ಶಿವಮೊಗ್ಗ : ಮಂಗಳವಾರ ನಡೆಯಲಿರುವ ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಶಿವಮೊಗ್ಗ ನಗರದ ಎನ್‍ಎಸ್‍ಇ ಆವರಣದಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.
ಮೊದಲ ಹಂತದಲ್ಲಿ ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿಗಳಲ್ಲಿ ಹಾಗೂ ಡಿಸೆಂಬರ್ 27ರಂದು ಎರಡನೇ ಹಂತದಲ್ಲಿ ಸಾಗರ, ಶಿಕಾರಿಪುರ, ಸೊರಬ ಮತ್ತು ಹೊಸನಗರ ಗ್ರಾಮ ಪಂಚಾಯತಿಗಳಲ್ಲಿ ಮತದಾನ ನಡೆಯಲಿದೆ. ಮತದಾನ ಬೆಳಿಗ್ಗೆ 7ಗಂಟೆಯಿಂದ ಸಂಜೆ 5ರವರೆಗೆ ನಡೆಯಲಿದೆ. ಚುನಾವಣಾ ಆಯೋಗ ನಿಗದಿಪಡಿಸಿರುವ ಭಾವಚಿತ್ರವಿರುವ ಯಾವುದೇ ಗುರುತಿನ ಚೀಟಿಯನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ ಎಂದು ಹೇಳಿದರು.
ಮೊದಲ ಹಂತದ ಚುನಾವಣೆಯನ್ನು ಸುಗಮವಾಗಿ ನಡೆಸಲು ಒಟ್ಟು 2616 ಮತಗಟ್ಟೆ ಅಧಿಕಾರಿ ಹಾಗೂ ಮತಗಟ್ಟೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಒಟ್ಟು 956, ಭದ್ರಾವತಿ 816 ಮತ್ತು ತೀರ್ಥಹಳ್ಳಿಯಲ್ಲಿ ಒಟ್ಟು 844 ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಚುನಾವಣಾ ಕಾರ್ಯಕ್ಕಾಗಿ ಒಟ್ಟು 222 ವಾಹನಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದರು.
ಮತದಾರರ ವಿವರ:
ಶಿವಮೊಗ್ಗ ತಾಲೂಕಿನ 40 ಗ್ರಾಮ ಪಂಚಾಯತ್‍ಗಳಲ್ಲಿ 457 ಸ್ಥಾನಗಳಿದ್ದು 223 ಮತಗಟ್ಟೆಗಳಿವೆ. ಭದ್ರಾವತಿ ತಾಲೂಕಿನ 35 ಗ್ರಾ.ಪಂಗಳ 419 ಸ್ಥಾನಗಳಿದ್ದು 199ಮತಗಟ್ಟೆಗಳಿವೆ. ತೀರ್ಥಹಳ್ಳಿ ತಾಲೂಕಿನ 38 ಗ್ರಾಮ ಪಂಚಾಯತ್‍ಗಳಲ್ಲಿ 336ಸ್ಥಾನಗಳಿಗೆ ಮತದಾನ ನಡೆಯಲಿದ್ದು, 193ಮತಗಟ್ಟೆಗಳಿವೆ.
ಶಿವಮೊಗ್ಗ ತಾಲೂಕಿನಲ್ಲಿ 69860 ಪುರುಷ ಮತದಾರರು, 70212 ಮಹಿಳಾ ಮತದಾರರು ಸೇರಿ 140072 ಮತದಾರರು ಇದ್ದಾರೆ. ಭದ್ರಾವತಿ ತಾಲೂಕಿನಲ್ಲಿ 58783 ಪುರುಷ, 60442 ಮಹಿಳೆಯರು ಸೇರಿ 119225 ಮತದಾರರು ಇದ್ದಾರೆ. ತೀರ್ಥಹಳ್ಳಿಯಲ್ಲಿ 54076 ಪುರುಷ, 55314 ಮಹಿಳೆಯರು ಸೇರಿ 109390 ಮತದಾರರು ಮತದಾರರು ಇದ್ದಾರೆ. ಒಟ್ಟಾರೆಯಾಗಿ ಮೊದಲ ಹಂತದಲ್ಲಿ 183911ಪುರುಷರು ಮತ್ತು 187476 ಮಹಿಳೆಯರು ಸೇರಿ 371387 ಮಂದಿ ಮತದಾನ ಮಾಡಲಿದ್ದಾರೆ ಎಂದು ಹೇಳಿದರು.
ಮತ ಎಣಿಕೆ: ಮತ ಎಣಿಕೆ ಕಾರ್ಯ ಡಿಸೆಂಬರ್ 30ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಶ್ರೀ.ಹೆಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಶಿವಮೊಗ್ಗ, ಸಂಚಿ ಹೊನ್ನಮ್ಮ ಬಾಲಕಿಯರ ಕಾಲೇಜು ಭದ್ರಾವತಿ, ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ತೀರ್ಥಹಳ್ಳಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಿ.ಎಚ್.ರಸ್ತೆ ಸಾಗರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಹೊಸನಗರದಲ್ಲಿ ಮತ ಎಣಿಕೆ ನಡೆಯಲಿದೆ ಎಂದರು.