ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆಂತರಿಕ ಭದ್ರತಾ ವಿಭಾಗ ಎಂಬುದೊಂದು ಇದೆ ಎಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಕಾರಣ ಇಷ್ಟೆ ಆ ಇಲಾಖೆಗೆ ಅಂತಹ ವಿಶೇಷ ಸೌಲತ್ತುಗಳೂ ಇಲ್ಲ.ಹೆಚ್ಚೇಕೆ ಕೇಸು ಹಾಕುವ ಅಧಿಕಾರವೂ ಇಲ್ಲ. ಈಗಿನ ಲೋಕಾಯುಕ್ತ ಪೊಲೀಸರ ಕತೆಯೂ ಅದೇ ಅನ್ನಿ. ಆದರೆ ಶಿವಮೊಗ್ಗ ಆಂತರಿಕ ಭದ್ರತಾ ವಿಭಾಗದ ಸಿಪಿಐ ಕಚೇರಿ ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ.
ಮೊನ್ನೆ ಸಾಗರಕ್ಕೆ ಬಂದಿದ್ದ ಹಿಂದಿನ ಬೆಂಗಳೂರು ಕಮೀಷನರ್ ಹಾಗೂ ಈಗಿನ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಡಾ.ಭಾಸ್ಕರ್ ರಾವ್ ದಿಢೀರನೆ ಶಿವಮೊಗ್ಗದ ಡಿಎಆರ್ ಆವರಣದಲ್ಲಿರುವ ತಮ್ಮ ಇಲಾಖೆ ಕಚೇರಿಗೆ ಬಂದಿದ್ದಾರೆ. ಅಲ್ಲಿನ ಅವ್ಯವಸ್ಥೆ ,ಕರ್ತವ್ಯ ಲೋಪ ನೋಡಿ ಈ ಕಚೇರಿ ಇದ್ದರೂ ಒಂದೆ ಇರದೇ ಇದ್ದರೂ ಒಂದೇ ಎಂದು ಕಚೇರಿಗೆ ಬೀಗ ಜಡಿದು ಬೀಗದ ಕೀಲಿ ಕಿಸೆಲಿಟ್ಟುಕೊಂಡು ಬೆಂಗಳೂರಿಗೆ ಹೋಗಿದ್ದಾರಂತೆ.
ಶಿವಮೊಗ್ಗದ ಕಚೇರಿಯಲ್ಲಿ ಒಬ್ಬರು ಇನ್ಸ್ಪೆಕ್ಟರ್, ಐದು ಮಂದಿ ಸಿಬ್ಬಂದಿ ಇದ್ದಾರೆ. ಅವರೂ ಏನೊಂದೂ ಕೆಲಸ ಮಾಡಿಲ್ಲ. ಯಾವ ಕೇಸೂ ಹಾಕಿಲ್ಲ ಎಂದು ಗರಂ ಆದ ಎಡಜಿಪಿ ಸಾಹೇಬರು ಈ ಕಠಿಣ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.
ಅಸಲಿಗೆ ಶಿವಮೊಗ್ಗ ಕಚೇರಿಗೆ ಒಂದು ಕಂಪ್ಯೂಟರ್ ಸಹ ಇಲ್ಲ. ಯಾರನ್ನಾದರೂ ಹಿಡಿದರೆ ತನಿಖೆಗೆ ಪ್ರತ್ಯೇಕ ಕೋಣೆಯೂ ಇಲ್ಲ. ಶಸ್ತಾçಸ್ತçಗಳನ್ನಂತೂ ಕೇಳಲೇ ಬೇಡಿ. ಇಲಾಖೆಯ ವ್ಯವಸ್ಥೆಗೆ ತಕ್ಕನಾಗಿ ಸಿಬ್ಬಂದಿಗಳೂ ಆರಾಮ್ ಕಾಲ ಕಳೆದಿದ್ದಾರೆ. ಈ ಕಾರಣಕ್ಕಾಗಿಯೇ ಹಿರಿಯ ಅಧಿಕಾರಿ ಕಚೇರಿಗೆ ಬೀಗ ಜಡಿದಿದ್ದಾರೆ. ಆಂತರಿಕ ಭದ್ರತಾ ವಿಭಾಗಕ್ಕೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜವಾಬ್ದಾರಿಯುತ ಕೆಲಸಗಳಿವೆ. ಹೇಳಿ ಕೇಳಿ ಶಿವಮೊಗ್ಗ ಕೋಮುಗಲಬೆಗೆ ಹೆಸರುವಾಸಿ ಇಂತಹ ಊರಿನಲ್ಲಿ ನಿಷ್ಕಿçಯವಾಗಿರುವ ತಮ್ಮ ಡಿಪಾರ್ಟಮೆಂಟ್ ಬಗ್ಗೆ ಭಾಸ್ಕರ್ ರಾವ್ ಕೋಪತಾಪ ತಾಳಿದ್ದು ಸರಿಯಾಗಿಯೇ ಇದೆ ಅಲ್ಲವೆ ? ಇನ್ನು ಸಾಹೇಬರು ಬೀಗ ಜಡಿದಿದ್ದರಿಂದ ಇಲ್ಲಿನ ಸಿಬ್ಬಂದಿಗಳು ಕಚೇರಿಗೆ ಹೋಗಲಾಗದೆ ಪರದಾಡುತ್ತಿದ್ದಾರೆ.