ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕಾರ್ಯಕ್ರಮದಲ್ಲಿ ಒಮ್ಮೆ ವೇದಿಕೆ ಹಂಚಿಕೊಂಡಿದ್ದ ಧರ್ಮೇಗೌಡರಿಗೆ ನೀವು ಕಡೂರು ಕ್ಷೇತ್ರವನ್ನು ಯಾಕೆ ಆಯ್ಕೆಮಾಡಿಕೊಂಡಿಲ್ಲ ಎಂದು ಕೇಳಿದ್ದೆ. ಬೇಡ ಸಾರ್.. ಈ ನಾಯಕರುಗಳ ನಡುವಿನ “ಹಗ್ಗ ಜಗ್ಗಾಟ ಸಾಕಾಗಿದೆ’ ಸಹಕಾರಿ ಕ್ಷೇತ್ರದಲ್ಲಿ ತೃಪ್ತಿಯಿದೆ ಕೆಲಸ ಮಾಡಿಕೊಂಡಿದ್ದೇನೆ ಎಂದಿದ್ದರು. ಇತ್ತಿಚೆಗೆ ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯವರು ಅತ್ತಿಂದ ಇತ್ತ ಇತ್ತಿಂದ ಅತ್ತ ಧರ್ಮೇಗೌಡರನ್ನು ಎಳೆದಾಡುವ ದೃಶ್ಯ ನೋಡಿದಾಗ ಅಂದು ಧರ್ಮೇಗೌಡರೇ ಅಕ್ಷರಷಃ ಹಗ್ಗವಾಗಿಬಿಟ್ಟಿದ್ದನ್ನು ಬೇಸರವಾಗಿತ್ತು.
ಅತ್ಯಂತ ಸೂಕ್ಷ್ಮ ಸ್ವಭಾವದ ಧರ್ಮೇಗೌಡರು ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದರೂ, ಈಗಿನ ಉಡಾಳತನದ ರಾಜಕಾರಣ ಮಾಡಿದವರಲ್ಲ. ಒಂದು ಬಾರಿ ಶಾಸಕರಾಗಿದ್ದರು. ಬೀರೂರು ಕ್ಷೇತ್ರ ಕೈಬಿಟ್ಟು ಹೋದನಂತರ ಚಿಕ್ಕಮಗಳೂರು ಕ್ಷೇತ್ರದಿಂದೊಮ್ಮೆ ಸ್ಪರ್ಧಿಸಿದ್ದರೂ ಸಫಲರಾಗಲಿಲ್ಲ. ದೇವೇಗೌಡರ ಕುಟಂಬಕ್ಕೆ ಯಾವತ್ತೂ ನಿಷ್ಠರಾಗಿದ್ದ ಕಾರಣಕ್ಕೆ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಉಪಸಭಾಪತಿಯಂತಹ ಜವಾಬ್ದಾರಿಯುತ ಹುದ್ದೆಯಲ್ಲಿದ್ದ ಗೌಡರ ಆತ್ಮಹತ್ಯೆ ಸುದ್ದಿ ದೊಡ್ಡ ಆಘಾತಕರವಾಗಿದೆ.
ಸಂಜೆ 6 ಗಂಟೆಗೇ ಮನೆ ಬಿಟ್ಟಿದ್ದ ಅವರು ಬಳ್ಳೇಕೆರೆ ಸಮೀಪದ ಗುಣಸಾಗರದಲ್ಲಿ ಚಲಿಸುವ ರೈಲಿಗೆ ತಲೆ ಕೊಟ್ಟಿದ್ದಾರೆ. ಯುವಕರಿಗೆ ಉತ್ಸಾಹ ತುಂಬುತ್ತಲೇ ಸದಾ ನಗುತ್ತಿದ್ದ ರಾಜಕಾರಣಿಯೊಬ್ಬರು ಹೀಗೆ ತಮ್ಮ ಜೀವನ ಮುಗಿಸಿಕೊಳ್ಳುವ ನಿರ್ಧಾರಕ್ಕೆ ಏಕೆ ಬಂದರು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಕೌಟುಂಬಿಕ ಕಾರಣ?
ಮಾಜಿ ಶಾಸಕ ಎಸ್.ಆರ್.ಲಕ್ಷ್ಮಯ್ಯ ಅವರದು ಚಿಕ್ಕಮಗಳೂರು ಜಿಲ್ಲೆಗೆ ರಾಜಕೀಯವಾಗಿ ಪ್ರಭಾವಿ ಕುಟುಂಬ. ಅವರ ಮಕ್ಕಳಾದ ಧರ್ಮೇಗೌಡ ಮತ್ತು ಬೋಜೇಗೌಡ ಯಾವತ್ತೂ ಪ್ರಭಾವಿಗಳೇ. ಜೆಡಿಎಸ್ ಸರಕಾರ ಬಂದಾಗಂತೂ ಇವರು ಸಿಎಂ ಕಚೇರಿ, ಕುಟುಂಬದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಾಜಿ ಪ್ರಧಾನಿ ದೇವೇಗೌಡರಿಗೂ ಈ ಕುಟುಂಬದೊಂದಿಗೆ ಆಪ್ತ ಒಡನಾಟ ಇತ್ತು. ರಾಜಕೀಯ ಏಳು ಬೀಳುಗಳನ್ನು ಕಂಡಿರುವ ಅವರು ಮೊನ್ನೆ ವಿಧಾನ ಪರಿಷತ್‍ನಲ್ಲಿ ನಡೆದ ಹೈಡ್ರಾಮಾಕ್ಕೆ ನೊಂದಿದ್ದರು ಎಂಬುದು ನಿಜ ಅದೊಂದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಸಡಿಲ ವ್ಯಕ್ತಿತ್ವದವರು ಅವರಲ್ಲ ಎಂಬುದನ್ನು ಧರ್ಮೇಗೌಡರ ಒಡನಾಡಿಗಳೇ ಹೇಳುತ್ತಾರೆ. ಅಂದಿನ ಘಟನೆ ಬಗ್ಗೆ ಹೊಟ್ಟೆ ಡುಮ್ಮಣ್ಣಗಳೆಲ್ಲ ಮೈಮೇಲೆ ಬಿದ್ದರು ಎಂದು ಆಪ್ತರ ಬಳಿ ತಮಾಷೆ ಮಾಡುತ್ತಿದ್ದರಂತೆ.
ಒಂದು ಮೂಲದ ಪ್ರಕಾರ ಅವರಿಗೆ ಕೌಟುಂಬಿಕ ಸಮಸ್ಕೆಗಳಿದ್ದವು ಎಂಬ ಮಾಹಿತಿಯಿದೆ. ಆರು ತಿಂಗಳ ಹಿಂದೆ ಮನೆಯಲ್ಲಿ ಈ ಕಾರಣಕ್ಕೆ ಜಗಳಗಳೂ ನಡೆದಿದ್ದವು ಎನ್ನಲಾಗಿದೆ. ವಯಕ್ತಿಕ ಕಾರಣಕ್ಕೇ ನೊಂದಿದ್ದ ಸೂಕ್ಷ್ಮ ಸ್ವಭಾವದ ಗೌಡರು ಅದೇ ಕಾರಣಕ್ಕೆ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ತೆಗೆದುಕೊಂಡರೇ ಎಂಬ ಅನುಮಾನ ಕಾಡುತ್ತಿದೆ. ಸಾಮಾನ್ಯ ಆರೋಗ್ಯ ಸಮಸ್ಯೆ ಇತ್ತಾದರೂ ಅದಕ್ಕೆ ಬೇಕಾದ ಕಡೆ ಚಿಕಿತ್ಸೆ ಪಡೆಯುವ ಸಾಮಥ್ರ್ಯ ಮತ್ತು ಸೌಲಭ್ಯ ಅವರಿಗಿತ್ತು. ಕಾರಣ ಯಾವುದೇ ಇರಲಿ ಜನಾನಾಯಕನಾದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ನೋವಿನ ಸಂಗತಿಯಾಗಿದೆ.
previous post
next post