Malenadu Mitra
ರಾಜ್ಯ ಶಿವಮೊಗ್ಗ

ಅರುಣ್ ಸಾವಿಗೆ ಯಾವ ಕಾರಣವಿತ್ತು ?

“ಅರುಣ ಅಲ್ಲ ಅಜಾತ ಶತ್ರು”, ನೀನಿರುವಾಗ ಒಳ್ಳೆಯತನ ಬದುಕಿದೆ ಅಂತ ನಾವು ಮಾತಾಡ್ಕೊಂಡಿದ್ವಿ. ಒಂದೇಟು ಹೊಡುದ್ರೆ ಎರೆಡು ತಿರುಗಿಸಿ ಹೊಡಿಯೋ ಈ ಪ್ರಪಂಚದಲ್ಲಿ “ನಮಿಗೆಂತಕೆ ಜಗಳ” ಅಂತಿದ್ದೊನು, ನಿನ್ನ ಉಳಿಸಿ ಕೊಳ್ಳದ ಈ ಸಮಾಜ ಒಳ್ಳೆತನಕ್ಕೆ ಬೆಲೆ ಇಲ್ಲ ಅಂತ ತೋರಿಸಿದೆ.
ಮೊನ್ನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರವಾಯ್ತು, ಕೋರ್ಟ್ ಆ ಪಾಪಿಗಳಿಗೆ ಕೊಟ್ಟ ಶಿಕ್ಷೆ ಹತ್ತು ವರ್ಷ ಜೈಲು,ಆ ಮತ್ತೆ ಬದುಕ್ತಾರೆ ಆದರೆ ಈ ಸಮಾಜ ನಿನ್ನನ್ನು ಬದುಕಲು ಬಿಡಲಿಲ್ಲ.ಇದರ ಅರ್ಥ ಒಳ್ಳೆಯತನ ಸತ್ತಿದೆ,”ಖಿhe ಆisಛಿoveಡಿಥಿ” ಇಂಗ್ಲಿಷ್ ನಾಟಕದಲ್ಲಿ “ಏ ಕೊಲಂಬಸ್”ಎಂದ ಗುಲ್ಲೆರ್ಮೊ ನೀನು ,ಈ ನಾಟಕದ ಪ್ರಪಂಚದಲ್ಲಿ ನಿನ್ನ ಜೀವ ಸ್ನೇಹಿತರನ್ನ ಒಂಟಿ ಮಾಡಿ ಹೋಗಿದ್ದೀಯ,ನಿನ್ನೊಂದಿಗಿದ್ದ ಒಳ್ಳೆಯ ಸಮಯಗಳು ನಮ್ಮೆಲ್ಲರ ನೆನಪಿನಂಗಳದಲ್ಲಿರುತ್ತವೆ, ಶಾಶ್ವತವಾಗಿ.
ನೀನು ಇಲ್ಲ ಎಂದರೆ ಒಳ್ಳೆಯತನ ಇಲ್ಲ ಎಂದರ್ಥ, ಈ ಕೆಟ್ಟ ಪ್ರಪಂಚದ ತಾತ್ಕಾಲಿಕ ವಾಸಿಗಳಿಂದ ನಿನಗೆ ಕೊನೆಯ ವಿದಾಯ….
-ಇಂತಿ ನಿನ್ನ ಮಿತ್ರ

.…ಇದು ಅಕಾಲಿಕವಾಗಿ ಅಗಲಿದ ಗೆಳೆಯ ಅರುಣ್ ಕುಮಾರ್ ಬಗ್ಗೆ ಆತನ ಮಿತ್ರನೊಬ್ಬ ಮಲೆನಾಡು ಮಿರರ್ “ಕಾಮೆಂಟ್ ಬಾಕ್ಸ್’ ನಲ್ಲಿ ಹಾಕಿದ್ದ ನೋವಿನ ನುಡಿ. ಈ ಮಾತುಗಳನ್ನು ಕೇಳಿದರೆ ಕಟುಕರ ಕಣ್ಣಾಲಿಗಳೂ ತೇವವಾಗುತ್ತವೆ. ಒಡನಾಡಿಯೊಬ್ಬ ಬಾರದೂರಿಗೆ ಹೋದ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟ. ಆ ಮಿತ್ರನ ಮಾತಿನಲ್ಲಿಯೇ ಅರುಣ್ ಕುಮಾರ್ ನಿರುಪದ್ರವಿ ಎಂಬುದು ಸ್ಪಷ್ಟವಾಗುತ್ತದೆ.
ಹೀಗಿದ್ದ ಹುಡುಗನ ಸಾವಿಗೆ ಕಾರಣ ಏನು ಎಂಬುದು ಮಾತ್ರ ಆ ದುರ್ಗಮ ಕಾಡಿನಷ್ಟೇ ನಿಗೂಢವಾಗಿದೆ. ಕುಟುಂಬದವರು ಇದೊಂದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಪೊಲೀಸರು ಮೇಲ್ಕೋಟಕ್ಕೆ ಇದೊಂದು ಆತ್ಮಹತ್ಯೆ ಎಂಬ ಸಂಶಯ ವ್ಯಕ್ತಮಾಡಿದ್ದಾರೆ. ಹಾಗಾದರೆ ಕೊಲೆಯಾದರೆ ಯಾರು ಮಾಡಿದರು ? ಆತ್ಮಹತ್ಯೆಯಾದರೆ ಯಾವ ವ್ಯವಸ್ಥೆ ಬೆಳೆಯುವ ಕುಡಿಯನ್ನು ಈ ಅವಸ್ಥೆಗೆ ತಳ್ಳಿತು ಎಂಬುದು ಈಗ ಸುಳಿದಾಡುತ್ತಿರುವ ಪ್ರಶ್ನೆಯಾಗಿದೆ.
ಅರುಣ್ ಬುಧವಾರ ಬೆಳಗ್ಗೆಯಿಂದ ಪೋಷಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಅರುಣ್ ಡಿ.16 ರಂದು ಬೆಳಗ್ಗೆ 9.30ಕ್ಕೆ ಆನ್‍ಲೈನ್ ಕ್ಲಾಸ್‍ಗೆ ಲಾಗಿನ್ ಆಗಿ ಮತ್ತೆ ಲೆಫ್ಟ್ ಆಗಿದ್ದಾನೆ. ಶವವಾಗಿ ಸಿಕ್ಕಿದ ಅರುಣ್ ಜೇಬಲ್ಲಿ ಅದೇ ದಿನ ಅದೇ ಹೊತ್ತಿನಲ್ಲಿ ತೆಗೆಸಿದ ಬಸ್ ಟಿಕೆಟ್ ಕೂಡಾ ಪತ್ತೆಯಾಗಿದೆ.
ಬ್ಯಾಗ್‍ನಲ್ಲಿ ಏನಿತ್ತು?
ಅರುಣ್ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಿಕ್ಕಾಗ ಬಗಲಲ್ಲಿ ಕಾಲೇಜು ಬ್ಯಾಗ್ ಇತ್ತು. ಅದರಲ್ಲಿ ಇನ್ನೂ ಚಾರ್ಜ್ ಇದ್ದ ಮೊಬೈಲ್ ಇತ್ತು. ಜತೆಗೆ ಬ್ಯಾಗಲ್ಲಿ ಒಂದಷ್ಟು ಹಗ್ಗಗಳೂ ಇದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಂದರೆ ಆ ಹಗ್ಗ ಗಟ್ಟಿ ಇರದ ಕಾರಣ ಹೊಸದಾಗಿ ಬಿಣಿ ಹಗ್ಗ ಖರೀದಿಸಿರಬಹುದು ಎಂಬುದು ಪೊಲೀಸರ ಅನುಮಾನ. ನೇಣು ಹಾಕಿಕೊಂಡ ಸ್ಥಳದಲ್ಲಿ ಮರದ ತುಂಡೊಂದನ್ನು ಇಟ್ಟುಕೊಂಡು ಅದನ್ನು ಕಾಲಿನಲ್ಲಿ ದಬ್ಬಿರಬಹುದಾದ ಸಂಕೇತಗಳೂ ಇವೆ ಎಂದು ಸ್ಥಳಪರಿಶೀಲಿಸಿದ ಪೊಲೀಸರು ಶಂಕೆ ವ್ಯಕ್ತಮಾಡಿದ್ದಾರೆ.
ಯಾವ ಒತ್ತಡ ಇತ್ತು?
ಅರುಣ್ ಕುಮಾರ್ ಮೊದಲಿಂದಲೂ ಮಾದರಿ ವಿದ್ಯಾರ್ಥಿ. ಕಾಲೇಜಿನಲ್ಲಿ ಇತೀಚೆಗೆ ನಡೆದಿದ್ದ ಟೆಸ್ಟ್‍ನಲ್ಲಿಯೂ ಉತ್ತಮ ಅಂಕ ಗಳಿಸಿದ್ದ ಎನ್ನಲಾಗಿದೆ. ಅದೇ ರೀತಿ ಪ್ರಾಕ್ಟಿಕಲ್ ಮತ್ತು ಥಿಯರಿ ಎಲ್ಲದರಲ್ಲೂ ನೋಟ್ಸ್, ಕ್ಲಾಸ್ ವರ್ಕ್ ಎಲ್ಲದರಲ್ಲೂ ಕರಾರುವಕ್ಕಾಗಿದ್ದ ಎಂದು ಆತನ ಸಹಪಾಠಿಗಳು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಾಲೇಜುಗಳಲ್ಲಿ ಗಾಂಜಾ ಇತ್ಯಾದಿ ಮಾದಕ ವಸ್ತುಗಳ ಹಾವಳಿ ಇದೆ. ಈ ರೀತಿಯ ಹವ್ಯಾಸ ಇರುವ ಹುಡುಗರಿಂದ ರ್ಯಾಗಿಂಗ್ ಏನಾದ್ರು ಆಗಿತ್ತಾ ಎಂಬ ನೆಲೆಯಲ್ಲಿಯೂ ಪೊಲೀಸರು ತನಿಖೆ ನಡೆಸುವ ಚಿಂತನೆಯಲ್ಲಿದ್ದಾರೆ. ಆತನ ದೇಹದ ಮೇಲೆ ಯಾವುದೇ ಗಾಯವಾಗಿರುವ ಬಾಹ್ಯ ಗುರುತುಗಳು ಇರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಾಸ್ಟೆಲ್ ನಲ್ಲಿ ಯಾವ ರೀತಿಯ ಹುಡುಗರಿದ್ದರು. ಅಲ್ಲಿ ಏನಾದರೂ ವ್ಯತ್ಯಾಸಗಳಾಗಿದ್ದವಾ ಎಂಬ ದಿಕ್ಕಿನಲ್ಲಿಯೂ ತನಿಖೆ ನಡೆಯಲಿದೆ. ಅರುಣ್ ಕುಮಾರ್ ಮೊಬೈಲ್ ಆನ್ ಮಾಡುವ ಪ್ರಯತ್ನ ತನಿಖಾಧಿಕಾರಿಗಳಿಂದ ನಡೆಯುತ್ತಿದ್ದು, ಅದರಲ್ಲಿ ಒಂದಷ್ಟು ಮಾಹಿತಿಗಳು ಸಿಗಬಹುದು ಎನ್ನಲಾಗಿದೆ.
ಈ ನಡುವೆ ಬುಧವಾರ ಸಂಜೆ ಸೂಡೂರು ಗೇಟ್ ಬಳಿ ಅಪರಿಚಿತ ಕಾರೊಂದು ನಿಂತಿತ್ತು, ಅಲ್ಲಿನ ಫಾರೆಸ್ಟ್ ತನಿಖಾ ಠಾಣೆಯಲ್ಲಿನ ಸಿಸಿಟಿವಿ ಪರಿಶೀಲಿಸಿದರೆ ಒಂದಷ್ಟು ಸುಳಿವು ಸಿಗಬಹುದು ಎಂಬ ವದಂತಿಗಳೂ ಕೇಳಿಬರುತ್ತಿವೆ.
ಏನೇ ಆದರೂ ಹೆತ್ತವರ ಆ ಕನಸು ಮತ್ತೆ ಸಿಗಲಾರದು, ಈ ಸಾವಿಗೆ ಅಸಲಿ ಕಾರಣ ಏನು? ಮತ್ತು ಯಾವ ವ್ಯವಸ್ಥೆ ಬೆಳೆಯುವ ಕುಡಿಯನ್ನು ಸಾವಿನ ಕೂಪಕ್ಕೆ ತಳ್ಳಿತು ಎಂಬುದರ ತನಿಖೆಯಾಗಬೇಕಿದೆ.

Ad Widget

Related posts

ಜಿ.ಪಂ.ಸದಸ್ಯರಿಗೆ ಸಚಿವರ ಅಭಿನಂದನೆ

Malenadu Mirror Desk

ಸಾರಿಗೆ ನೌಕರರ ಬೇಡಿಕೆ ಈಡೇರಿಸಿ: ರೈತ ಸಂಘ ಆಗ್ರಹ

Malenadu Mirror Desk

ಕೊರೋನ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸಂಕಲ್ಪ : ಕೆ.ಎಸ್‌.ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.