ಶಿವಮೊಗ್ಗ,ಜ.೧೦: ಹಸೆ ಚಿತ್ತಾರ ಕಲೆಗೆ ಸರಕಾರದ ಮಟ್ಟದಲ್ಲಿ ಸಿಗಬೇಕಾದ ಮಾನ್ಯತೆಯ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಹೇಳಿದರು. ಧೀರ ದೀವರ ಬಳಗ, ಮಲೆನಾಡು ದೀವರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಹಾಗೂ ಕಾಗೋಡಿನ ರಾಮಮನೋಹರ ಲೋಹಿಯಾ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಚಿತ್ತಾರಗಿತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು ದೀವರ ಕಲೆ ಅತ್ಯಂತ ಶ್ರೀಮಂತವಾದುದು. ಈ ಪರಂಪರೆ ಮುಂದುವರಿಯಬೇಕು. ಈ ಕಲೆಗೆ ಆಧುನಿಕ ಸ್ಪರ್ಶ ನೀಡುವ ಮೂಲಕ ನಾವು ಮುಂದಿನ ಪೀಳಿಗೆಗೆ ತಲುಪಿಸಬೇಕು. ಬೂಮಣ್ಣಿ ಬುಟ್ಟಿ ಕಲೆ ಅತ್ಯಂತ ವಿಶಿಷ್ಟವಾದುದು. ಈ ಕಲೆಗೆ ಸರಕಾರದ ಮಟ್ಟದಲ್ಲಿ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಹಿರಿಯರಾದ ಕಾಗೋಡು ತಿಮ್ಮಪ್ಪ ಅವರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತೇನೆ. ಮಲೆನಾಡಿನ ಈ ಕಲೆಗೆ ಮಾರುಕಟ್ಟೆ ತಂದುಕೊಡುವ ನಿಟ್ಟಿನಲ್ಲಿ ಕಲಾವಿದರೂ ಚಿಂತಿಸಬೇಕು. ಈ ಸಂಬಂಧ ಕೆಲಸ ಮಾಡುವ ಸಾಂಸ್ಕೃತಿಕ ಸಂಸ್ಥೆಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಯಾವುದೇ ಸಮುದಾಯದ ಕಲೆ, ಸಂಸ್ಕೃತಿಗಳು ಆ ಸಮುದಾಯದ ಅಂತಃಸತ್ವ. ಮಲೆನಾಡಿನ ದೀವರ ಸಮುದಾಯದಲ್ಲಿ ಹಸೆ, ಬೂಮಣ್ಣಿ ಬುಟ್ಟಿ ಚಿತ್ತಾರ ಪಾರಂಪರಿಕವಾಗಿ ಬಂದಿದೆ. ಈ ಸಮುದಾಯದ ಉಡುಗೆ,ತೊಡುಗೆ, ಆಹಾರ, ಹಬ್ಬ ಎಲ್ಲವೂ ವಿಭಿನ್ನ. ಇತ್ತೀಚಿನ ದಿನಗಳಲ್ಲಿ ಅವು ನಶಿಸಿ ಹೋಗಬಾರದು ಎಂದು ಈ ಎಲ್ಲ ಸಂಘಟನೆಗಳು ಮಾಡುತ್ತಿರುವ ಕೆಲಸ ಮಾದರಿಯಾಗಿದೆ.ಮುಂದೆ ತಾಲೂಕು ಮಟ್ಟದಲ್ಲಿ ಈ ರೀತಿಯ ಸ್ಪರ್ಧೆ ಮಾಡುವ ಮೂಲಕ ಗ್ರಾಮೀಣ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಬಾಲ್ಯದ ದಿನಗಳಲ್ಲಿ ಬೂಮಿ ಹುಣ್ಣಿಮೆ ಹಬ್ಬ ಎಂದರೆ ನಮಗೆಲ್ಲ ಸಂಭ್ರಮ. ಈ ಕಲೆ ನಮ್ಮದು ಯಾವತ್ತೂ ಇರಬೇಕು. ಈ ದಿಸೆಯಲ್ಲಿ ಸಾಂಸ್ಕೃತಿಕ ಕ್ಷೇತ್ರದವರು ಮಾಡುವ ಕಾರ್ಯಕ್ರಮಕ್ಕೆ ನಮ್ಮ ಬೆಂಬಲ ಇರುತ್ತದೆ. ಈಡಿಗ ಜನಾಂಗಕ್ಕೆ ಒಂದು ಪ್ರಬಲ ಮಠ ಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಒಂದು ಮಠ ಪ್ರಬಲವಾಗಿದ್ದರೆ ಇಡೀ ಸಮುದಾಯ ರಾಜಕೀಯೇತರವಾಗಿ ಶಕ್ತಿಯುತವಾಗಿ ಬೆಳೆಯಬಹುದು ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತಾರ ಕಲಾವಿದೆ ಲಕ್ಮಮ್ಮ ಗಡೇಮನೆ, ಮಾಜಿ ಶಾಸಕ ಡಾ.ಜಿ.ಡಿನಾರಾಯಣಪ್ಪ, ಮಲೆನಾಡು ದೀವರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಸುರೇಶ್ ಬಾಳೇಗುಂಡಿ ಉಪಸ್ಥಿತರಿದ್ದರು. ಪತ್ರಕರ್ತ ನಾಗರಾಜ್ ನೇರಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದರಾದ ರಾಧಾ ಸುಳ್ಳೂರು, ಕುಸುಮಾ ಅಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕ ನಾಗೇಶ್ ಬಿದರಗೋಡು ಅವರ ಏಕ ಪಾತ್ರಾಭಿನಯ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು. ಕಾಗೋಡು ಅಣ್ಣಪ್ಪ, ವೀರಭದ್ರ ಸೂರಗುಪ್ಪೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಪತ್ರಕರ್ತ ಹರ್ಷ ಕುಗ್ವೆ ಸ್ವಾಗತಿಸಿದರು. ಡಾ.ಅಣ್ಣಪ್ಪ ಮಳೀಮಠ್, ಸೌಮ್ಯ ಕೋಡೂರು ಕಾರ್ಯಕ್ರಮ ನಿರೂಪಿಸಿದರು.ಶ್ರೀಧರ್ ಈಡೂರು ವಂದನಾರ್ಪಣೆ ನೆರವೇರಿಸಿದರು.
ಭಾವುಕರಾದ ಬೇಳೂರು
ಈಡಿಗ ಸಮಾಜದ ಎರಡು ಕಣ್ಣುಗಳು ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಎಂದು ಪ್ರಾಸಂಗಿಕವಾಗಿ ಮಾತನಾಡುತ್ತಿದ್ದ ಬೇಳೂರು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮ ರಾಜಕೀಯ ಗುರು ಬಂಗಾರಪ್ಪ ಅವರನ್ನು ನೆನೆದು ಭಾವುಕರಾದರು. ಬಂಗಾರಪ್ಪ ತುಳಿತಕ್ಕೊಳಗಾದವರಿಗೆ ಸ್ವಾಭಿಮಾನ ಕೊಟ್ಟವರು. ಅವರ ಹೋರಾಟ ದಿಟ್ಟತನ ನಮ್ಮಲ್ಲಿ ಬರಬೇಕು ಎಂದು ಒಂದು ಕ್ಷಣ ಭಾವುಕರಾಗಿ ಮಾತು ನಿಲ್ಲಿಸಿದರು
ಚಿತ್ತಾರಗಿತ್ತಿ ಪ್ರಶಸ್ತಿ ವಿಜೇತರು
ರಾಜ್ಯ ಮಟ್ಟದ ಬೂಮಣ್ಣಿ ಬುಟ್ಟಿ ಚಿತ್ತಾರ ಸ್ಪರ್ಧೆಯಲ್ಲಿ ಶೃತಿ ನಾಡಕಲಸಿ ಪ್ರಥಮ, ವಿನುತಾ ಮಾಗಡಿ ದ್ವಿತೀಯ, ರೇಣುಕಾ ಜಿ. ಕಾಗೋಡು ತೃತೀಯ, ಭವಾನಿ ಬರದವಳ್ಳಿ ನಾಲ್ಕು ಹಾಗೂ ಕಾವ್ಯ ಕುಗ್ವೆ ಐದನೇ ಬಹುಮಾನ ಗಳಿಸಿದರು.