ಮಹಾ ಸ್ಫೋಟದಿಂದ ಮೂವರು ಪಾರಾಗಿದ್ದು ಹೇಗೆ ಗೊತ್ತಾ ?
ಶಿವಮೊಗ್ಗ ಸಮೀಪದ ಹುಣಸೋಡು ಸ್ಫೋಟ ಪ್ರಕರಣದ ಸತ್ಯಾತತೆ ಬಗ್ಗೆ ಮಾಧ್ಯಮಗಳಲ್ಲಿ ತರಾವರಿ ವ್ಯಾಖ್ಯಾನಗಳು ಹರಿದಾಡುತ್ತಿವೆ. ಆದರೆ ಅಂದಿನ ಘಟನೆಗೆ ಅಸಲಿ ಕಾರಣ ಏನು ಎಂಬುದು ಮಾತ್ರ ಗಣಿ ಧೂಳಿನಲ್ಲಿ ಸುಳಿದಾಡುತ್ತಲೇ ಇದೆ. ಘಟನೆಯಲ್ಲಿ ಸತ್ತವರು, ಉಳಿದವರು ಮತ್ತು ನಾಪತ್ತೆಯಾದವರು ಎಷ್ಟು ಮಂದಿ ಎಂಬ ಬಗ್ಗೆಯೇ ಹಲವು ಚರ್ಚೆಗಳು ನಡೆದಿವೆ. ಸ್ಫೋಟದ ತೀವ್ರತೆಗೆ ಸತ್ತವರ ದೇಹಗಳು ಗುರುತಿಸಲಾರದಷ್ಟು ಛಿದ್ರವಾಗಿರುವುದೂ ಈ ಗೊಂದಲಕ್ಕೆ ಕಾರಣವೂ ಹೌದು. ಆದರೆ ಎರಡು ದಿನಗಳ ಬಳಿಕ ಈ ನಿಗೂಢತೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಅಂದಿನ ಮಹಾ ದುರಂತದಲ್ಲಿ ನಿಮಿಷಗಳ ಅಂತರದಲ್ಲಿ ಮೂವರು ವ್ಯಕ್ತಿಗಳು ಪಾರಾಗಿದ್ದಾರೆ ಎಂಬ ಸತ್ಯ ಯಾರಿಗೂ ಗೊತ್ತಿಲ್ಲ.
ಸ್ಫೋಟಕಗಳ ಜಂಕ್ಷನ್:
ಹುಣಸೋಡಿನ ಕಲ್ಲುಕ್ವಾರಿಗಳ ಪ್ರದೇಶ ಒಂದು ರೀತಿಯ ಸ್ಫೋಟಕಗಳ ಜಂಕ್ಷನ್ ಆಗಿ ಕಾರ್ಯನಿರ್ವಹಿಸುತಿತ್ತು ಎಂಬುದು ಈ ದುರಂತದ ಬಳಿಕ ಗೊತ್ತಾಗಿದೆ. ಈ ಕಾರಣದಿಂದಾಗಿಯೇ ಜ.೨೧ ರ ರಾತ್ರಿ ಯಂತ್ರಗಳ ಬದಲು ರಣ ಭೀಕರ ಸ್ಫೋಟಕ ಸದ್ದುಮಾಡಿದೆ. ಗುರುವಾರ ರಾತ್ರಿ ೧೦ ಗಂಟೆ ಹೊತ್ತಿಗೆ ನಿಗದಿಯಂತೆ ತಮಿಳುನಾಡಿನಿಂದ ಸ್ಫೋಟಕ ಮತ್ತು ಕಚ್ಛಾ ಸಿಡಿಮದ್ದು ಹಾಗೂ ರಾಸಾಯನಿಕ ತುಂಬಿದ ಲಾರಿ ಬಂದಿದೆ. ಅಂದು ಕೆಲ ಕ್ವಾರಿಗಳವರಿಗೆ ಮಾಲು ಡಿಲವರಿಯಾಗಬೇಕಿದ್ದರಿಂದ ಅವರು ಮಾತ್ರ ಸ್ಥಳಕ್ಕೆ ಬಂದಿದ್ದರು. ಮುಂಚೆಯೇ ವಿಷಯ ತಿಳಿದು ಬಂದಿದ್ದವರಿಗೆ ಸ್ಫೊಟಕ ಕೊಡುವಾಗ ಈ ಭಾರೀ ದುರಂತ ನಡೆದುಹೋಗಿದೆ ಎಂಬ ಅಂಶ ತನಿಖಾಧಿಕಾರಿಗಳಿಗೆ ಗೊತ್ತಾಗಿದೆ ಎನ್ನಲಾಗಿದೆ.
ಹಿಂಬಾಲಿಸುತ್ತೇವೆ ಎಂದವರು ಬಾರದ ಲೋಕಕ್ಕೆ ಹೋದರು:
ಭದ್ರಾವತಿ ತಾಲೂಕು ಅಂತರಗಂಗೆಯ ಶಶಿ ಎಂಬಾತ ಚಲಾಯಿಸುತಿದ್ದ ಬೊಲೆರೊ ವಾಹನಕ್ಕೆ ಮೊದಲು ಸ್ಫೋಟಕಗಳನ್ನು ತುಂಬಿಸಲಾಗಿದೆ. ಶಶಿ ಹಾಗೂ ಇನ್ನಿಬ್ಬರು ತಮ್ಮದೇ ಊರಿನ ಮಂಜುನಾಥ ಹಾಗೂ ಪ್ರವೀಣ ಅವರಿಗೆ ನೀವು ಹಿಂದಿನಿಂದ ಬನ್ನಿ ಮುಂದೆ ಹೋಗ್ತಿರ್‍ತೇವೆ ಎಂದು ಹೇಳಿ ಗಾಡಿ ಚಾಲನೆ ಮಾಡಿಕೊಂಡು ಮುಂದಾದರು. ಶಶಿ ಅವರ ವಾಹನ ಹುಣಸೋಡು ಊರಿನ ಹತ್ತಿರಕ್ಕೂ ಬಂದಿರಲಿಲ್ಲ. ಆಗಲೇ ಕೇಳಿದ್ದು ಭೂಕಂಪನ ಸ್ವರೂಪಿ ಭೀಕರ ಶಬ್ಧ. ಈ ಶಬ್ಧದಿಂದಲೇ ಶಶಿ ಮತ್ತವನ ಸಹಚರರಿಗೆ ಹಿಂಬಾಲಿಸಬೇಕಿದ್ದ ಗೆಳೆಯರು ಬಾರದಲೋಕಕ್ಕೆ ಹೋದರೆಂಬುದು ಗೊತ್ತಾಯಿತು. ಕೂಡಲೇ ಎಲ್ಲರೂ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡರು.
ಅಳಬೇಡಿ ನಾವು ಬದುಕಿದ್ದೇವೆ:
ಹುಣಸೋಡು ಮಹಾಸ್ಫೋಟ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆ ಅಂತರಗಂಗೆಯಲ್ಲಿನ ಕೆಲವು ಕುಟುಂಬಗಳಲ್ಲಿ ಸೂತಕದ ಛಾಯೆ ಆವರಿಸಿದೆ. ಮನೆಗೆ ಬರದಿದ್ದ ಮಕ್ಕಳಿಗಾಗಿ ಫೋನ್ ಮಾಡಿದರೆ ಎಲ್ಲಾ ಫೋನುಗಳು ಸ್ವಿಚ್ ಆಫ್ ಆಗಿವೆ. ಆಗ ಅವರು ವಿಧಿಯಿಲ್ಲದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಛಿದ್ರಗೊಂಡ ದೇಹದ ರಾಶಿಯಲ್ಲಿ ತಮ್ಮವರ ಗುರುತೆಲ್ಲಿ ಸಿಗುತ್ತದೆ ?ನಮ್ಮವರೂ ಸತ್ತಿರಬೇಕೆಂದು ಅಂತರಗಂಗೆಯ ಎಲ್ಲ ಕುಟುಂಬದವರೂ ರೋದಿಸಲಾರಂಭಿಸಿದ್ದಾರೆ. ಈ ದುಃಖದ ಮಡುವಿನಲ್ಲಿರುವಾಗಲೇ ಬಂದ ಒಂದು ಕರೆ ಇಲ್ಲ ನಾವು ಬದುಕಿದ್ದೇವೆ ಎಂದು ಹೇಳಿದೆ. ಅತೀವ ದುಖದಲ್ಲಿದ್ದ ಕೆಲವರು ಹಾಗೆಯೇ ಕಣ್ಣೊರಿಸಿಕೊಂಡು ಅಲ್ಲಿಂದ ಹೊರಟಿದ್ದಾರೆ. ಹೀಗೆ ಆಸ್ಪತ್ರೆಯಿಂದ ತೆರಳಿದವರ ಮೂವರು ಬಂಧುಗಳ ಬಳಿ ನಿಗೂಢ ರಹಸ್ಯ ಅಡಗಿದೆ.
ಎರಡು ಶವಗಳು ಗುರುತು ಸಿಕ್ಕಿಲ್ಲ:
ಹುಣಸೋಡು ಘಟನೆಯಲ್ಲಿ ಸತ್ತವರ ಸಂಖ್ಯೆ ೬ ಎಂಬುದು ಈಗಾಗಲೇ ಗೊತ್ತಾಗಿದೆ. ಅಂತರಗಂಗೆಯ ಇಬ್ಬರು, ಆಂದ್ರದ ಇಬ್ಬರನ್ನು ಗುರುತಿಸಲಾಗಿದೆ. ಆದರೆ ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ.
ಸ್ಫೋಟ ಹೇಗಾಯಿತು?
ಜಿಲೆಟಿನ್ ಸ್ಫೋಟ ಪ್ರಕರಣವನ್ನು ಹಲವರು ಹಲವು ರೀತಿ ವ್ಯಾಖ್ಯಾನಿಸುತ್ತಿದ್ದಾರೆ. ಆದರೆ ತಮಿಳುನಾಡಿನಿಂದ ಬಂದ ಲಾರಿಯಿಂದ ಮಾಲನ್ನು ಸ್ಥಳೀಯ ವಾಹನಗಳನ್ನು ವರ್ಗಾಯಿಸುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿಯೋ, ಅಥವಾ ಅಮೋನಿಯಂ ನೈಟ್ರೇಟ್ ಇದ್ದ ಕಾರಣ ಘರ್ಷಣೆಯಿಂದಾಗಿಯೊ ಸ್ಫೋಟ ಸಂಭವಿಸಿರಬಹುದು ಎಂದು ಹೇಳಲಾಗಿದೆ. ತಲೆಮರೆಸಿಕೊಂಡಿರುವ ಭದ್ರಾವತಿ ತಾಲೂಕು ಅಂತರಗಂಗೆಯ ಮೂವರು ವ್ಯಕ್ತಿಗಳು ಮಾತ್ರ ಅಲ್ಲಿ ಏನು ನಡೆಯುತಿತ್ತು. ಎಷ್ಟು ಸ್ಫೋಟಕ ಇತ್ತು ಮತ್ತು ಎಲ್ಲೆಲ್ಲಿಗೆ ಹೋಗುತಿತ್ತು ಎಂದು ಹೇಳಬಹುದು. ಈ ಎಲ್ಲವೂ ಗೊತ್ತಿರುವ ಕ್ರಶರ್ ಪಾಲುದಾರರ ಬಂಧನವನ್ನು ಪೊಲೀಸರು ಇನ್ನೂ ಅಧಿಕೃತವಾಗಿ ಹೇಳಿಲ್ಲದ ಕಾರಣ ಪ್ರಕರಣಕ್ಕೆ ಯಾವ ರೀತಿಯ ತಿರುವನ್ನಾದರೂ ಕೊಡುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗದು.
previous post
next post