ಶಿವಮೊಗ್ಗ ಸಮೀಪದ ಗೋವಿಂದಪುರದಲ್ಲಿ 3ಸಾವಿರ ಆಶ್ರಯ ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಮುಂದಿನ 15ದಿನಗಳಲ್ಲಿ ಕಾರ್ಯಾದೇಶವನ್ನು ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅವರು ಶುಕ್ರವಾರ ಗೋವಿಂದಪುರ ಆಶ್ರಯ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಮಾದರಿ ಮನೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಿರ್ಮಿತಿ ಕೇಂದ್ರದ ವತಿಯಿಂದ ಗೋವಿಂದಪುರದಲ್ಲಿ ಜಿ ಪ್ಲಸ್ ಟು ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಾಣ ಮಾಡಲಾಗಿದೆ. ಪ್ರತಿ ಬ್ಲಾಕ್‍ನಲ್ಲಿ 24ಮನೆಗಳನ್ನು ನಿರ್ಮಿಸಲಾಗಿದ್ದು, ಅಂತಹ 125ಬ್ಲಾಕ್‍ಗಳನ್ನು ನಿರ್ಮಿಸಬೇಕಾಗಿದೆ. ಫಲಾನುಭವಿಗಳಿಗೆ ಮಾದರಿ ಮನೆಗಳನ್ನು ತೋರಿಸಲಾಗುವುದು. ಮನೆಗಳ ನಿರ್ಮಾಣಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಎರಡು ವರ್ಷಗಳ ಒಳಗಾಗಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಂತೆ ಹಂತ ಹಂತವಾಗಿ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಲಾಟರಿ ಮೂಲಕ ಮನೆಗಳನ್ನು ನಿಗದಿಪಡಿಸಲಾಗುವುದು. ಗೋವಿಂದಪುರ ಆಶ್ರಯ ಬಡಾವಣೆಗೆ ಕುಡಿಯುವ ನೀರು ಪೂರೈಕೆ ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಅನುದಾನ ಒದಗಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.
ಗೋಪಿಶೆಟ್ಟಿಕೊಪ್ಪ ಮತ್ತು ಗೋವಿಂದಪುರದಲ್ಲಿ ಬಿಪಿಎಲ್ ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಮನೆಗಳಿಗೆ ಈಗಾಗಲೇ 2800ಮಂದಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ತಮ್ಮ ಪಾಲಿನ ಹಣವನ್ನು ಪಾವತಿಸಿದ್ದಾರೆ. ಎಸ್‍ಸಿ ಮತ್ತು ಎಸ್‍ಟಿ ಫಲಾನುಭವಿಗಳು ತಲಾ 50ಸಾವಿರ ರೂ. ಮತ್ತು ಇತರ ಫಲಾನುಭವಿಗಳು ತಲಾ 50ಸಾವಿರ ರೂ. ಪಾವತಿ ಮಾಡಿದ್ದಾರೆ. ಒಟ್ಟು 5.85ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಎರಡು ಲಕ್ಷ ರೂ. ಬ್ಯಾಂಕ್‍ನಿಂದ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಮೂರು ಲಕ್ಷ ರೂ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಭರಿಸಲಿದೆ ಎಂದು ಹೇಳಿದರು.ಮೇಯರ್ ಸುವರ್ಣಾ ಶಂಕರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.