡುಗ ಎಂದು ಕೀರ್ತಿ ಪಡೆದಿದ್ದ ಈ ಹುಡುಗ ಯಾರೊಂದಿಗೂ ಗಟ್ಟಿ ಮಾತಾಡುವವನೂ ಆಗಿರಲಿಲ್ಲ. ಸೂಕ್ಷ್ಮ ಸ್ವಭಾವದ ಅವನಿಗೆ ಇದ್ದದ್ದು ಓದುವುದು ಒಂದೇ ಗುರಿ. ಹೀಗಿದ್ದ ಹುಡುಗ ಸಾಯುವುದೇ ಆದರೂ ಊರ ಸಮೀಪವೇ ಸಾಕಷ್ಟು ಕಾಡಿತ್ತು. ಅದೂ ಮುಖ್ಯ ರಸ್ತೆಯಿಂದ ಎರಡು ಕಿ.ಮೀ. ದುರ್ಗಮ ಕಾಡಿನ ಒಳಗೆ ನಡೆದುಕೊಂಡು ನೇಣುಹಾಕಿಕೊಳ್ಳುತ್ತಿರಲಿಲ್ಲ ಎಂಬ ಅನುಮಾನ ಸಹಜವಾಗಿಯೇ ಮೂಡಿದೆ.
ಶಿವಮೊಗ್ಗ ಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್ ಅವರು ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ಮಹಜರು ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ಹುಡುಗನ ಸಾವಿಗೆ ಅಸಲಿ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ. ಕಾಲೇಜು ಮತ್ತು ಹಾಸ್ಟೆಲ್‍ನಲ್ಲಿ ಅವನ ಸಹವರ್ತಿಗಳು ಹಾಗೂ ಆತನ ಚಲನಚಲನಗಳ ತನಿಖೆ ಮಾಡಿದರೆ ಇನ್ನಷ್ಟು ಮಾಹಿತಿಗಳು ಗೊತ್ತಾಗಬಹದು. ಮಗ ಓದಿ ಮುಂದೆ ಎಲ್ಲರಿಗೂ ಆಸರೆಯಾಗುತ್ತಾನೆ. ಕುಟುಂಬಕ್ಕೆ ಮತ್ತು ಊರಿಗೆ ಕೀರ್ತಿ ತರುತ್ತಾನೆ ಎಂಬ ಕನಸು ಕಮರಿದೆ ಆದರೆ ಅವನ ಸಾವಿನ ನಿಜ ಕಾರಣ ತಿಳಿಯಬೇಕಿದೆ.
3 comments
“ಅರುಣ ಅಲ್ಲ ಅಜಾತ ಶತ್ರು”, ನೀನಿರುವಾಗ ಒಳ್ಳೆಯತನ ಬದುಕಿದೆ ಅಂತ ನಾವು ಮಾತಾಡ್ಕೊಂಡಿದ್ವಿ. ಒಂದೇಟು ಹೊಡುದ್ರೆ ಎರೆಡು ತಿರುಗಿಸಿ ಹೊಡಿಯೋ ಈ ಪ್ರಪಂಚದಲ್ಲಿ “ನಮಿಗೆಂತಕೆ ಜಗಳ” ಅಂತಿದ್ದೊನು, ನಿನ್ನ ಉಳಿಸಿ ಕೊಳ್ಳದ ಈ ಸಮಾಜ ಒಳ್ಳೆತನಕ್ಕೆ ಬೆಲೆ ಇಲ್ಲ ಅಂತ ತೋರಿಸಿದೆ.
ಮೊನ್ನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರವಾಯ್ತು,ಕೋರ್ಟ್ ಪಾಪಿಗಳಿಗೆ ಕೊಟ್ಟ ಶಿಕ್ಷೆ ಹತ್ತು ವರ್ಷ ಜೈಲು,ಆ ಕಚಡಾ ಗಳು ರಿಲೀಸಾಗಿ ಮತ್ತೆ ಬದುಕ್ತಾರೆ ಆದರೆ ಈ ಸಮಾಜ ನಿನ್ನನ್ನು ಬದುಕಲು ಬಿಡಲಿಲ್ಲ.ಇದರ ಅರ್ಥ ಒಳ್ಳೆಯತನ ಸತ್ತಿದೆ,”The Discovery” ಇಂಗ್ಲಿಷ್ ನಾಟಕದಲ್ಲಿ “ಏ ಕೊಲಂಬಸ್”ಎಂದ ಗುಲ್ಲೆರ್ಮೊ ನೀನು ,ಈ ನಾಟಕದ ಪ್ರಪಂಚದಲ್ಲಿ ನಿನ್ನ ಜೀವ ಸ್ನೇಹಿತರನ್ನ ಒಂಟಿ ಮಾಡಿ ಹೋಗಿದ್ದೀಯ,ನಿನ್ನೊಂದಿಗಿದ್ದ ಒಳ್ಳೆಯ ಸಮಯಗಳು ನಮ್ಮೆಲ್ಲರ ನೆನಪಿನಂಗಳದಲ್ಲಿರುತ್ತವೆ, ಶಾಶ್ವತವಾಗಿ.
ನೀನು ಇಲ್ಲ ಎಂದರೆ ಒಳ್ಳೆಯತನ ಇಲ್ಲ ಎಂದರ್ಥ,ಈ ಕೆಟ್ಟ ಪ್ರಪಂಚದ ತಾತ್ಕಾಲಿಕ ವಾಸಿಗಳಿಂದ ನಿನಗೆ ಕೊನೆಯ ವಿದಾಯ….
-ಇಂತಿ ನಿನ್ನ ಮಿತ್ರ