ಭಾಷೆ, ಗಡಿ ಹಾಗೂ ನೀರಿನ ವಿಚಾರದಲ್ಲಿ ಯಾರೂ ಯಾವ ತಗಾದೆ ಮಾಡದೆ ಒಕ್ಕೂಟ ವ್ಯವಸ್ಥೆಯಲ್ಲಿ ಒಂದಾಗಿ ಹೋಗುವುದರಲ್ಲಿ ಸುಖವಿದೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಭಾನುವಾರ ಶಿವಮೊಗ್ಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಭಾಗ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಾ ರಾಜ್ಯಗಳಲ್ಲೂ ಅವರವರ ಭಾಷೆ ,ಗಡಿ ಮತ್ತು ನದಿ ಬಗ್ಗೆ ಅಭಿಮಾನ ಇರುತ್ತದೆ. ರಾಷ್ಟ್ರಕವಿ ಕುವೆಂಪು ಹೇಳಿದ ಹಾಗೆ ನಾವೆಲ್ಲರೂ ಭಾರತಾಂಬೆಯ ಮಕ್ಕಳು. ಬೆಂಗಳೂರಿನಲ್ಲಿ ತಿರುವಳ್ಳವರ್ ಹಾಗೂ ತಮಿಳುನಾಡಿನಲ್ಲಿ ಸರ್ವಜ್ಞನ ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ ಭಾಷಿಕ ಸಹಭಾಳ್ವೆಗೆ ಯಡಿಯೂರಪ್ಪನವರು ಕೊಡುಗೆ ನೀಡಿದ್ದನ್ನು ಸ್ಮರಿಸಬಹುದು.
ಯಾವುದೋ ಮೂಲೆಯಲ್ಲಿ ಯಾರೊ ಕಿಡಿಗೇಡಿಗಳು ಮಾಡಿದ ಕೃತ್ಯಗಳಿಂದ ವಿಭಿನ್ನ ಭಾಷೆಗಳ ನಡುವಿನ ಜನರು ಕಚ್ಚಾಡಬಾರದು. ನಾವೆಲ್ಲ ಭಾರತ ಮಾತೆಯ ಮಕ್ಕಳು ಇಲ್ಲಿ ಸಹಬಾಳ್ವೆ ಮುಖ್ಯ. ಕನ್ನಡ ಸಾಹಿತ್ಯ ಹಾಗೂ ಭಾಷೆ, ಕಲೆ ಬೆಳವಣಿಗೆಗೆ ಸರಕಾರ ಯಾವತ್ತೂ ಸಾಹಿತ್ಯ ಪರಿಷತ್ ಸೇರಿದಂತೆ ಎಲ್ಲ ಸಂಘಟನೆಗಳೊಂದಿಗೆ ಇರುತ್ತದೆ ಎಂದು ಈಶ್ವರಪ್ಪ ಹೇಳಿದರು.
ಸಮ್ಮೇಳನಾಧ್ಯಕ್ಷ ಡಾ.ಕೆ.ಪದ್ಮನಾಭ ಉಡುಪ, ಡಾ.ಎಚ್.ಎಸ್.ರುದ್ರೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂಕರಪ್ಪ, ಎಂ.ಎನ್.ಸುಂದರರಾಜ್, ಸಂಪತ್‌ಕುಮಾರ್, ರುದ್ರಮುನಿ ಮತ್ತಿತರರಿದ್ದರು. ಬಸವಕೇಂದ್ರದ ಡಾ.ಬಸವ ಮರುಳಸಿದ್ದಸ್ವಾಮೀಜಿ ಸಾನ್ನಿದ್ಯವಹಿಸಿದ್ದರು.
ದಿನವಿಡೀ ವಿವಿಧ ಸಾಹಿತ್ಯ ಗೋಷ್ಟಿಗಳು ನಡೆದವು ನಾಡಿನ ಗಣ್ಯ ಚಿಂತಕರು ಹಾಗೂ ಸಾಹಿತಿಗಳು ತಮ್ಮ ವಿಚಾರ ಮಂಡನೆ ಮಾಡಿದರು.
previous post
next post