ಹುಣಸೋಡು ಸ್ಫೋಟ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ತನಿಖಾ ಸಂಸ್ಥೆಯಿಂದ ಮಾಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇಡೀ ಸ್ಫೋಟ ಪ್ರಕರಣ ಮತ್ತು ಅದರಿಂದಾದ ಜೀವಹಾನಿ ಹಾಗೂ ಆಸ್ತಿಪಾಸ್ತಿ ಹಾನಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಹೊಣೆಗಾರರು. ಇವರುಗಳ ಗಮನಕ್ಕೆ ಬಾರದೆ ಹುಣಸೋಡು ಸುತ್ತಮುತ್ತ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯಲಾರದು. ಈ ಇಬ್ಬರೂ ನಾಯಕರು ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನೊಡಿಕೊಂಡು ಕಣ್ಣುಮುಚ್ಚಿ ಕುಳಿತಿದ್ದಾರೆ. ಅಕ್ರಮ ಕ್ವಾರಿ ನಡೆಸುವವರಲ್ಲಿ ಬಹುಪಾಲು ಆಡಳಿತ ಪಕ್ಷ ಬಿಜೆಪಿಯ ಸದಸ್ಯರಿದ್ದಾರೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ಹುಣಸೋಡು ಗ್ರಾಮದ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದರ ಬಳಿಕ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಆರು ಜನರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಅಕ್ರಮ ಸ್ಫೋಟಕ ಜಾಲ ಇರುವ ಶಂಕೆಯಿದೆ. ಈ ಜಾಲ ಬೆಳಕಿಗೆ ಬಂದು ತಪ್ಪಿತಸ್ಥರಿಗೆ ಶಿಕ್ಷ ಆಗಬೇಕು. ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿದರೆ ಮಾತ್ರ ಸತ್ಯ ಹೊರಬರಲಿದೆ. ಸ್ಥಳೀಯ ಅಧಿಕಾರಿಗಳಿಂದ ತನಿಖೆ ಮಾಡಿದರೆ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆಯಿದ್ದು, ಅದಕ್ಕೆ ಅವಕಾಶ ನೀಡಬಾರದು. ಈ ವಿಷಯದ ಬಗ್ಗೆ ವಿಧಾನ ಸಭೆಯಲ್ಲಿ ವಿಷಯ ಮಂಡನೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಅನಧಿಕೃತ ಕ್ವಾರಿ
ಶಿವಮೊಗ್ಗ ಜಿಲ್ಲೆಯಲ್ಲಿ ೭೬ ಕ್ವಾರಿ ಹಾಗೂ ೯೭ ಕ್ರಷರ್‌ಗಳು ಮಾತ್ರ ಅಧಿಕೃತವಾಗಿವೆ. ಉಳಿದೆಲ್ಲವೂ ಅನಧಿಕೃತವೇ ಆಗಿವೆ. ಈ ಬಗ್ಗೆ ದೂರುಗಳು ಬಂದಾಗ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಕಣ್ಮುಚ್ಚಿ ಕುಳಿತುಕೊಳ್ಳಿ ಎಂಬ ಸೂಚನೆ ನೀಡಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಧಿಕಾರಿಗಳನ್ನು ಕೇಳಿದರೆ ಅನಧಿಕೃತ ಕ್ವಾರಿ ಮಾಲಿಕರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳುತ್ತಾರೆ. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಅವರು ಜಿಲ್ಲೆಯಲ್ಲಿ ಅನಧಿಕೃತ ಕ್ವಾರಿಗಳು ಮೊದಲಿಂದಲೂ ನಡೆಯುತ್ತಿವೆ ಎಂದು ಹೇಳುತ್ತಾರೆ. ಜ.೨೧ ರಂದು ದುರಂತ ನಡೆದಿರುವ ಕ್ರಷರ್ ಪಕ್ಕದಲ್ಲಿಯೇ ಹಲವು ವರ್ಷಗಳಿಂದ ಅಕ್ರಮವಾಗಿ ನಡೆಯುತ್ತಿರುವ ಕ್ವಾರಿ ಇದೆ. ಜಿಲ್ಲೆಯಲ್ಲಿ ೭೬ ಅಧಿಕೃತ ಕ್ವಾರಿಗಳಲ್ಲಿ ಕೇವಲ ೨೩ ಕ್ವಾರಿಗಳಿಗೆ ಸ್ಫೋಟಕ ಬಳಸಲು ಅನುಮತಿ ಇದೆ. ಹಾಗಿದ್ದರೆ ಉಳಿದ ಕ್ವಾರಿಗಳಲ್ಲಿ ಸ್ಫೋಟಕ ಬಳಸುವುದಿಲ್ಲವೆ ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರು, ಇಡೀ ಸ್ಫೋಟ ಪ್ರಕರಣದ ಪೂರ್ಣ ಮಾಹಿತಿ ಯಾರಿಗೂ ಇಲ್ಲ. ಆಂಧ್ರಪ್ರದೇಶದಿಂದ ಸ್ಫೋಟಕ ಪೂರೈಕೆ ಆಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಎಸ್ಪಿ ತಿಳಿಸುತ್ತಾರೆ. ಜಿಲ್ಲಾಡಳಿತ ಹಾಗೂ ರಾಜಕಾರಣಿಗಳ ಬೆಂಬಲ ಇಲ್ಲದೆ ಇವೆಲ್ಲ ನಡೆಯಲು ಸಾಧ್ಯವಿಲ್ಲ ಈ ಎಲ್ಲದರ ತನಿಖೆ ನಡೆಯಬೇಕು ಎಂದು ಹೇಳಿದರು.
ಪರಿಹಾರಕ್ಕೆ ಆಗ್ರಹ:
ಹುಣಸೋಡು ಸ್ಫೋಟ ಪ್ರಕರಣದಲ್ಲಿ ಮೃತ ಆರು ಮಂದಿಯ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು. ತಾಂತ್ರಿಕ ತೊಂದರೆಯಿಂದ ಇನ್ನೂ ಪರಿಹಾರ ನೀಡಿಲ್ಲ ಎಂದು ಜಿಲ್ಳಾಧಿಕಾರಿ ತಿಳಿಸಿದ್ದಾರೆ. ಆದರೆ ಮಾನವೀಯ ನೆಲೆಯಲ್ಲಿ ತಕ್ಷಣ ಪರಿಹಾರ ವಿತರಿಸಬೇಕು. ಈಗ ಮುಖ್ಯಮಂತ್ರಿಗಳು ಘೋಷಿಸಿರುವ ಪರಿಹಾರ ಕಡಿಮೆಯಾಗಿದ್ದು, ಅದನ್ನು ಹೆಚ್ಚಿಸಬೇಕೆಂದು ಒತ್ತಾಯಿಸುವುದಾಗಿ ಸಿದ್ದರಾಮಯ್ಯ ಹೇಳಿದರು. ಸ್ಫೋಟ ಪ್ರಕರಣದಲ್ಲಿ ಮೃತರೂ ಆರೋಪಿಗಳು ಎಂದು ಪೊಲೀಸ್ ಇಲಾಖೆ ಹೇಳುತ್ತಿದೆ. ಹೀಗಿರುವಾಗ ಪರಿಹಾರ ವಿತರಣೆ ಸರಿನಾ ಎಂದು ಕೇಳಿದ ಪ್ರಶ್ನೆಗೆ, ಮಾನವೀಯ ನೆಲೆಯಲ್ಲಿ ಕುಟುಂಬದವರಿಗೆ ಪರಿಹಾರ ನೀಡುವುದು ಸೂಕ್ತ. ಆರೋಪಿಯೊ , ಅಪರಾಧಿಯೊ ಅನ್ನೋದು ತನಿಖೆಯಿಂದ ಗೊತ್ತಾಗಲಿದೆ. ಸ್ಫೋಟ ನಡೆದಿರುವ ಕ್ರಷರ್ ಮಾಲೀಕ ಸುಧಾಕರ್ ವಿರುದ್ಧ ಕೊಲೆ ಕೇಸು ದಾಖಲಿಸಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಶಾಸಕ ಬಿ.ಕೆ.ಸಂಗಮೇಶ್ವರ್, ಮೇಲ್ಮನೆ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಸೂಡಾ ಮಾಜಿ ಅದ್ಯಕ್ಷ ಎನ್.ರಮೇಶ್ ಮತ್ತಿತರರು ಹಾಜರಿದ್ದರು.
ಈಶ್ವರಪ್ಪ ಹೋರಾಟ ಯಾರ ವಿರುದ್ಧ ?
ಕುರುಬರಿಗೆ ಎಸ್ಟಿ ಮೀಸಲಾತಿ ಕೊಡಿಸುವಂತೆ ಸಚಿವ ಕೆ.ಎಸ್.ಈಶ್ವರಪ್ಪ ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ
ಶಿವಮೊಗ್ಗದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ಈಶ್ವರಪ್ಪ ಸರಕಾರದ ಪ್ರಭಾವಿ ಸಚಿವರಾಗಿದ್ದು,ಕೊಂಡು ಹೋರಾಟ ಯಾಕೆ ಮಾಡಬೇಕು. ಕೆಲಸ ಮಾಡಿಸಬಹುದಲ್ಲವೆ, ಮೀಸಲು ಸೂಕ್ಷ್ಮ ವಿಚಾರವಾಗಿದ್ದು, ಏನೊ ಮಾಡಿಬಿಡುತ್ತೇವೆ ಎಂದು ಸುಳ್ಳು ಹೇಳಿದ್ದಾರೆ ಹಾಗಾಗಿ ಪಕ್ಷ ಬೇಧವಿಲ್ಲದೆ ಎಲ್ಲರೂ ಸಭೆ ಬರುತ್ತಾರೆ. ಈಶ್ವರಪ್ಪ ಸರಕಾರದೊಳಗಿದ್ದುಕೊಂಡು ಅವರದೇ ಸರಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇದು ಕುರುಬರನ್ನು ಒಡೆದು ಆಳುವ ನೀತಿಯಾಗಿದೆ. ಮುಖ್ಯಮಂತ್ರಿಯಾಗಿದ್ದಾಗ ಕುರುಬ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿದ್ದೇನೆ. ಗುಲ್ಬರ್ಗ, ಬೀದರ್, ಯಾದಗಿರಿ ಹಾಗೂ ಮಡಿಕೇರಿಯಲ್ಲಿ ಕುರುಬರಿಗೆ ಎಸ್ಟಿ ಮೀಸಲಾತಿ ಕೊಡಿಸಿದ್ದೇನೆ. ಈ ಸತ್ಯ ಅರಿಯದವರು ಮಾತಾಡಿದ್ದಕ್ಕೆ ನಾನು ಉತ್ತರ ಕೊಡಬೇಕಿಲ್ಲ ಎಂದು ಹೇಳಿದರು.