Malenadu Mitra
ಮಲೆನಾಡು ಸ್ಪೆಷಲ್ ರಾಜ್ಯ

ಹಸಿವು ನೀಗಿಸಿ ಖುಷಿ ಪಡುತ್ತಿದ್ದ ಬಂಗಾರಪ್ಪಾಜಿ

ಅದು ೨೦೦೩ರ ಒಂದು ದಿನ ಬೆಂಗಳೂರಿಗೆ ಹೋಗುತ್ತಿದ್ದೆವು…. ತಿಪಟೂರು ಬಳಿ ದಾರಿ ಬದಿ ಜನ ಸೇರಿದ್ದರು… ಗಾಡಿ ನಿಲ್ಲಿಸಲು ಹೇಳಿದರು. ಗುಂಪಿನಲಗಲಿದ್ದ ಬಡವನೊಬ್ಬ ಗೋಳಾಡುತ್ತಿದ್ದ ಆತನಿಗೆ ಯಾರೊ ಆಕ್ಸಿಡೆಂಟ್ ಮಾಡಿದ್ದರು.. ಸಣ್ಣಪುಟ್ಟ ಗಾಯಗಳಾಗಿದ್ದವು. ಸಾಹೇಬರು ತಮ್ಮ ಎಲ್ಲ ಜೇಬು ತಡಕಿದರೆ ಆರೇಳು ಸಾವಿರ ಮಾತ್ರ ಇತ್ತು. ಗಾಡಿಲಿ ಡೀಸೆಲ್ ಇದಿಯಾ ಎಂದು ಕೇಳಿದರು. ಹೂಂ ಅಂದೆ, ತಾ ಇಲ್ಲಿ ಎಂದು ನನ್ನ ಬಳಿ,,ಗನ್ ಮ್ಯಾನ್ ಎಲ್ಲರ ಬಳಿಯೂ ಇದ್ದ ಎಲ್ಲಾ ಹಣ ಪಡೆದು ಆ ವ್ಯಕ್ತಿಗೆ ಕೊಟ್ಟರು. ಅಂದು ಎಲ್ಲರೂ ಬರಿಗೈಲಿ ಬೆಂಗಳೂರಿಗೆ ಹೋಗಿದ್ದೆವು

*ನಾನಿನ್ನೂ ಹೊಸದಾಗಿ ಸಾಹೇಬರ ಕಾರಿಗೆ ಚಾಲಕ. ಬೆಂಗಳೂರು ನೋಡಿದಿಯಾ ಎಂದು ಕೇಳಿದರು. ಅಲ್ಪಸ್ವಲ್ಪ ಗೊತ್ತು ಅಂದೆ. ಮೊದಲ ಬಾರಿ ವಿಮಾನ ನಿಲ್ದಾಣಕ್ಕೆ ಅವರನ್ನು ಬಿಡಲು ಹೋಗಿದ್ದೆ. ಕಾರ್ ಪಾರ್ಕಿಂಗ್ ಮಾಡಿ ನಿಂತುಕೊಂಡೆ,,…ಪಕ್ಕದಲ್ಲೇ ಇದ್ದ ಪೊಲೀಸ್‌ನವರಿಗೆ ಕಾರ್ ಇಲ್ಲೇ ಇರಲಿ ಇವನನ್ನು ಕಳಿಸುತ್ತೇನೆ.. ಎಂದು ಸನ್ನೆ ಮಾಡಿ ನನ್ನನ್ನು ವಿಮಾನ ನಿಲ್ದಾಣದ ಒಳಗೆ ಕೈ ಹಿಡಿದು ಕರೆದುಕೊಂಡು ಹೋದರು. ವಿಮಾನದ ಬಳಿ ಹೋಗಿ ಎಲ್ಲ ತೋರಿಸಿದ್ದಲ್ಲದೆ, ಸೆಕ್ಯುರಿಟಿ ತನಕ ಬಂದು ಬಿಟ್ಟು ಹೋಗಿದ್ದರು……ಇಂದು ಅವರ ಪುಣ್ಯಸ್ಮರಣೆ…….. ಅಂತಹ ಜನನಾಯಕನನ್ನು ಮತ್ತೆಂದೂ ನೋಡಲು ಸಾಧ್ಯವಿಲ್ಲ ಎಂದು ಭಾವುಕರಾಗುತ್ತಾರೆ ಹದಿಮೂರು ವರ್ಷಗಳ ಕಾಲ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಕಾರು ಚಾಲಕರಾಗಿದ್ದ ಸದಾನಂದಒಂದು ದಿನ ಸೊರಬದಿಂದ ಶಿವಮೊಗ್ಗದ ಮೀಟಿಂಗ್‌ಗೆ ಅರ್ಜೆಂಟ್ ಬರುತಿದ್ದೆವು. ಶಿರಾಳಕೊಪ್ಪ ಕೆರೆ ಸಮೀಪ ವಿಜಯ ಬಸ್ ನಮ್ಮ ಕಣ್ಣೆದುರೇ ಪಲ್ಟಿಯಾಯಿತು. ಬಸ್‌ನಲ್ಲಿದ್ದ ಎಲ್ಲರಿಗೂ ಗಾಯ..ರಕ್ತ ಹೇಳಬಾರದು. ತಕ್ಷಣ ಗಾಡಿ ಇಳಿದ ಸಾಹೇಬರು ಎಲ್ಲರನ್ನೂ ಉಪಚರಿಸಿ ಪ್ರತ್ಯೇಕ ಗಾಡಿಗಳನ್ನು ಮಾಡಿ ಆಸ್ಪತ್ರೆಗೆ ಕಳಿಸಿದರು. ಎಲ್ಲರಿಗೂ ವ್ಯವಸ್ಥೆ ಮಾಡಿದ ಬಳಿಕ ಶಿವಮೊಗ್ಗಕ್ಕೆ ಬಂದೆವು….
ಹೌದು. ಈ ನಾಡುಕಂಡ ನಿಜನಾಯಕ ಬಂಗಾರಪ್ಪ ಅವರ ಬಗ್ಗೆ ಹೇಳಲು ಇಂತಹ ಸಾವಿರ ಸಂಗತಿಗಳಿವೆ. ಅವರೊಂದಿಗಿದ್ದಾಗ ನೆರಳಂತೆಯೇ ಹಿಂಬಾಲಿಸುತ್ತಿದ್ದ ಸದಾನಂದ ಹಾಕುವ ಮೆಲುಕುಗಳು ಅತ್ಯಂತ ಹೃದಯಸ್ಪರ್ಶಿಯಾಗಿವೆ….

ಬಡವರ ಉಡಿ ತುಂಬುತ್ತಿರುವ ಎಸ್.ಬಂಗಾರಪ್ಪ ಮತ್ತು ಶಕುಂತಲಮ್ಮ ಬಂಗಾರಪ್ಪ

ಬೆಂಗಳೂರಿಗೆ ಹೋಗುವಾಗ ತುಮಕೂರಿನ ಚಿಕ್ಕ ಕ್ಯಾಂಟೀನ್‌ವೊಂದಕ್ಕೆ ಯಾವಾಗಲೂ ಹೋಗುತ್ತಿದ್ದರು. ಅವರಿಗೆ ಹಸಿವಿಲ್ಲದಾಗಲೂ ಹಲವು ಬಾರಿ ಹೋಗುತ್ತಿದ್ದರು. ಸರ್ ಯಾಕೆ ಈ ಚಿಕ್ಕ ಹೋಟೆಲ್‌ಗೆ ರ‍್ತೀರಿ ದೊಡ್ಡ ಹೋಟೆಲ್‌ಗೆ ಹೋಗಬಹುದಲ್ಲ ಎಂದು ಕೇಳುತ್ತಿದ್ದೆ… ಇಲ್ಲ ಕಣೊ ಅವನಿಗೆ ವ್ಯಾಪಾರ ಕಡಿಮೆ ನಾನು ಹೋದರೆ ಅಲ್ಲಿ ಜನ ರ‍್ತಾರೆ….ಅದರಿಂದ ಅವನಿಗೆ ಒಂದಷ್ಟು ಲಾಭ ಅಗಬಹುದು ಎನ್ನುತ್ತಿದ್ದರು.
ಬೀರೂರಿನ ಪ್ರೀತಿ ಕ್ಯಾಂಟೀನ್ ಅಂದು ತುಂಬಾ ಚಿಕ್ಕದಿತ್ತು. ಬಂಗಾರಪ್ಪಾಜಿ ಬರುವಾಗ ಮತ್ತು ಹೋಗುವಾಗ ಅಲ್ಲಿಗೇ ತಿಂಡಿಗೆ ಹೋಗುತ್ತಿದ್ರು. ಆ ಬಳಿಕ ಅದು ಬಂಗಾರಪ್ಪ ಕ್ಯಾಂಟೀನ್ ಎಂದೇ ಹೆಸರಾಯಿತು. ಆ ನಂತರ ಅಲ್ಲಿಗೆ ರಾಜ್ಯದ ದೊಡ್ಡ ದೊಡ್ಡ ನಾಯಕರೆಲ್ಲ ಹೋಗಲಾರಂಭಿಸಿದರು. ಇಂದು ಆ ಕ್ಯಾಂಟೀನ್ ತುಂಬಾ ವ್ಯವಹಾರ ಮಾಡುತ್ತಿದೆ ಎಂದು ಸ್ಮರಿಸುವ ಸದಾನಂದ್, ಸಾಹೇಬರು ಏನು ಮಾಡಿದರೂ ಅದರ ಹಿಂದೆ ಒಂದು ದೊಡ್ಡ ಉದಾತ್ತ ಉದ್ದೇಶ ಇರುತಿತ್ತು ಎನ್ನುತ್ತಾರೆ,

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಬಂಧುಗಳಾದ ದಿ.ಕೆ.ಜಿ ಶಿವಪ್ಪ, ಡಾ.ಜಿ.ಡಿ.ನಾರಾಯಣಪ್ಪ ಅವರೊಂದಿಗಿದ್ದ ಚಿತ್ರ

ರಾಜ್ಯಕ್ಕೆ ಭೀಕರ ಬರಗಾಲ ಬಂದಾಗ, ಅವರು ಮಾಡಿದ ನೆರವು ಎಂದೂ ಮರೆಯಲು ಸಾಧ್ಯವಿಲ್ಲ. ಬಡವರಿಗೆ ಅಕ್ಕಿ,ರಾಗಿ, ಬೀಜದ ಭತ್ತ ಕೊಡುವ ಮೊದಲ ಕಾರ್ಯಕ್ರಮ ಆನವಟ್ಟಿಯಲ್ಲಿ ಏರ್ಪಾಟಾಗಿತ್ತು ಮತ್ತು ಈ ಕಾರ್ಯಕ್ರಮವನ್ನು ಸೊರಬ ತಾಲೂಕಿಗೆ ಮಾತ್ರ ಸೀಮಿತವಾಗಿ ಮಾಡುವ ನಿರ್ಧಾರವನ್ನು ಸಾಹೇಬರು ಮಾಡಿಕೊಂಡಿದ್ದರು. ಆದರೆ ಆನವಟ್ಟಿಯ ಕಾರ್ಯಕ್ರಮಕ್ಕೆ ಬಂದ ಜನ ಮತ್ತು ಅವರ ಹಸಿವು ಕಂಡ ಸಾಹೇಬರು ಇದನ್ನು ಬೇರೆಡೆಗೂ ವಿಸ್ತರಿಸಿದ್ದರು. ಅವರ ಬಳಿ ಯಾವ ಅಧಿಕಾರವೂ ಇರಲಿಲ್ಲ ಆದರೆ ಹಿಂದೆ ಅಧಿಕಾರದಲ್ಲಿದ್ದಾಗ ನೆರವು ಪಡೆದಿದ್ದ ಎಲ್ಲರೂ ಅವರ ಬೆನ್ನಿಗೆ ನಿಂತಿದ್ದರು. ಜನರಿಗಾಗಿ ಅವರು ಮಾಡಿದ ಕಾಯಕ ಅದಕ್ಕೆ ಪಟ್ಟ ಶ್ರಮ ಎಲ್ಲವೂ ಇಂದಿಗೂ ಕಣ್ಣ ಮುಂದೆ ಇದೆ ಎಂದು ಬರಗಾಲದಲ್ಲಿ ನೊಂದವರ ಬಾಳಿಗೆ ಬೆಳಕಾದ ಬಂಗಾರಪ್ಪ ಅವರ ಜನಪ್ರೀತಿಯನ್ನು ಸದಾನಂದ ನೆನಪು ಮಾಡಿಕೊಂಡರು.
ಬರಗಾಲದಲ್ಲಿ ಬೀಜದ ಭತ್ತ ,ಮೆಕ್ಕೆಜೋಳ ಕೊಟ್ಟಿದ್ದರು ಮುಂದೆ ಆ ಬೀಜ ಫಸಲಾದಾಗ ರೈತರ ಹೊಲಗಳಿಗೆ ಹೋಗಿ ಸ್ವತಃ ಸಂಭ್ರಮಪಟ್ಟಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಅವರು ಬಡವರ ಹಸಿವು ನೀಗಿಸುವುದರಲ್ಲಿ ಸುಖ ಕಾಣುತಿದ್ದರು ಎಂದು ಹೇಳುತ್ತಾರೆ ಸದಾನಂದ.

ಸದಾನಂದ

ಚಾಲಕನಾಗಿ ಕಾಣಲಿಲ್ಲ:
ನನ್ನನ್ನು ಎಂದೂ ಚಾಲಕನಾಗಿ ನೋಡಿಲ್ಲ ನನ್ನ ಮದುವೆಯನ್ನು ಸಾಹೇಬರು ಮತ್ತು ಅಮ್ಮ ನಿಂತು ನೆರವೇರಿಸಿದ್ದರು. ಕೈಗೆ ಸಂಸದರ ವೇತನ ಬಂದಾಗಲೂ ಅದನ್ನು ಹಂಚಿ ಸಂಭ್ರಮಪಡುತ್ತಿದ್ದರು. ಬಿಡುವಾದಾಗ ಸಂಗೀತ ಕೇಳುವುದೆಂದರೆ ಅವರಿಗೆ ಸಂಭ್ರಮ. ಅವರು ಅಧಿಕಾರದಲ್ಲಿದ್ದಾಗ ಗುಡಿಸಲಿನ ಬೂದಿ ಒಲೆಯಲ್ಲಿ ಮಾಡಿದ ರೊಟ್ಟಿಯನ್ನೂ ತಿನ್ನಿಸಿದ್ದರು. ಅದೇ ರೀತಿ ಸ್ಟಾರ್ ಹೋಟೆಲ್ ಆತಿಥ್ಯವನ್ನು ನಾವು ಕಂಡಿದ್ದೇವೆ. ಶಿವಮೊಗ್ಗದ ಸಹ್ಯಾದ್ರಿ ಪೆಟ್ರೋಲ್ ಬಂಕ್ ಬಳಿ ತಿಂಡಿಗೆ ಬರುತಿದ್ದರು. ಕಾರು ಇಳಿದವರೇ ಟ್ಯಾಕ್ಸಿ ನಿಲ್ದಾಣದತ್ತ ಕೈ ಬೀಸುತ್ತಿದ್ದರು. ಅಲ್ಲಿನ ಚಾಲಕರನ್ನೆಲ್ಲ ಕೂಡಿಕೊಂಡು ತಿಂಡಿ ತಿಂದು ಸಂಭ್ರಮಿಸುತ್ತಿದ್ದರು. ನನ್ನ ಸರ್ವಿಸ್‌ನಲ್ಲಿ ಅವರೂ ಒಬ್ಬರೇ ಉಂಡಿದ್ದನ್ನೂ ಎಂದೂ ನೋಡಿಲ್ಲ. ಯಾವತ್ತೂ ಅವರು ಜನರ ನಾಯಕ ಸುತ್ತಮುತ್ತ ಜನರಿಲ್ಲ ಎಂದರೆ ಚಡಪಡಿಸುತ್ತಿದ್ದರು.
ಮಕ್ಕಳು ಚೆನ್ನಾಗಿರಲಿ:
ಬಂಗಾರಪ್ಪಾಜಿ ಅವರ ಬಳಿ ಕೆಲಸ ಮಾಡಿದ ಎಲ್ಲರನ್ನೂ ಚೆನ್ನಾಗಿ ನೋಡಿಕೊಂಡಿದ್ದಾರೆ. ಚಾಲಕನೆಂದೂ ಎಂದೂ ಕಾಣದೆ ತಮ್ಮ ಕೋಣೆಯಲ್ಲಿಯೇ ಇರಿಸಿಕೊಳ್ಳುತ್ತಿದ್ದರು. ನಮ್ಮ ಸಾಹೇಬರ ಮಕ್ಕಳು ಅವರ ಎರಡು ಕಣ್ಣುಗಳಿದ್ದಂತೆ ಅವರು ಚೆನ್ನಾಗಿರಲಿ ಎಂಬುದೇ ನನ್ನ ಆಶಯ. ಅವರು ಜಾರಿಗೆ ತಂದ ಯೋಜನೆಗಳು ಯಾವತ್ತೂ ಬಡವರ ಪರ ಇರುತ್ತಿದ್ದವು ಈ ಕಾರಣದಿಂದಲೇ ಅವರನ್ನು ಜನ ಬಡವರ ಬಂಧು ಎನ್ನುತ್ತಿದ್ದರು. ಬಂಗಾರಪ್ಪಾಜಿ ಅವರ ಬಳಿ ಕೆಲಸ ಮಾಡಿದ್ದೆ ಎಂಬ ಒಂದೇ ಕಾರಣಕ್ಕೆ ಸಹೋದ್ಯೋಗಿಗಳು, ಅಧಿಕಾರಿಗಳು, ರಾಜಕಾರಣಿಗಳು ನನ್ನನ್ನು ಈಗಲೂ ಪ್ರೀತಿಯಿಂದ ಕಾಣುತ್ತಾರೆ. ನಾನೂ ಕೂಡಾ ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಡೆಯುತ್ತಿದ್ದೇನೆ ಬಂಗಾರಪ್ಪ ಎಂಬುದೊಂದು ಬರೀ ಹೆಸರಲ್ಲ ಅದೊಂದು ದೈವ ಶಕ್ತಿಯಂತೆಯೇ ನನಗೆ ಭಾಸವಾಗುತ್ತದೆ. ಹೇಳಲೂ ಬಾರೀ ಇದೆ ಇನ್ನೊಮ್ಮೆ ಸಿಕ್ಕಾಗ ಮತ್ತೆ ಮಾತಾಡುವೆ ಎಂದು ಮಾತು ಮುಗಿಸಿದರು ಸದಾನಂದ್.

Ad Widget

Related posts

ಸಂಭ್ರಮದ ನಾರಾಯಣಗುರು ಜಯಂತಿ, ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಈಡಿಗ ಸಂಘ ಮನವಿ

Malenadu Mirror Desk

ಕುವೆಂಪು ಅವರ ಪಂಚಮಂತ್ರ ಸಾರ್ವಕಾಲಿಕ ಚಿಂತನೆ: ಪ್ರೊ. ಬಿ. ಪಿ. ವೀರಭದ್ರಪ್ಪ

Malenadu Mirror Desk

ಶಿವಮೊಗ್ಗದಲ್ಲಿ 657 ಸೋಂಕು,6 ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.