ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಎರಡನೇ ಹಂತದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಶೇ.೮೦.೯೧ ರಷ್ಟು ಮತದಾನವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ ಅತಿ ಹೆಚ್ಚು ಅಂದರೆ ಶಿಕಾರಿಪುರದಲ್ಲಿ ಶೇ.೮೬.೩೫ ಮತದಾನವಾಗಿದ್ದರೆ, ಸೊರಬ ತಾಲೂಕಿನಲ್ಲಿ ೮೬.೨೨, ಸಾಗರದಲ್ಲಿ ೭೯.೮೪ ಹಾಗೂ ಹೊಸನಗರ ತಾಲೂಕಿನಲ್ಲಿ ಶೇ.೬೯.೩೫ ಮತದಾನವಾಗಿದೆ.
ನಾಲ್ಕೂ ತಾಲೂಕುಗಳಲ್ಲಿಯೂ ಶಾಂತಿಯುತ ಮತದಾನವಾಗಿದೆ. ಮಾಜಿ ಸಚಿವ ಹಾಗೂ ಸಾಗರ ಶಾಸಕರಾದ ಹರತಾಳು ಹಾಲಪ್ಪ ಅವರು ಹೊಸನಗರ ತಾಲೂಕು ಹರತಾಳು ಗ್ರಾಮದಲ್ಲಿ ಕುಟುಂಬ ಸದಸ್ಯರೊಂದಿಗೆ ಮತದಾನ ಮಾಡಿದರು. ಅದೇ ರೀತಿ ಸಾಗರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಬೇಳೂರು ಗ್ರಾಮದಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಹೊಸನಗರ ತಾಲೂಕು ಹೆದ್ದಾರಿಪುರ ಗ್ರಾಮ ಪಂಚಾಯಿತಿಯ ಕಲ್ಲೂರು ಗ್ರಾಮದಲ್ಲಿ ಕಾಂಗ್ರೆಸ್ ,ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಮೂವರೂ ಮಹಿಳಾ ಅಭ್ಯರ್ಥಿಗಳು ಒಂದೇ ಬೆಂಚಿನಲ್ಲಿ ಕುಳಿತು ಮತ ಕೇಳುವ ಮೂಲಕ ಗಮನ ಸೆಳೆದರು.
ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕುರುಡು ಕಾಂಚಾಣದ ಮೇಲಾಟ ಮಿರಿಮೀರಿದ್ದು, ಎರಡನೇ ಹಂತದಲ್ಲಿಯೂ ಯಥೇಚ್ಛ ಹಣ ವ್ಯಯವಾಗಿದೆ ಎನ್ನಲಾಗಿದೆ. ಬಂದುಬಾAಧವರಲ್ಲಿಯೇ ನಡೆಯುವ ಈ ಚುನಾವಣೆಯಲ್ಲಿಯೂ ೨ರಿಂದ ನಾಲ್ಕು ಸಾವಿರದವರೆಗೂ ಮತಗಳನ್ನು ಬಿಕರಿಗೆ ಇಡಲಾಗಿತ್ತು ಎನ್ನಲಾಗಿದೆ. ಊರಿನ ಹಣವುಳ್ಳವರು ಪ್ರತಿಷ್ಠೆಗಾಗಿಯೇ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಅದನ್ನು ಉಳಿಸಿಕೊಳ್ಳಲು ಬೇಕಾಬಿಟ್ಟಿ ಹಣ ಖರ್ಚು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.