ರಾಜ್ಯದಲ್ಲಿನ ಎಲ್ಲ ಅಕ್ರಮ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಲು ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ನಿಲ್ಲಿಸುವಂತೆ ಎಲ್ಲಾ ಡಿಸಿಗಳಿಗೆ ಸೂಚನೆ ನೀಡಿದ್ದೇನೆ. ಅಕ್ರಮ ಗಣಿಗಾರಿಕೆ ತತಕ್ಷಣ ನಿಲ್ಲಿಸಬೇಕು.
ಅರ್ಜಿ ಹಾಕಿ ನಂತರ ಪರಿಶೀಲನೆ ನಡೆಸಿ ಪರವಾನಿಗೆ ಪಡೆಯಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಬಳಿಕವಷ್ಟೇ ಲೈಸನ್ಸ್ ನೀಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮ ಕಲ್ಲುಗಣಿಗಾರಿಕೆ ಸದ್ಯಕ್ಕೆ ನಿಲ್ಲಬೇಕು. ಬೇಬಿ ಬೆಟ್ಟದ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಕೆಆರ್ ಎಸ್ ಡ್ಯಾಂ ಗೆ ಸಮಸ್ಯೆ ಆಗಲಿದೆ. ಹಲವು ಬಾರಿ ನಿಲ್ಲಿಸುವಂತೆ ಸೂಚಿಸಲಾಗಿದೆ. ಆದರೂ ಅಲ್ಲೊಂದು ಇಲ್ಲೊಂದು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಅಭಿವೃದ್ಧಿ ಕಾರ್ಯಗಳಿಗೆ ಜೆಲ್ಲಿ ಬೇಕು. ಆದರೆ, ಅಕ್ರಮ ಗಣಿಗಾರಿಕೆ ನಿಲ್ಲಬೇಕು ಎಂದ ಮುಖ್ಯಮಂತ್ರಿ ಶನಿವಾರ ಅಕ್ರಮ ಗಣಿಗಾರಿಕೆ ಸಕ್ರಮಗೊಳಿಸುವುದಾಗಿ ನೀಡಿದ್ದ ಹೇಳಿಕೆ ಅಪಾರ್ಥವಾಗಿದೆ. ಆ ಅರ್ಥದಲ್ಲಿ ನಾನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರಲ್ಲದೆ, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆದರೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ರೈತ ಹೋರಾಟಕ್ಕೆ ವಿರೋಧವಿಲ್ಲ:
ರಾಜ್ಯದಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ನನ್ನ ವಿರೋಧ ಇಲ್ಲ. ಶಾಂತರೀತಿಯಿಂದ ಪ್ರತಿಭಟನೆ ಮಾಡಲಿ. ಸರಕಾರ ಯಾವತ್ತೂ ರೈತರ ಪರವಾಗಿದೆ ಎಂದು ಹೇಳಿದರು. ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆ ಉತ್ತರ ಪತ್ರಿಕೆ ಲೀಕ್ ಆಗಿರುವುದು ಅಕ್ಷಮ್ಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಶಿವಮೊಗ್ಗ ಹುಣಸೋಡು ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
previous post
next post