ಕಣ್ಣಾಮುಚ್ಚಾಲೆ ಆಡು ವಾಗ ಅವರ್‍ಬಿಟ್ಟು…ಇವರ್‍ಬಿಟ್.. ಅವರ್‍ಯಾರು ಎಂದು ಮಕ್ಕಳು ಕೇಕೆ ಹಾಕುತ್ತಾರೆ. ನಮ್ಮ ಶಿವಮೊಗ್ಗದ ಪ್ರತಿಷ್ಠಿತ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಇಂತಹದೊಂದು ಸನ್ನಿವೇಶ ನಿರ್ಮಾಣವಾಗಿದೆ. ಇಲ್ಲಿ ಯಾರ ಮೇಲೆ ಯಾವ ಹೊತ್ತಿಗೆ ಲವ್‌ಲೆಟರ್ ಹೊರ ಬೀಳುತ್ತೊ ಅನ್ನೋ ಹಂಗಾಗಿದೆ. ಇದು ಪ್ರೇಮ ಪತ್ರದ ಕತೆಯಲ್ಲ. “ತಾ ಕಳ್ಳ ಪರರ ನಂಬಲಾರ’ ಎಂಬ ಗಾದೆ ಮಾತಿನಂತೆ ಆಸ್ಪತ್ರೆಯ ವೈದ್ಯರು ಯಾರದ್ದೋ ಹೆಸರಲ್ಲಿ ಮೇಲಧಿಕಾರಿಗಳಿಗೆ ದೂರು ನೀಡುತ್ತಿದ್ದಾರೆ.
ಮೊದಲಿಂದಲೂ ವೈದ್ಯಕೀಯ ಕಾಲೇಜು ಆಡಳಿತದ ಮೇಲೆ ಹಿಡಿತ ಸಾಧಿಸುವಲ್ಲಿ ಪ್ರಮುಖ ರಾಜಕೀಯ ನಾಯಕರ ನಡುವೆ ಪೈಪೋಟಿ ನಡೆಯುತ್ತಲೇ ಇದೆ. ಹಿಂದೆ ಸಿಮ್ಸ್ ನಿರ್ದೇಶಕರಾಗಿದ್ದ ಡಾ.ಲೇಪಾಕ್ಷಿ ಅವರ ಮೇಲೆ ಅಂತಹ ಗುರುತರ ಆರೋಪಗಳು ಇಲ್ಲದಿದ್ದರೂ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಈಗಲೂ ಅಲ್ಲಿನ ಆಡಳಿತದ ಮೇಲೆ “ಹಸ್ತ’ಕ್ಷೇಪ ಅಲ್ಲಲ್ಲ… “ಕಮಲ’ಕ್ಷೇಪ…ನಡೆದೇ ಇದೆ. ಆದರೆ ಈಗಿನ ಬೆಳವಣಿಗೆ ಮಾತ್ರ ತೀರಾ ಮಕ್ಕಳಾಟದಂತೆ ಕಾಣುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಗುರುವಾರ ನಡೆದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯ ವೈದ್ಯರೊಬ್ಬರು ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ. ಕೊರೊನ ವಾರ್ಡ್‌ನತ್ತ ಮುಖ ಹಾಕುತ್ತಿಲ್ಲ ಎಂಬ ಪತ್ರ ಸ್ವತಃ ಸಚಿವರ ಮೊಬೈಲ್ ಗೆ ಹೋಗಿದೆಯಂತೆ. ಸಭೆಯಲ್ಲಿಯೇ ಸಚಿವರು ಡಾ.ಗಂಗಾಧರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ನೀವು ವೈದ್ಯರ ಬಗ್ಗೆ ಪತ್ರಬರೆದಿದ್ದೀರಲ್ಲಾ ಎಂದು ಕೇಳಿದ್ದಾರೆ. ಆ ಕಡೆಯಿಂದ ಗಾಬರಿಗೊಂ ಡ ಡಾ.ಗಂಗಾಧರಪ್ಪ ಅವರು, ಇಲ್ಲ ..ಸಾರ್ ನಾನು ಆ ರೀತಿಯ ಯಾವುದೇ ಪತ್ರ ಬರೆದಿಲ್ಲ ಎಂದು ಉತ್ತರಿಸಿದ್ದಾರೆ. ಸಚಿವರಿಗೆ ಗಂಗಾಧರ್ ಹೆಸರಲ್ಲಿ ಬಂದಿದ್ದ ಪತ್ರದಲ್ಲಿ ಡಾ.ಸುಶೀಲ್ ಕುಮಾರ್ ಅವರು ಕೆಲಸ ಮಾಡುತ್ತಿಲ್ಲ ಎಂದು ಬರೆಯಲಾಗಿತ್ತು.
ಅದೇ ಸಭೆಯಲ್ಲಿ ಹಾಜರಿದ್ದ ಡಾ.ಶ್ರೀಧರ್, ಮೆಗ್ಗಾನ್‌ನಲ್ಲಿ ಈ ರೀತಿಯ ಅನಾಮಧೇಯ ಮತ್ತು ಬೇರೆಯವರ ಹೆಸರಲ್ಲಿ ಪತ್ರ ಬರೆಯು ವುದು ಮಾಮೂಲಿಯಾಗಿದೆ. ಇದರಿಂದ ನಿಜವಾಗಿ ಕೆಲಸ ಮಾಡುವವರಿಗೂ ಕಿರಿಕಿರಿಯಾ ಗುತ್ತಿದೆ ಎಂದರು. ತಕ್ಷಣ ಸಿಮ್ಸ್ ನಿರ್ದೇಶಕರಿಗೆ ಪೋನಾಯಿಸಿ ಈ ಪತ್ರ ಎಂಬ ಗುಪ್ತಗಾಮಿನಿಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸೂಚಿಸಿದರು.
ಸಿಪಿಐ ವಿರುದ್ಧವೂ ಪತ್ರ: ಶಿವಮೊಗ್ಗದಲ್ಲಿ ಉಸ್ತುವಾರಿ ಸಚಿವರ ಆಪ್ತರಾದ ದೊಡ್ಡಪೇಟೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ವಸಂತ್‌ಕುಮಾರ್ ವಿರುದ್ಧವೂ ಡಿಜಿಪಿಗೆ ಪತ್ರವೊಂದು ಹೋಗಿದೆ ಯಂತೆ. ಅದೂ ಮೆಗ್ಗಾನ್ ಆಸ್ಪತ್ರೆಯ ಎಂ.ಎಸ್ ಆಗಿರುವ ಶ್ರೀಧರ್ ಹೆಸರಲ್ಲಿ. ಈ ಸ್ಪಷ್ಟನೆ ನೀಡಿರುವ ಶ್ರೀಧರ್ ನಾನು ವಸಂತ್‌ಕುಮಾರ್ ವಿರುದ್ಧ ಯಾವುದೇ ಪತ್ರ ಬರೆದಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಹೇಳಿದರು.
ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಈ ರೀತಿಯ ಪತ್ರವ್ಯಾಮೋಹ ಹೊಸತೇನಲ್ಲ. ಹಿಂದಿನ ನಿರ್ದೇಶಕ ಡಾ.ಲೇಪಾಕ್ಷಿ ಹೆಸರನ್ನೇ ನಕಲಿ ಮಾಡಿ ಪತ್ರ ಬರೆಯಲಾಗಿತ್ತು. ಆಗಲೂ ಕೂಡಾ ಪೊಲೀಸ್ ದೂರು ದಾಖಲಿಸಲಾಗಿತ್ತು. ಜಾತಿ, ಪ್ರಭಾವ ಇತ್ಯಾದಿ ಕಾರಣಕ್ಕೆ ತಮ್ಮ ಆಪ್ತವಲಯದ ಅಧಿಕಾರಿಗಳನ್ನೇ ಅಧಿಕಾರಸ್ಥ ರಾಜಕಾರಣಿಗಳು ಜಿಲ್ಲೆಗೆ ಹಾಕಿಸಿಕೊಂಡಿದ್ದಾರೆ. ಈಗ ಅವರಲ್ಲಿಯೇ ಪೈಪೋಟಿ ಬಿದ್ದು, ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುವ ಉದ್ದೇಶ ದಿಂದ ಈ ಪತ್ರ ಮಾರ್ಗ ಕಂಡುಕೊಂಡಿದ್ದಾರೆ ಎಂಬ ಅನುಮಾನ ಅಧಿಕಾರಿಗಳ ವಲಯದಲ್ಲಿ ಸುಳಿದಾಡುತ್ತಿದೆ.
previous post
next post
2 comments
ನೇರಿಗೆಯವರ ನೇತೃತ್ವದ ” ಮಲೆನಾಡು ಮಿರರ್” ಆನ್ ಲೈನ್ ಪತ್ರಿಕೆಗೆ ಶುಭಾಶಯಗಳು
Thank you sir