ಭದ್ರಾವತಿಯಲ್ಲಿ ಪ್ರಾರಂಭವಾಗಲಿರುವ ಆರ್‌ಎಎಫ್ ಘಟಕದಿಂದ ಭದ್ರಾವತಿಯಲ್ಲಿ ಒಂದು ಉಪನಗರ ನಿರ್ಮಾಣವಾಗಲಿದ್ದು, ಇದರಿಂದ ಸ್ಥಳೀಯ ಆರ್ಥಿಕ ವ್ಯವಸ್ಥೆ ಸುಧಾರಿಸಲಿದೆ.
ಶನಿವಾರ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಈ ವಿಷಯ ತಿಳಿಸಿದರು.
ನೂತನ ಘಟಕ ಸ್ಥಾಪನೆಯಿಂದ ದಕ್ಷಿಣ ಭಾರತದಲ್ಲಿ ಶಾಂತಿಸುವ್ಯವಸ್ಥೆ ಕಾಪಾಡಲು ಅನುಕೂಲವಾಗಲಿದೆ. ೩೫೦ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಘಟಕದಲ್ಲಿ ವಸತಿಗೃಹಗಳು, ಆಸ್ಪತ್ರೆ, ಕೇಂದ್ರೀಯ ವಿದ್ಯಾಲಯ, ಸಕಲ ಸೌಲಭ್ಯ ಹೊಂದಿರುವ ಕ್ರೀಡಾಂಗಣ ನಿರ್ಮಾಣವಾಗಲಿದೆ. ಸ್ಥಳೀಯ ಆರ್ಥಿಕ ವಹಿವಾಟು ಹೆಚ್ಚುವುದಲ್ಲದೆ, ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗವುದು ಎಂದು ಅಮಿತ್ ಶಾ ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿ, ಇದೊಂದು ಐತಹಾಸಿಕ ದಿನ. ಸಶಸ್ತ್ರಪಡೆಯ ಘಟಕದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕೀರ್ತಿ ಇನ್ನಷ್ಟು ಹೆಚ್ಚಲಿದೆ. ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ರಾಜ್ಯ ಸರಕಾರ ನೀಡಲಿದೆ ಎಂದು ಹೇಳಿದರು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವತ್ಥನಾರಾಯಣ, ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕ ಬಿ.ಕೆ.ಸಂಗಮೇಶ್ ಮತ್ತಿತರರು ಹಾಜರಿದ್ದರು.