ವಿಧಾನಪರಿಷತ್‌ನಲ್ಲಿ ನಡೆದ ಘಟನೆ ದೇಶದ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಅಧ್ಯಾಯ.ಈ ಕೋಲಾಹಲಕ್ಕೆ ಬಿಜೆಪಿಯೇ ನೇರ ಕಾರಣ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ವಿಧಾನಪರಿಷತ್ ಸಭಾಪತಿಯವರನ್ನು ಕಲಾಪಕ್ಕೆ ಬರದಂತೆ ಬಾಗಿಲು ಮುಚ್ಚಿ ಅವರ ಅನುಮತಿ ಇಲ್ಲದೇ ಉಪಸಭಾಪತಿಗಳನ್ನು ಸಭಾಪತಿ ಪೀಠದ ಮೇಲೆ ಕೂರಿಸಿ ಕಲಾಪ ನಡೆಸಲು ಹೊರಟಿರುವ ಬಿಜೆಪಿ ಸದಸ್ಯರು ಹಾಡುಹಗಲೇ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂದು ದೂರಿದರು.
ಈ ಕೋಲಾಹಲಕ್ಕೆ ಬಿಜೆಪಿ ಕಾರಣವಾಗಿದ್ದರೂ ಸಹ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ಸಮರ್ಥಿಸಿಕೊಳ್ಳುತ್ತಿರುವುದು ಖಂಡನೀಯ ಎಂದರು.
ಕಾನೂನು ಸಚಿವ ಮಾಧುಸ್ವಾಮಿ ಅವರೇ ಖುದ್ದಾಗಿ ಸಭಾಪತಿ ಪೀಠದಲ್ಲಿ ಉಪಸಭಾಪತಿಗಳನ್ನು ಅಕ್ರಮವಾಗಿ ಕೂರಿಸಿ ಸದನದಲ್ಲಿ ಮಾರ್ಷಲ್‌ಗಳಿಗೆ ಧಮುಕಿ ಹಾಕಿದ್ದಾರೆ. ಸದನದಲ್ಲಿದ್ದ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹಾಗೂ ಕಾನೂನು ಸಚಿವರು ಈ ಘಟನೆಗೆ ನೇರ ಕಾರಣರಾಗಿರುವುದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಗ್ರಾ.ಪಂ ನಲ್ಲಿ ಹೆಚ್ಚಿನ ಸ್ಥಾನ:
ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಜಾತಿ ಮತ್ತು ಧರ್ಮದ ಮೇಲೆ ಮತ ಕೇಳದೇ ಸಾಧನೆಗಳನ್ನಿಟ್ಟುಕೊಂಡು ಮತ ಕೇಳುತ್ತಿದೆ. ಆದರೆ ಬಿಜೆಪಿ ಮಾತ್ರ ಜಾತಿ, ಧರ್ಮದ ಮೇಲೆ ಮತ ಕೇಳುತ್ತದೆ. ಮುಂದಿನ ದಿನಗಳಲ್ಲಿ ದೇಶದ ಐಕ್ಯತೆ ಮತ್ತು ಏಕಾಗ್ರತೆಗೆ ಬಿಜೆಪಿಯಿಂದ ಧಕ್ಕೆಯಾಗಲಿದೆ ಎಂದ ಅವರು, ಬಿಜೆಪಿ ಮುಖಂಡರು ಉದ್ದೇಶಪೂರಕವಾಗಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಾ ದೇಶದ ಮಾನಸಿಕ ಸ್ಥಿತಿ ಹಾಳುಮಾಡುತ್ತಿದ್ದಾರೆ ಎಂದು ದೂರಿದರು.
ಜಿಲ್ಲೆಯನ್ನು ಅಭಿವೃದ್ದಿಪಡಿಸುವಲ್ಲಿ ಬಿಜೆಪಿ ವಿಫಲರಾಗಿರುವುದರಿಂದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಪ್ರದಾನ ಕಾರ್ಯದರ್ಶಿ ಯು.ಶಿವಾನಂದ, ಬಾಬು ಉಪಸ್ಥಿತರಿದ್ದರು.
previous post
next post