ಎಲ್ಲಾ ಧರ್ಮಗಳ ಮೂಲ ಪುರುಷರ ಸಂದೇಶಗಳಲ್ಲಿಯೂ ಸಹಬಾಳ್ವೆಯ ಸಾರವಿದೆ. ಏಸು ಕ್ರಿಸ್ತ ದೇವರ ಮಗನಾದರೂ ಮನುಷ್ಯ ದೇಹದ ಅವರಿಗೆ ಶಿಲುಬೇಗೇರಿಸಿದವರನ್ನು ಅರಿಯದೆ ಮಾಡಿದ್ದಾರೆ ಎಂದು ಕ್ಷಮಿಸುತ್ತಾರೆ. ಇದರಲ್ಲಿ ಅವರು ಜಗತ್ತಿಗೆ ಸಾರಿದ್ದ ಪ್ರೇಮದ ಸಂದೇಶವಿದೆ ಎಂದು ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದಸ್ವಾಮೀಜಿ ಅಭಿಪ್ರಾಯಪಟ್ಟರು.
ಶಿವಮೊಗ್ಗ ಧರ್ಮಕ್ಷೇತ್ರ ಮತ್ತು ಎಸ್‍ಎಮ್‍ಎಸ್‍ಎಸ್‍ಎಸ್ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸಹಮಿಲನ ಕಾರ್ಯಕ್ರಮದಲ್ಲಿ ಅವರು ಆಶೀವರ್ಚನ ನೀಡಿದರು. ಏಸು ಕ್ರಿಸ್ತ ಜಗತ್ತಿಗೆ ಪ್ರೀತಿ ಹಂಚಿದ ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು ಎಂಬ ನಂಬಿಕೆ ಕ್ರೈಸ್ತರದು. ಈ ಸಮುದಾಯ ಸೇವೆಯಲ್ಲಿ,ತ್ಯಾಗದಲ್ಲಿ ಸುಖ ಕಾಣುತ್ತದೆ. ಬಸವಾದಿ ಶರಣರು ತಮ್ಮ ವಚನಗಳಲ್ಲಿ ಇದನ್ನೇ ಸಾರಿದ್ದಾರೆ. ಪರರ ಸುಖದಲ್ಲಿ ಶ್ರೇಯಸ್ಸಿದೆ ಎಂದು ಹೇಳಿದ ಶರಣರು, ಎಲ್ಲರೂ ನಮ್ಮವರೆಂದು ಕಾಣಿರೆಂಬ ಸಂದೇಶ ನೀಡಿದ್ದರು ಎಂದು ಹೇಳಿದರು.
ಅದ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಧರ್ಮಕ್ಷೇತ್ರದ ದರ್ಮಾಧ್ಯಕ್ಷ ಡಾ.ಪ್ರಾನ್ಸಿಸ್ ಸೆರಾವೊ ಎಸ್.ಜೆ ಅವರು ಮಾತನಾಡಿ, ಪರರ ನೋವನ್ನು ಯಾರು ಅರಿಯುತ್ತಾರೊ ಅವರು ಮನುಷ್ಯರಾಗುತ್ತಾರೆ. ದೇವರು ಮನುಷ್ಯರಾದ ದಿನವನ್ನು ಏಸುಕ್ರಿಸ್ತನ ಜಯಂತಿ ಎಂದು ಆಚರಿಸುತ್ತೇವೆ. ಯಾರು ಸೇವಾಮನೋಭಾವದಿಂದ ಪರರ ಸೇವೆ ಮಾಡುತ್ತಾರೊ ಅವರು ದೇವರನ್ನು ಕಾಣುತ್ತಾರೆ ಎಂದರು.
ನಮ್ಮ ಸಂಸ್ಥೆ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಹಿಳಾ ಸ್ವಯಂ ಸೇವಾ ಸಂಸ್ಥೆಗಳನ್ನು ಮಾಡಿಕೊಂಡು ಜನ ಸೇವೆ ಮಾಡುತ್ತಿದೆ. ಇಲ್ಲಿ ಜಾತಿ ಧರ್ಮದ ಭೇದ ಭಾವ ಇಲ್ಲ. ಎಲ್ಲ ಸಮುದಾಯ ಮತ್ತು ಜಾತಿಯವರನ್ನು ಸೋದರ ಭಾವದಿಂದ ಕಾಣಲಾಗುತ್ತಿದೆ. ಆ ಮೂಲಕ ದುರ್ಬಲ ಮಹಿಳೆಯರನ್ನು ಸಶಕ್ತರನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
ಸಂಸ್ಥೆ ನಿರ್ದೇಶಕ ಫಾ.ಕ್ಲಿಫರ್ಡ್ ರೋಶನ್ ಪಿಂಟೊ ಸಂಸ್ಥೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ ಭಾಗವಹಿಸಿದ್ದರು.
previous post
next post