ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯಲ್ಲಿ ತಪ್ಪು ಹುಡುಕುವವರು ಮೊಸರಲ್ಲಿ ಕಲ್ಲು ಹುಡುಕುವವರು ಎಂದು ಬಿಜೆಪಿ ರಾಷ್ಠ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಬುಧವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕಾಯಿದೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೆಗೆದುಕೊಂಡಿರುವ ನಿರ್ಧಾರವನ್ನು ಬಿಜೆಪಿ ಸ್ವಾಗತಿಸುತ್ತದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ವಿಧೇಯಕಗಳು ರೈತ ಪರವಾಗಿವೆ. ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ತಜ್ಞರ ಜತೆ ಸಮಾಲೋಚನೆ ಮಾಡಿ ಈ ಕಾಯಿದೆ ತಂದಿದ್ದಾರೆ ಎಂದು ಅವರು ಹೇಳಿದರು.
ರೈತರು ಬೆಳೆಯುವ ೨೮ ಬೆಳೆಗಳಿಗೆ ಬೆಂಬಲ ಘೋಷಿಸುವ ಕ್ರಾಂತಿಕಾರಿ ನಿರ್ಧಾರವನ್ನು ಸರಕಾರ ಜಾರಿಗೆ ತಂದಿದೆ. ಸುಮ್ಮನೆ ವಿರೋಧ ಮಾಡಬೇಕೆಂದೇ ಈ ಕಾಯಿದೆಗಳನ್ನು ವಿರೊಧಿಸಲಾಗುತ್ತಿದೆ. ರೈತರಿಗಿಂತ ಬಾಹ್ಯ ಹಿತಗಳೇ ಇದರ ಹಿಂದೆ ಕೆಲಸ ಮಾಡುತ್ತಿರುವಂತಿದೆ. ಮುಂದೆ ನ್ಯಾಯಾಲಯ ಏನು ತೀರ್ಮಾನ ತೆಗೆದುಕೊಳ್ಳುತ್ತದೊ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸಿಟಿ ರವಿ ಹೇಳಿದರು.
ಶಿವಮೊಗ್ಗದಲ್ಲಿ ಜನಸೇವಕ ಸಮಾವೇಶ ನಡೆಸಲಾಯಿತು. ಗ್ರಾಮೀಣ ಭಾಗದಲ್ಲಿ ನಮ್ಮ ಪಕ್ಷಕ್ಕೆ ಅಪಾರವಾದ ಮನ್ನಣೆ ಸಿಕ್ಕಿರುವುದು ಈ ಸಮಾವೇಶದಿಂದ ಗೊತ್ತಾಯಿತು. ಇದೇ ಸ್ಫೂರ್ತಿಯಿಂದ ಮುಂದಿನ ಚುನಾವಣೆಗಳಲ್ಲಿ ಗೆಲ್ಲುವ ನಿಟ್ಟಿನಲ್ಲಿ ಪಕ್ಷ ಹೆಜ್ಜೆ ಇಡಲಿದೆ ಎಂದು ಹೇಳಿದರು.
ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ , ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮತ್ತಿತರರಿದ್ದರು.
previous post
next post