ರಕ್ತದಾನದಿಂದ ದೇಹ ಮತ್ತು ಮನಸ್ಸು ಸಧೃಢವಾಗುತ್ತದೆ. ರಕ್ತಕ್ಕೆ ರಕ್ತವೇ ಬದಲಿಯಾಗಬಲ್ಲುದೇ ಹೊರತು ಇದನ್ನು ಕೃತಕವಾಗಿ ತಯಾರಿಸಲು ಸಾಧ್ಯವೇ ಇಲ್ಲ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಚಿದಾನಂದ ವಟಾರೆ ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ನಗರದ ಎ.ಟಿ.ಎನ್.ಸಿ ಕಾಲೇಜಿನ ಚಂದನಾ ಸಭಾಂಗಣದಲ್ಲಿ, ಎನ್.ಇ.ಎಸ್., ಮತ್ತು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ತರುಣೋದಯ ಘಟಕ, ಎನ್.ಎಸ್.ಎಸ್. ಸಂಸ್ಥೆ, ಹಾಗೂ ಯೂತ್ ರೆಡ್ ಕ್ರಾಸ್ ಘಟಕದವತಿಯಿಂದ, ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವೈದ್ಯರ ಸಲಹೆ ಮೇರೆಗೆ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ, ಹೃದಯಘಾತದ ಪ್ರಮಾಣ ಕಡಿಮೆಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ರಕ್ತದಾನ ಮಾಡುವುದರಿಂದ, ಸದಾ ಲವಲವಿಕೆಯಿಂದ ಇರಲು ಸಾಧ್ಯ. ಏಕಾಗ್ರತೆ ಹೆಚ್ಚಾಗುತ್ತದೆ. ಮತ್ತೊಬ್ಬರ ಪ್ರಾಣ ಉಳಿಸುವಂತಹ ಪವಿತ್ರ ಕಾರ್ಯ ಮಾಡುವ ಸಂತಸ ಇರುತ್ತದೆ ಎಂದು ಚಿದಾನಂದ್ ವಟಾರೆ ಹೇಳಿದರು. ಪ್ರಸ್ತುತ ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿವೆ. ನಿತ್ಯವೂ ನೂರಾರು ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದು, ರಕ್ತದಾನಿಗಳು ಮುಂದೆ ಬರಬೇಕೆಂದು ಮನವಿ ಮಾಡಿಕೊಂಡರು. ಒಂದು ಯೂನಿಟ್ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಬಹುದಾಗಿದ್ದು, ಕೊರೋನಾ ಸಂದರ್ಭದಲ್ಲಿ ರಕ್ತದ ಬೇಡಿಕೆ ಹೆಚ್ಚಾಗಿದೆ. ಅದರ ಕೊರತೆ ನೀಗಿಸಲು ಯುವಕರು ಮುಂದಾಗಬೇಕೆಂದು ಕಾಲೇಜು ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು. ನಾನು ಕೂಡ ಈ ಸಂದರ್ಭದಲ್ಲಿ ರಕ್ತದಾನ ಮಾಡಲು ಉತ್ಸುಕನಾಗಿದ್ದು, ಇಂದು ರಕ್ತದಾನ ಮಾಡುತ್ತಿದ್ದೆನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಜಿ. ವಿಜಯ್ ಕುಮಾರ್ ಮಾತನಾಡಿದರು. ಸ್ವಾಮಿ ವಿವೇಕಾನಂದ ಜಗತ್ತು ಕಂಡ ವೀರ ಸನ್ಯಾಸಿಯಾಗಿದ್ದು, ಇಂದು ಅವರ 150 ಜನ್ಮ ದಿನಾಚರಣೆ ಅಂಗವಾಗಿ ದೇಶದಾದ್ಯಂತ ಯೂತ್ ಹಾಸ್ಟೆಲ್ ನ ಎಲ್ಲಾ ಘಟಕಗಳು ರಕ್ತದಾನ ಶಿಬಿರ ಹಮ್ಮಿಕೊಂಡಿವೆ. ಇಂತಹ ಪವಿತ್ರ ಕಾರ್ಯದಲ್ಲಿ ದೇಶದ ಸಾವಿರಾರು ಯುವಕರು ಭಾಗಿಯಾಗಿದ್ದಾರೆ. ಸ್ವಾಮಿ ವಿವೇಕಾನಂದ ಅವರ ತತ್ವ ಮತ್ತು ಸಂದೇಶ ಮತ್ತು ಆದರ್ಶ ಗುಣಗಳು ಯುವಕರಿಗೆ ಮಾದರಿಯಾಗಿದ್ದು, ಯುವಕರು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಅಲ್ಲದೇ, ಯೂತ್ ಹಾಸ್ಟೆಲ್ ಯುವಕರಿಗಾಗಿಯೇ ಇದ್ದು, ಚಾರಣ, ಸಾಹಸಕ್ಕೆ ಯುವಕರು ಮುಂದಾಗುವ ಮೂಲಕ ಯೂತ್ ಹಾಸ್ಟೆಲ್ ಸಂಸ್ಥೆಯನ್ನು ಬೆಳೆಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ತರುಣೋದಯ ಘಟಕದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕುಮಾರ್, ವೈ.ಹೆಚ್.ಎ.ಐ. ನ ರಾಷ್ಟ್ರೀಯ ಸದಸ್ಯ ಆ.ನಾ. ವಿಜೇಂದ್ರರಾವ್, ವೈ.ಹೆಚ್.ಎ.ಐ. ನ ರಾಷ್ಟ್ರೀಯ ಹಾಸ್ಟೆಲ್ ಅಭಿವೃದ್ಧಿ ಸಮಿತಿ ಸದಸ್ಯ ದಿಲಿಪ್ ನಾಡಿಗ್, ಎನ್.ಇ.ಎಸ್. ನ ಉಪಾಧ್ಯಕ್ಷ ಆಶ್ವಥ್ ನಾರಾಯಣ ಶೆಟ್ಟಿ, ಎಟಿಎನ್ ಸಿ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಪ್ರೋ. ಕೆ.ಎಂ. ನಾಗರಾಜ್, ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಸುರೇಶ್ ಹೆಚ್.ಎಂ. ಸೇರಿದಂತೆ, ಇತರರು ಉಪಸ್ಥಿತರರಿದ್ದರು.
previous post