Malenadu Mitra
ರಾಜ್ಯ ಶಿವಮೊಗ್ಗ

ಹೋರಾಟಗಾರರ ಸರಕಾರ ಬೇಕು

ಮಾರಾಟಗಾರರ ಸರ್ಕಾರ ಹೋಗಿ ಹೋರಾಟಗಾರರ ಸರಕಾರ ಬಂದರೆ ಮಾತ್ರ ಈ ದೇಶದ ರೈತರಿಗೆ ನ್ಯಾಯ ಸಿಗುತ್ತದೆ ಎಂದು ರಾಜ್ಯ ರೈತನಾಯಕ ಸಿದ್ದನಗೌಡ ಪಾಟೀಲ್ ಹೇಳಿದರು. ಶಿವಮೊಗ್ಗದಲ್ಲಿ ಮಂಗಳವಾರ ಗಣರಾಜ್ಯೋತ್ಸವ ರೈತ ಪರೇಡ್ ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಬಂಡವಾಳಶಾಹಿಗಳ ಪರವಾಗಿರುವ ಕೇಂದ್ರ ಸರಕಾರ ಎರಡು ತಿಂಗಳಿಂದ ಈ ದೇಶದ ಅನ್ನದಾತರು ಬೀದಿಯಲ್ಲಿ ಕುಳಿತಿದ್ದರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ರೈತ ವಿರೋಧಿ ಕಾಯಿದೆಗಳನ್ನು ಮಾಡಿಯೇ ತೀರುವುದಾಗಿ ಅವರು ನಿರ್ಧರಿಸಿದ್ದಾರೆ. ಈ ಮೂರು ಕಾಯಿದೆಗಳು ಜಾರಿಯಾದರೆ ರೈತ ಸಂಕುಲ ನಾಶವಾಗುತ್ತದೆ. ಕಾರ್ಪೋರೇಟ್ ಸಂಸ್ಥೆಗಳೊಂದಿಗೆ ರೈತರನ್ನು ಸ್ಪರ್ಧೆಗಿಳಿಸಲು ಈ ರೀತಿ ಮಾಡಲಾಗುತ್ತದೆ. ಸಾಂಪ್ರದಾಯಿಕ ಕೃಷಿ ನಾಶವಾಗಿ ಬಹುರಾಷ್ಟ್ರೀಯ ಕಂಪನಿಗಳ ದಾಳಿಗೆ ದೇಶದ ಕೃಷಿ ಕ್ಷೇತ್ರ ಸಿಕ್ಕು ಅವಸಾನವಾಗುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ಪರವಾಗಿ ಈ ದೇಶದ ಮಾಧ್ಯಮಗಳು ವಕಾಲತು ವಹಿಸುತ್ತಿವೆ. ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಕಿಸ್ತಾನದವರಿದ್ದಾರೆ. ಅಲ್ಲಿರುವವರು ರೈತರಲ್ಲ ಎಂದು ಸುದ್ದಿ ಮಾಡಿಸುತ್ತಿದ್ದಾರೆ. ಈ ದೇಶದ ಶೇ೬೦ ರಷ್ಟು ಮಾಧ್ಯಮ ಸಂಸ್ಥೆಗಳು ಅಂಬಾನಿ ಕಂಪನಿ ಪಾಲಾಗಿವೆ ಹಾಗಾಗಿ ಅವರು ಹೇಳಿದಂತೆ ಈ ಸಂಸ್ಥೆಗಳು ಅಪಪ್ರಚಾರ ಮಾಡುತ್ತಿವೆ. ರೈತರೆಂದರೆ ಅದೇ ಮಾಸಲು ಬಟ್ಟೆ ಹಾಕಿಕೊಂಡು ಹೊಲದಲ್ಲಿರಬೇಕು. ತಮ್ಮ ಹಕ್ಕುಗಳನ್ನು ಕೇಳಬಾರದು. ರೈತರ ಮಕ್ಕಳು ಉನ್ನತ ವ್ಯಾಸಂಗ ಮಾಡಬಾರದು. ಅವರು ಇಂಗ್ಲೀಷ್ ಮಾತನಾಡಬಾರದು ಎಂಬ ಧೋರಣೆ ಈ ಮೋದಿ ಸರಕಾರ ಸಚಿವರಲ್ಲಿದೆ ಎಂದು ಪಾಟೀಲ್ ಆರೋಪಿಸಿದರು.


ಹೋರಾಟದಿಂದ ಮಾತ್ರ ನ್ಯಾಯ:
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ದೇಶವನ್ನು ನಾಶ ಮಾಡಲು ಬಂದಿರುವ ಮೋದಿ ಅವರ ಸರಕಾರದಿಂದ ದೇಶದ ರೈತರಿಗೆ ನ್ಯಾಯ ಸಿಗುವುದಿಲ್ಲ. ಹೋರಾಟವೊಂದೇ ನಮಗಿರುವ ಮಾರ್ಗ. ಈ ಹೋರಾಟ ನಿರಂತರವಾಗಿರಬೇಕು. ಯಾವುದೇ ಕಾರಣಕ್ಕೂ ರೈತ ವಿರೋಧಿ ಕಾನೂನುಗಳು ಜಾರಿಯಾಗಲು ಬಿಡಬಾರದು ಎಂದು ಹೇಳಿದರು.
ನಮಗೆ ಉಳುವವನೆ ಹೊಲದೊಡೆಯ ಎಂಬುದೇ ಮೂಲ ಮಂತ್ರ. ಈ ಮಂತ್ರದ ಮೇಲೆಯೇ ಈ ದೇಶದ ಕೃಷಿ ನಿಂತಿದೆ. ಎರಡು ತಿಂಗಳಿಂದ ದಿಲ್ಲಿಯಲ್ಲಿ ನಡೆಯುತ್ತಿರುವ ಹೋರಾಟ ಐತಿಹಾಸಿಕವಾದುದು, ಇದನ್ನು ನೋಡಿದಾಗ ಬದಲಾವಣೆಯ ಕಾಲ ಬಂದಿದೆ ಎಂದು ಅನ್ನಿಸುತ್ತಿದೆ. ಮಹಿಳೆಯರು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಜನ ಜಾಗೃತರಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದರು ಹರ್ಷ ವ್ಯಕ್ತಪಡಿಸಿದರು.
ಮಾತನಾಡುವುದನ್ನು ಚೆನ್ನಾಗಿ ಕಲಿತರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಚ್ಛೇ ದಿನ್ ಬರಲಿದೆ ಎಂದು ತಮ್ಮ ಮನ್‌ಕಿಬಾತ್‌ನಲ್ಲಿ ಹೇಳುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ. ಯಾರು ಬೇಕಾದರೂ ಭೂಮಿ ಕೊಳ್ಳಬಹುದು ಎಂದು ಮಾಡಿರುವ ಕಾಯಿದೆ ಕೃಷಿ ಸಂಸ್ಕೃತಿಯನ್ನು ನಾಶಮಾಡುವುದಾಗಿದೆ. ಇದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು. ಹಣ ಸಿಗುತ್ತದೆ ಎಂದು ರೈತರು ಯಾವುದೇ ಕಾರಣಕ್ಕೂ ಭೂಮಿಯನ್ನು ಮಾರಾಟ ಮಾಡಬಾರದು. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶ ಮುಗ್ಗರಿಸಿ ಬೀಳಲಾರಂಭಿಸಿದೆ. ಕೇವಲ ಹೋರಾಟದಿಂದ ಮಾತ್ರ ನ್ಯಾಯ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ನಾಯಕ ಕೆ.ಟಿ.ಗಂಗಾಧರ್, ಕೇಂದ್ರ ಸರಕಾರದ ರೈತವಿರೋಧಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಮಾತ್ರ ಹೋರಾಟ ನಡೆಯುತ್ತಿಲ್ಲ. ಇಡೀ ದೇಶದಲ್ಲಿ ನಡೆಯುತ್ತಿದೆ. ಆ ಹೋರಾಟಕ್ಕೆ ಬೆಂಬಲವಾಗಿ ಇಂದು ನಾವು ರೈತ ಪರೇಡ್ ನಡೆಸಿದ್ದೇವೆ. ಈ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ದೆಹಲಿ ಗಡಿಯಲ್ಲಿ ಕುಳಿತು ಹೋರಾಟ ಮಾಡುವವರನ್ನು ಖಲಿಸ್ತಾನಿಗಳು ಎಂದು ಅವಮಾನ ಮಾಡುತ್ತಿರುವ ಕೇಂದ್ರ ಸರಕಾರ ಶ್ರಮಿಕರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಕೇಂದ್ರ ಸರಕಾರದ ಮಂತ್ರಿಗಳು ಬರೀ ಸುಳ್ಳುಗಳನ್ನು ಹೇಳಿಕೊಂಡು ಹೋರಾಟ ದಿಕ್ಕುತಪ್ಪಿಸಲು ಯತ್ನಿಸುತ್ತಿದ್ದಾರೆ. ಈ ಸರಕಾರದ ವಿರುದ್ಧ ಇಡೀ ದೇಶದಲ್ಲಿ ಇಂದು ಹೋರಾಟ ನಡೆಯುತ್ತಿದೆ. ಅನ್ನದಾತರನ್ನು ಧಿಕ್ಕರಿಸುತ್ತಿರುವ ಇವರಿಗೆ ಒಳಿತಾಗುವುದಿಲ್ಲ ಎಂದು ಹೇಳಿದರು.
ಟ್ರಾಕ್ಟರ್ ಪರೇಡ್:
ಶಿವಮೊಗ್ಗದ ಸೈನ್ಸ್ ಮೈದಾನದಿಂದ ಆರಂಭವಾದ ಟ್ರಾಕ್ಟರ್ ಪರೇಡ್‌ನಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು. ಎಲ್ಲಾ ಪ್ರಗತಿಪರ ಸಂಘಟನೆಗಳು, ರೈತ ಹಾಗೂ ಬಿಜೆಪಿಯೇತರ ರಾಜಕೀಯ ಪಕ್ಷಗಳ ಕಾರ್ಯಕರ್ತರು ಈ ಐಕ್ಯತಾ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಟ್ರಾಕ್ಟರ್ ಮೇಲೆ ಕುಳಿತು ಪರೇಡ್‌ನಲ್ಲಿ ಭಾಗವಹಿಸಿದ್ದ ಕಾಗೋಡು ತಿಮ್ಮಪ್ಪ ಇಳಿವಯಸ್ಸಿನ ತಮ್ಮಲ್ಲಿ ಇನ್ನೂ ಹೋರಾಟದ ಕಿಚ್ಚು ಇದೆ ಎಂಬುದನ್ನು ಸಾಬೀತುಪಡಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್, ಪ್ರಗತಿಪರ ಚಿಂತಕ ಕೆ.ಪಿ.ಶ್ರೀಪಾಲ್, ಸಂಯುಕ್ತ ರೈತ ಹೋರಾಟ ಸಮಿತಿ ಸಂಚಾಲಕ ಶಿವಾನಂದಕುಗ್ವೆ, ಮುಖಂಡರಾದ ಬಿ.ಆರ್.ಜಯಂತ್, ನಗರದ ಮಹಾದೇವಪ್ಪ, ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ.ಯೋಗಿಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಟ್ರಾಕ್ಟರ್ ಚಾಲನೆ ಮಾಡಿದ ರಾಜನಂದಿನಿ:

ಸಾಗರ ಕಾಂಗ್ರೆಸ್ ನಾಯಕಿ ಹಾಗೂ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಅವರು ಶಿವಮೊಗ್ಗದ ಸೈನ್ಸ್ ಮೈದಾನದಿಂದ ಟ್ರಾಕ್ಟರ್ ಚಾಲನೆ ಮಾಡಿಕೊಂಡು ಬಂದು ಗಮನ ಸೆಳೆದರು. ಅವರೊಂದಿಗೆ ಮಹಿಳಾ ಕಾರ್ಯಕರ್ತರು ಕುಳಿತು ಸಾಥ್ ನೀಡುವ ಮೂಲಕ ಮಹಿಳೆಯರು ಯಾವ ಹೋರಾಟಕ್ಕೂ ಸೈ ಎಂದು ತೋರಿಸಿದರು

Ad Widget

Related posts

ಮಧು ಬಂಗಾರಪ್ಪ-ಸಿದ್ದರಾಮಯ್ಯ ಭೇಟಿ

Malenadu Mirror Desk

ನಮ್ಮ ರಾಮ ಹೊಲಗದ್ದೆಗಳಲ್ಲಿದ್ದಾನೆ: ಯುದ್ಧವೀರ್ ಸಿಂಗ್

Malenadu Mirror Desk

ರೌಡಿಶೀಟರ್ ಕಾಲಿಗೆ ಗುಂಡು ಹೊಡೆದು ಬಂಧನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.