ತೀರ್ಥಹಳ್ಳಿ; ಆಗಸದಲ್ಲಿ ನಕ್ಷತ್ರಗಳ ಚಿತ್ತಾರ ಬಿಡಿಸುವ ಪಟಾಕಿಗಳು, ಬೆಳಕಿನಾಟಕ್ಕೆ ತಾಳ ಹಾಕುತಿದ್ದ ನೀರಿನಲೆಗಳು, ಕಣ್ಣು ಹಾಯಿಸಿದಷ್ಟಕ್ಕೂ ಜನ..ಜನ ಇದು ಎಳ್ಳಮವಾಸ್ಯೆ ಅಂತಿಮ ದಿನವಾದ ಶುಕ್ರವಾರ ತುಂಗೆಯ ತಟದಲ್ಲಿರುವ ಶ್ರೀರಾಮೇಶ್ವರ ದೇವರ ತೆಪ್ಪೋತ್ಸವದ ದೃಶ್ಯ. ಕೊರೊನ ಭಯದಲ್ಲಿ ಮನೆಯೊಳಗೆ ಕುಳಿತಿದ್ದ ಮಲೆ ಸೀಮೆಯ ಜನ ಐತಿಹಾಸಿಕ ತೆಪ್ಪೋತ್ಸವ ಕಣ್ತುಂಬಿಕೊಳ್ಳಲು ತುಂಗೆಯ ಮರಳುಗುಡ್ಡೆಯಲ್ಲಿ ಜಮಾಯಿಸಿತ್ತು. ತುಂಗೆಗೆ ಕಟ್ಟಿದ್ದ ಕಮಾನು ಸೇತುವೆ ದೀಪಾಲಂಕಾರದಿಂದ ಜಗಮಗಿಸುತ್ತಿದ್ದರೆ, ಮಹಿಳೆಯರು ಮಕ್ಕಳಾದಿಯಾಗಿ ತೆಪ್ಪದ ಮೇಲೆ ದೇವರ ತೇರನ್ನು ನೋಡಿ ಭಕ್ತಿ ಪರವಶವಾದರು.
ಮಲೆನಾಡಿನ ಪ್ರಸಿದ್ದ ತೆಪ್ಪೋತ್ಸವಕ್ಕೆ ಪ್ರತಿ ಬಾರಿ ಸಹಸ್ರಾರು ಸಂಖ್ಯೆಯಲ್ಲಿ ಜನ ಹರಿದು ಬರುತ್ತಿದ್ದರು. ಈ ಬಾರಿ ಜನ ಅಷ್ಟಿಲ್ಲದಿದ್ದರೂ, ಸಂಭ್ರಮಕ್ಕೇನೂ ಕೊರತೆ ಇರಲಿಲ್ಲ. ದೇವರ ಮೂರ್ತಿಯನ್ನು ವಿಶೇಷ ಪೂಜೆ ನಂತರ ತುಂಗಾ ತೀರಕ್ಕೆ ತಂದು ತೆಪ್ಪೋತ್ಸವದಲ್ಲಿರಿಸಿ ಪೂಜೆ ಸಲ್ಲಿಸಿದ ನಂತರ ತುಂಗೆಯಲ್ಲಿ ಸುತ್ತು ಬರಿಸಿದರು.
ಜನಪದ ಉತ್ಸವ;
ಈ ಬಾರಿ ವಿಶೇಷವಾಗಿ ಜಾನಪದಕ್ಕೆ ಒತ್ತು ನೀಡಿ ತುಂಗೆಯದಡದಲ್ಲಿ ಜನಪದ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.ಕ್ಷೇತ್ರದ ಶಾಸಕ ಆರಗ ಜ್ಙಾನೇಂದ್ರ ಉತ್ಸವವನ್ನು ಉದ್ಘಾಟಿಸಿದರು.