ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಪಾರ್ಥಿವ ಶರೀರವನ್ನು ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಯಿಂದ ಮಧ್ಯಾಹ್ನ ಕಳಿಸಿಕೊಡಲಾಯಿತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ರೈಲ್ವೆ ಪೋಲೀಸರು ಶವವನ್ನು ಹಸ್ತಾಂತರ ಮಾಡಿದರು. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಹಲವು ಬಿಜೆಪಿ ಮುಖಂಡರು ಆಸ್ಪತ್ರೆಗೆ ನೀಡಿ ಮೃತರ ಅಂತಿಮ ದರ್ಶನ ಪಡೆದರು.
ಅಪ್ಪನ ಸಮಾದಿ ಪಕ್ಕ ಸಂಸ್ಕಾರ:
ಸಂಜೆ ಸಕ್ಕರಾಯ ಪಟ್ಟಣದ ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಧರ್ಮೇಗೌಡರ ಹುಟ್ಟೂರು ಸರಪನಹಳ್ಳಿಯ ಫಾರಂ ಹೌಸ್‍ನಲ್ಲಿ ಅಂತಿಮ ವಿದಿವಿಧಾನ ನಡೆಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಮಾಜಿ ಶಾಸಕ ಹಾಗೂ ತಂದೆ ಲಕ್ಷ್ಮಯ್ಯ ಅವರ ಸಮಾಧಿಯ ಪಕ್ಕದಲ್ಲಿಯೇ ಧರ್ಮೇಗೌಡ ಅಂತಿಮ ಸಂಸ್ಕಾರ ನಡೆಯಲಿದೆ.
ಸಿಎಂ ಭಾಗಿ :
ಸರ್ಪನಹಳ್ಳಿಯಲ್ಲಿ ನಡೆಯುವ ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಲ್‍ಪಿ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಭಾಗವಹಿಸಲಿದ್ದಾರೆ. ಧರ್ಮೇಗೌಡ ಸಾವಿನ ಸುದ್ದಿ ಕೇಳಿದ ಸಾರ್ವಜನಿಕರು ಹಾಗೂ ಅಭಿಮಾನಿಗಳು ಸಕ್ಕರಾಯ ಪಟ್ಟಣದತ್ತ ಮೃತರ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.