ಶಿವಮೊಗ್ಗ ಸಮೀಪದ ಹುಣಸೋಡು ಕಲ್ಲಗಂಗೂರಿನಲ್ಲಿ ಜ.೨೧ ರಂದು ಸಂಭವಿಸಿದ ಮಹಾಸ್ಫೋಟ ಮತ್ತು ಅಂದು ಆದ ಜೀವಹಾನಿ ಬಗ್ಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಸೋಮವಾರ ಚರ್ಚೆಯಾಗಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸರಕಾರವನ್ನು ಆಗ್ರಹಿಸಲಾಯಿತು.
ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಅಲ್ಲಿನ ಘಟನೆ ಪುಲ್ವಾಮ ಸ್ಫೋಟಕ್ಕಿಂತ ದೊಡ್ಡದು. ಸ್ಫೋಟದಲ್ಲಿ ೧೧೩೫ ಕೇಜಿ ಸ್ಫೋಟಕ ಇತ್ತು ಎಂದರೆ ಅಲ್ಲಿನ ಅಕ್ರಮ ವ್ಯವಹಾರದ ಆಳ ಅಗಲ ಊಹಿಸಬಹುದು. ಪ್ರತಿ ಹದಿನೈದು ದಿನಕ್ಕೊಮ್ಮೆ ಅಲ್ಲಿಗೆ ಭಾರೀ ಸ್ಫೋಟಕ ಬರುತ್ತದೆ. ಅಧಿಕಾರಸ್ಥರ ಸಹಕಾರ ಇಲ್ಲದೆ ಇವೆಲ್ಲ ನಡೆಯಲು ಸಾಧ್ಯವಿಲ್ಲ. ಶಿವಮೊಗ್ಗದಲ್ಲಿ ಅಕ್ರಮ ಕ್ವಾರಿಗಳೇ ಹೆಚ್ಚಿವೆ. ಸ್ಥಳಕ್ಕೆ ಭೇಟಿ ನೀಡಿದ ನನಗೆ ಎಲ್ಲ ನೈಜ ಮಾಹಿತಿಗಳು ಸಿಕ್ಕಿವೆ. ಪರಿಸರ ಹಾಗೂ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಈ ಕೃತ್ಯಗಳು ನಿಲ್ಲಬೇಕು.ಅಲ್ಲಿನ ಅಕ್ರಮ ವ್ಯವಹಾರಕ್ಕೆ ಸರಕಾರ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಆಯನೂರು ಆಕ್ರೋಶ:
ಮೇಲ್ಮನೆಯಲ್ಲೂ ಅಕ್ರಮ ಕ್ವಾರಿ ಹಾಗೂ ಹುಣಸೋಡು ಸ್ಫೋಟ ಪ್ರಕರಣ ಚರ್ಚೆಯಾಗಿದ್ದು, ಆಡಳಿತ ಪಕ್ಷದ ಸದಸ್ಯ ಆಯನೂರು ಮಂಜುನಾಥ್ ಅಧಿಕಾರಿಗಳ ವೈಫಲ್ಯದಿಂದಲೇ ಇಂತಹ ದುರಂತ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುರ್ಘಟನೆಯಲ್ಲಿ ಮೃತರಾದವರು ಅಮಾಯಕರಲ್ಲ. ಅವರೂ ಸ್ಫೋಟಕ ಸಾಗಣೆ ಹಾಗೂ ಅನಧಿಕೃತ ಸಂಗ್ರಹದಲ್ಲಿ ಪಾಲುದಾರರು. ಸರಕಾರ ಅವರಿಗೆ ಪರಿಹಾರ ಕೊಡಬಾರದು ಎಂದು ಹೇಳಿದರು.
ಹಿಂದೆ ದಾವಣಗೆರೆ ಐಜಿ ವಿಶೇಷ ತನಿಖಾ ದಳ ಜಿಲೆಟಿನ್ ವಶಡಿಸಿಕೊಂಡಿತ್ತು. ಆ ಸಂದರ್ಭ ತುಂಗಾನಗರ ಪೊಲೀಸ್ ಠಾಣೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಈ ಕಾರಣದಿಂದ ಇಂದು ದೊಡ್ಡ ಅನಾಹುತ ಆಗಿದೆ. ಈ ಮಹಾ ದುರಂತಕ್ಕೆ ಕಂದಾಯ, ಅರಣ್ಯ, ಗಣಿ, ಪರಿಸರ ಹಾಗೂ ಪೊಲೀಸ್ ಇಲಾಖೆಯ ಲೋಪವೇ ಕಾರಣ ಸರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಭಾವಿಗಳ ಪ್ರಭಾವ:
ಕಲ್ಲಗಂಗೂರು ಕಲ್ಲಗಣಿಗಾರಿಕೆಯಲ್ಲಿ ಪ್ರಭಾವಿಗಳ ಕೈವಾಡವಿದೆ. ಅಲ್ಲಿನ ಕ್ವಾರಿ ಮಾಲೀಕರು ರಾಜಕಾರಣಿಗಳನ್ನೇ ಹೆದರಿಸುತ್ತಾರೆ ಹೀಗೆಂದು ಆರೋಪ ಮಾಡಿದ್ದು, ಮೇಲ್ಮನೆ ಸದಸ್ಯ ಕಾಂಗ್ರೆಸ್‌ನ ಆರ್.ಪ್ರಸನ್ನಕುಮಾರ್, ಗಣಿ ಮತ್ತು ಭೂ ಇಲಾಖೆಯಲ್ಲಿ ಅಧಿಕಾರಿಗಳು ದರ್ಪ ಹೆಚ್ಚಾಗಿದೆ. ಹಿಂದೊಬ್ಬ ಅಧಿಕಾರಿ ವರ್ಗಾವಣೆಯಾಗಿದ್ದರೂ ಬಿಡುಗಡೆ ಹೊಂದದೆ ಒಂದು ವರ್ಷ ಇದ್ದರು. ಈ ಪ್ರಕರಣದ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದರು.