ಹೆಣ್ಣು ಹಾಗೆನೇ ತಾನು ಒಮ್ಮೆ ನಂಬಿದರೆ ಮುಗೀತು ಜಗತ್ತೇ ಎದುರಾದರೂ ಸೆಟೆದು ನಿಲ್ತಾಳೆ….ಅದೇ ಆ ನಂಬಿಕೆಯಲ್ಲಿ ದ್ರೋಹವಾದರೆ ಆಕೆ ಜಗತ್ತನ್ನೇ ತೊರೆದು ಬಿಡ್ತಾಳೆ. ನಿನಗೆ ನನ್ನದೆಲ್ಲವೂ ಧಾರೆ ಎರೆದೆ ಬದುಕಲು ನನಗೇನು ಉಳಿದಿದೆ ಇಲ್ಲಿ ?, ಆ ಹುಡುಗಿಯ ಈ ಆರ್ದ್ರತೆ ಕೇಳಿದರೆ ಈ ಗಂಡಸು ಕುಲಕ್ಕೇ ಶಾಪ ಹಾಕಬೇಕೆನಿಸುತ್ತದೆ. ಹೌದು ಡಿ.೧೫ ರಂದು ಶಿವಮೊಗ್ಗ ಹರಿಗೆಯಲ್ಲಿ ಕಾರ್ತಿಕ್ ಎಂಬ ಹುಡುಗನ ಕೊಲೆಯಾಗುತ್ತದೆ. ಅದಕ್ಕೂ ಕೇವಲ ಮೂರೇ ದಿನ ಮೊದಲು ಅಮೃತಾ ಎಂಬ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ, ಅದೇ ಅಮೃತ ಎಂಬ ನಿರ್ಭಾಗ್ಯ ಹೆಣ್ಣಿನ ನೋವಿನ ಕತೆ ಇದು.
ತನ್ನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಆ ಹೆಣ್ಣುಮಗಳು ತಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡಿದ್ದ ಹುಡುಗನೊಂದಿಗೆ ನಡೆಸಿದ್ದ ದೂರವಾಣಿ ಸಂಭಾಷಣೆ ಕೇಳಿದರೆ ಕರುಳು ಚುರ್ ಎನ್ನುತ್ತದೆ. ಪ್ರೀತಿಸಿದ ಹುಡುಗ ತನಗೆ ದೋಖಾ ಮಾಡಿ ಬೇರೊಂದು ಕಡೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಎಂಬ ಸತ್ಯಸಂಗತಿ ತಿಳಿಯುತ್ತಿದ್ದಂತೆ. ಅಮೃತ ಕಾರ್ತಿಕ್‌ಗೆ ಕೇಳುವ ಪ್ರಶ್ನೆ ಯಾವುದು ಗೊತ್ತಾ? ಯಾಕೆ ನನ್ನನ್ನು ಬಿಟ್ಟೆ ಎಂಬುದು. ಅದಕ್ಕೆ ಆತ ಕೊಡುವ ಉತ್ತರ “ನಿನ್ನ ಅನಾರೋಗ್ಯ.’ ಇಷ್ಟು ದಿನ ನನ್ನನ್ನು ಪ್ರೀತಿಸಿದೆ, ನನ್ನದೆಲ್ಲವೂ ಪಡೆದೆ.. ಆಗ ಕಾಣದ ಅನಾರೋಗ್ಯ ನನ್ನಲ್ಲಿ ನಿನಗೆ ಈಗ ಕಂಡಿತಾ ಎಂದು.
ಮುಂದುವರಿದು ನಡೆವ ಸಂಭಾಷಣೆಯಲ್ಲಿ ಅಮೃತ ಸಾಯಲು ನಿರ್ಧರಿಸಿದ್ದಾಳೆ ಎಂಬ ಸುಳಿವಿತ್ತು. ಆದರೆ ನಿರ್ಧಯಿ ಕಾರ್ತಿಕ್‌ಗೆ ಅದರ ಅರಿವಾಗಲಿಲ್ಲ. ನೀನು ಬೇರೆಯವರನ್ನು ಮದುವೆಯಾಗು ಎನ್ನುವ ಕಾರ್ತಿಕ್‌ಗೆ ಅಮೃತ ಹೇಳುವ ಉತ್ತರ ಏನು ಗೊತ್ತಾ?, ನಾನು ನಿನ್ನೊಂದಿಗೆ ಕಳೆದ ಕ್ಷಣಗಳು ನನ್ನ ಎದೆಯಲ್ಲಿರುವಾಗ ಇನ್ನೊಬ್ಬರನ್ನು ಕಟ್ಟಿಕೊಂಡು ಅವರಿಗೇನು ನ್ಯಾಯ ಕೊಡಬಲ್ಲೆ, ನೀನು ಗಂಡಸು… ನಿನಗೆ ಅವ್ರಬಿಟ್ ಇವ್ರು..ಇವ್ರು ಬಿಟ್ ಅವ್ರು ಅಭ್ಯಾಸ ಇರಬಹುದು. ಆದರೆ ನಾನು ನಿನ್ನನ್ನೇ ನಂಬಿದ್ದು ಎನ್ನುವ ಮಾತಿನಲ್ಲಿದ್ದ ಪ್ರಾಮಾಣಿಕತೆ ಅರ್ಥಮಾಡಿಕೊಳ್ಳದ ಕಾರ್ತಿಕ್ ಆಕೆಯ ಯಾವ ಮನವಿಗೂ ಸ್ಪಂದಿಸದಿರುವುದು ಸಂಭಾಷಣೆಯಲ್ಲಿ ಗೊತ್ತಾಗುತ್ತದೆ.
ಅವಳಿಗೂ ಮೋಸ ಮಾಡಬೇಡ:
ನಾನು ನಿನ್ನನ್ನೇ ಮದುವೆಯಾಗಬೇಕೆಂದು ಹಠ ಮಾಡಿ, ನಿಮ್ಮನೆತನಕ ಬರಬಹುದು. ಆದರೆ ಈಗ ನಿನಗೆ ಎಂಗೇಜ್‌ಮೆAಟ್ ಆಗಿದೆ ಅಂತಿದಿಯ. ಆದರೆ ಒಂದು ಮಾತು ಹೇಳ್ತೀನಿ. ಮದುವೆಗೆ ಮುಂಚೆ ಅವಳೊಂದಿಗೆ ಸುತ್ತಾಡಬೇಡ, ಸಲುಗೆ ಬೆಳೆಸಿಕೊಳ್ಳಬೇಡ ಏಕೆಂದರೆ ಕೊನೆಗೊಂದು ದಿನ ಅವಳಿಗೂ ಮೋಸ ಆದೀತು, ಏಕೆಂದರೆ ಅವಳೂ ನನ್ನ ಥರ ಹೆಣ್ಣೇ ಅಲ್ಲವೆ ? ಎಂಬ ಕಿವಿಮಾತು ಹೇಳುತ್ತಾಳೆ. ಈ ಕೊನೆಯ ಮಾತಿನಲ್ಲಿ ಅಮೃತಳ ಉದಾತ್ತ ಗುಣ ಅನಾವರಣವಾಗುತ್ತದೆ. ಸಾವಿನ ಮನೆಯ ಹೊಸ್ತಿಲಲ್ಲಿ ನಿಂತು ಹತಾಶಳಾದ ಆಕೆ ತನಗಾಗಿರುವುದು ಮತ್ತೊಬ್ಬಳಿಗೆ ಆಗದಿರಲಿ ಎಂಬ ತಾಯ್ತನ ತೋರಿ ಲೋಕ ತೊರೆಯುತ್ತಾಳೆ.
ಪ್ರೀತಿ ಕೊಂದು ಕೊಲೆಯಾದ:
ಹೀಗೆ ಅಮೃತಾಳ ಸಾವಿಗೆ ಕಾರಣನಾದ ಕಾರ್ತಿಕ್ ತನ್ನ ಪ್ರೇಯಸಿ ಸತ್ತ ಮೂರು ದಿನಕ್ಕೇ ಕೊಲೆಯಾಗುತ್ತಾನೆ. ಆತ್ಮಹತ್ಯೆಯ ಹಿಂದಿನ ಅಸಲಿ ಕಾರಣ ಅರಿತು ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಕಾರ್ತಿಕ್ ಜೀವ ಉಳಿಯುತಿತ್ತೊ ಏನೊ, ಆದರೆ ಕಾರ್ತಿಕ್ ಕೊಲೆಯ ಹಿನ್ನೆಲೆಯಲ್ಲಿ ಅಮೃತಾಳ ಸೋದರ ಸೀನ ಮತ್ತವನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ತಂಗಿಯ ಸಾವಿನ ಸೇಡಿಗೇ ಈ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ.
ಕೊನೇ ಮಾತು:
ಮಕ್ಕಳು ಈ ಮೊಬೈಲ್ ಜಗತ್ತಿನಲ್ಲಿ ಮೈಂಡ್ ಮೆಚ್ಯುರಿಟಿ ಬರುವ ಮುನ್ನವೇ ಲವ್ ಗಿವ್ ಎಂದು ಹಾದಿ ತಪ್ಪುತ್ತಿದ್ದಾರೆ. ಆಕರ್ಷಣೆಗೆ ಹುಟ್ಟಿಕೊಳ್ಳುವ ಈ ಪ್ರೀತಿಯಲ್ಲಿ ಸತ್ಯ ಯಾವುದು ವಂಚನೆ ಯಾವುದು ಎಂಬ ವಾಸ್ತವ ಅರಿಯುವಲ್ಲಿ ಸೋಲುತ್ತಾರೆ. ಈ ಕಾರಣಕ್ಕಾಗಿ ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆ ಎಂದು ಹೇಳುವುದು. ಯಾರದ್ದೇ ಆದರೂ ಜೀವ ಅಲ್ಲವೆ, ಅವರವರ ತಪ್ಪಿಗೆ ಆಳೆತ್ತರಕ್ಕೆ ಬೆಳೆದು ನಿಂತ ಕರುಳ ಕುಡಿಗಳ ಅಗಲಿಕೆಯ ಶೋಕ ಅನುಭವಿಸುವ ಪೋಷಕರ ಕಷ್ಟ ಹೇಳತೀರದು.