ಚುನಾವಣೆ ಎಂದರೇನೆ ತಂತ್ರ, ಅದರೊಳಗೊಂದು ತಂತ್ರ ಈ ಎಲ್ಲ ಕುತಂತ್ರಗಳಿಗೆ ಬಲಿಯಾದವನು ಕೊನೆಗೆ ಅತಂತ್ರ. ಗ್ರಾಮ ಪಂಚಾಯಿತಿ ಚುನಾವಣೆಯೂ ಹಾಗೆನೆ ಎಲ್ಲ ರೀತಿಯ ರಾಜಕೀಯ ಅಪಸವ್ಯಗಳಿಗೆ ಸಾಕ್ಷಿಯಾಗಿ ಮುಗಿದು ಹೋಯಿತು. ಪ್ರಾಮಾಣಿಕ ಹೋರಾಟ ಮಾಡಿ ಸೋತವರಿಗೆ ತಮಗೆ ಎಲ್ಲಿ ಒಳಹೊಡೆತ ಬಿದ್ದಿತು ಎಂಬುದೇ ಅರ್ಥವಾಗದಾಗಿದೆ. ಈ ಹಳ್ಳಿ ಫೈಟ್ ಕುಟುಂಬ, ಮನೆ, ಊರು ಕೇರಿಗಳೊಳಗೆ ಪಂಗಡ ಸೃಷ್ಟಿ ಮಾಡಿದ್ದು ಸುಳ್ಳಲ್ಲ. ಈ ಬಾರಿಯ ಚುನಾವಣೆಯಲ್ಲಿ ಭಾರೀ ಮುಖಂಡರು ಸೋತು ಸುಣ್ಣವಾಗಿದ್ದರೆ,ಅನೇಕ ವಿದ್ಯಾವಂತರು ಪಂಚಾಯಿತಿ ಕಟ್ಟೆ ಹತ್ತಿದ್ದಾರೆ. ನಿವೃತ್ತ ಯೋಧರು, ಅಧಿಕಾರಿಗಳು ಪಂಚಾಯಿತಿ ಜನಪ್ರತಿನಿಧಿಯಾಗಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮಪಂಚಾಯಿತಿ ಅರಳಾಪುರದಲ್ಲಿ ಗಂಡ ಹೆಂಡತಿ ಇಬ್ಬರೂ ಆಯ್ಕೆಯಾಗಿದ್ದಾರೆ. ವಿನಾಯಕ ಆಚಾರ್ಯ ಮತ್ತು ನಿಶ್ಚಿತ ಅವರು ಬೇರೆ ಬೇರೆ ಮೀಸಲು ವಾರ್ಡ್‍ನಿಂದ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ. ಸೋಗಾನೆ ಗ್ರಾಮ ಪಂಚಾಯಿತಿಗೆ ಪತ್ರಕರ್ತ ಅನಿಲ್‍ಸಾಗರ್ ಆಯ್ಕೆಯಾಗಿದ್ದಾರೆ. ಸ್ಮಾತಕೋತ್ತರ ಪದವೀಧರರಾದ ಇವರು ಸ್ನೇಹಿತ ಒತ್ತಾಸೆಯಂತೆ ಎಸ್ಸಿ ಮೀಸಲು ಕ್ಷೇತ್ರದಿಂದ ಭಾರೀ ಅಂತರದಲ್ಲಿ ಗೆದ್ದು ಪಂಚಾಯಿತಿ ಸದಸ್ಯರಾಗಿದ್ದಾರೆ.
ಭದ್ರಾವತಿ ತಾಲೂಕು ಅಂತರಗಂಗೆಯ ನಾಗೇಶ್ 6 ನೇ ಬಾರಿಗೆ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ.
ಸ್ವಾಮಿರಾವ್ ಪುತ್ರ ಹ್ಯಾಟ್ರಿಕ್:
ಮಾಜಿ ಶಾಸಕ ಬಿ.ಸ್ವಾಮಿರಾವ್ ಪುತ್ರ ಸುಬ್ರಹ್ಮಣ್ಯ ಅವರು ಹೊಸನಗರ ತಾಲೂಕು ಸೊನಲೆ ಕ್ಷೇತ್ರದಿಂದ ಮೂರನೇ ಬಾರಿಗೆ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇವರ ಸಹೋದರ ಸುರೇಶ್ ಸ್ವಾಮಿರಾವ್ ಹಾಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ.
ತೀರ್ಥಹಳ್ಳಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಹಾಗೂ ಪತ್ರಕರ್ತ ಶಿವಾನಂದ ಕರ್ಕಿ ಅವರು ಪತ್ನಿ ವಿನಂತಿ ಶಿವಾನಂದ ಕರ್ಕಿ ಅವರು ಈ ಬಾರಿ ಗ್ರಾಮಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಹೊಸನಗರ ತಾಲೂಕು ಹರತಾಳು ಪಂಚಾಯಿತಿ ವ್ಯಾಪ್ತಿಯ ಕಣಕಿ ನಾರಾಯಣಪ್ಪ ನಾಲ್ಕನೇ ಬಾರಿಗೆ ಗೆದ್ದು ಬಂದಿದ್ದಾರೆ.
ಗೆಲುವೂ ದಕ್ಕಲಿಲ್ಲ,ತೋಟಾನೂ ಉಳಿಲಲ್ಲ:
ಸೊರಬ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾಗಿದ್ದ ಕೊಟ್ರೇಶ್‍ಗೌಡ ಅವರು ಚಿಕ್ಕಸವಿ ಪಂಚಾಯಿತಿಯಲ್ಲಿ ಪರಾಭವಹೊಂದಿದ್ದಾರೆ. ಮತ್ತೊಬ್ಬ ಮುಖಂಡ ಆನಂದಪ್ಪ, ಪರಶುರಾಮಪ್ಪ ಸೋತಿದ್ದಾರೆ. ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ತೀರ್ಥಹಳ್ಳಿ ತಾಲೂಕು ಆರಗ ಪಂಚಾಯಿತಿಯ ಸುಪ್ರೀತರಂಜನ್ ಕೂಡಾ ಸೋಲು ಕಂಡಿದ್ದಾರೆ. ಚುನಾವಣೆ ದ್ವೇಷದ ಕುಮ್ಮಕ್ಕಿನಿಂದಲೇ ಇವರ ಮನೆಯ ಎರಡು ಸಾವಿರ ಅಡಕೆ ಸಸಿಯನ್ನು ಅರಣ್ಯ ಇಲಾಖೆಯವರು ಕಡಿದು ಹಾಕಿದ್ದರು. ಇದು ಸುಪ್ರೀತ ಚುನಾವಣೆಗೆ ಸ್ಪರ್ಧಿಸಿದ್ದರಿಂದಲೇ ಈ ಕೃತ್ಯ ನಡೆದುಹೋಗಿದೆ. ಈ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಖರ್ ಉಪವಾಸ, ಪಾದಯಾತ್ರೆ ಎಲ್ಲ ಮಾಡಿದ್ದರು. ಇತ್ತ ಗೆಲವೂ ದಕ್ಕಲಿಲ್ಲ ಅತ್ತ ತೋಟವೂ ಉಳಿಯಲಿಲ್ಲ.