ಹಸೆ ಚಿತ್ತಾರ ಶಿವಮೊಗ್ಗದ ನೆಲದ ಹೆಮ್ಮೆಯ ಕಲೆ. ಆದರೆ ಶಿವಮೊಗ್ಗದ ನೂತನ ಸಾಹಿತ್ಯ ಭವನದಲ್ಲಿ ಮಹಾರಾಷ್ಟ್ರದ ವರ್ಲಿ ಚಿತ್ರಕಲಾ ಮಾದರಿ ಬರೆಸಲಾಗಿದ್ದು ವಿಪರ್ಯಾಸ. ಶಿವಮೊಗ್ಗದ ನೆಲದ ಅಸ್ಮಿತೆಯಾದ ಹಸೆ ಚಿತ್ತಾರವನ್ನು ಕಡೆಗಣಿಸಿದ್ದು ಅಲ್ಲದೆ ನಮ್ಮದೇ ಸಾಹಿತ್ಯ ಭವನದಲ್ಲಿ ಮಹಾರಾಷ್ಟ್ರದ ವರ್ಲಿ ಕಲೆ ಬರೆಸಿದ್ದು ಸಮಂಜಸವಲ್ಲ ಎಂದು ಶಿಕ್ಷಕ ರವಿರಾಜ್ ಸಾಗರ್ ಮಂಡಗಳಲೆ ಹೇಳಿದರು.
೧೫ ನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ” ನಮ್ಮ ಜಿಲ್ಲೆ ನಮ್ಮ ಹೆಮ್ಮೆ” ಗೋಷ್ಟಿಯಲ್ಲಿ ” ಮಲೆನಾಡಿನ ಹಸೆ ಚಿತ್ತಾರ” ಕುರಿತು ವಿಷಯ ಮಂಡನೆ ಮಾಡಿದ ಅವರು ವರ್ಲಿ ಚಿತ್ತಾರದ ಜಾಗದಲ್ಲಿ ಹಸೆ ಚಿತ್ತಾರ ಬರೆಸಬೇಕೆಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಬೀದರ್ ನಲ್ಲಿ ಬಿದರಿ ಕಲೆ, ಚೆನ್ನಪಟ್ಟಣದಲ್ಲಿ ಬೊಂಬೆ ಕಲೆ ಎಂದು ಅಲ್ಲಿನ ಪ್ರಾದೇಶಿಕ ಅಸ್ಮಿತೆಯಾಗಿ ಹೆಮ್ಮೆಯ ಕಲೆ ಆಗೀ ಗುರುತಿಸಿರುವಂತೆ ಜಗತ್ತಿನಲ್ಲಿಯೇ ಎಲ್ಲಿಯೂ ಕಂಡುಬರದ ವಿಶಿಷ್ಟ ವಿನ್ಯಾಸದ ಹಸೆ ಚಿತ್ತಾರ ಪರಂಪರೆ ಶಿವಮೊಗ್ಗದಲ್ಲಿ ದೀವರು ಸಮುದಾಯದ ಪ್ರತಿ ಕುಟುಂಬದಲ್ಲಿನ ಕಲೆಯಾಗಿ ಕಂಡುಬರುತ್ತದೆ.ಅಲ್ಲದೇ ಒಂದಿಷ್ಟು ಸರಳ ವಿನ್ಯಾಸದಲ್ಲಿ ಹಸಲರು, ಹಾಲಕ್ಕಿ ಸಮುದಾಯದವರು ಸಹ ಬರೆಯುತ್ತಾರೆ. ಇಂದಿಗೂ ದೀವರು ಸಮುದಾಯ ಹಸೆ ಚಿತ್ತಾರವನ್ನು ಪ್ರತಿ ಮನೆ-ಮನೆಯಲ್ಲೂ ಪೋಷಿಸಿಕೊಂಡು ಬಂದಿದೆ. ಈ ಬಗೆಯ ಚಿತ್ತಾರ ಮಾದರಿ ಈಗ ದೇಶ-ವಿದೇಶಗಳಲ್ಲಿ ಚಿತ್ತಾರ ಪ್ರದರ್ಶನಗಳಲ್ಲಿ ಗಮನಸೆಳೆದಿದೆ. ಚಂದ್ರಶೇಖರ್ ಸಿರವಂತೆ, ಈಶ್ವರನಾಯ್ಕ ಹಸುವಂತೆ, ಗಡೇಮನೆಯ ಲಕ್ಷ್ಮಮ್ಮ, ರಾಧಾ ಸುಳ್ಳೂರು ಮತ್ತಿತರರು ಈಗಾಗಲೇ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಸೆ ಚಿತ್ತಾರ ಪ್ರದರ್ಶನ ಏರ್ಪಡಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ತಾರ ಕಲಾವಿದರ ಗಮನಸೆಳೆದಿದ್ದಾರೆ. ಅಲ್ಲದೆ ಹಸೆ ಚಿತ್ತಾರಗಳನ್ನು ಸಂಪ್ರದಾಯದ ಪರಂಪರೆ ಆಚೆ ಹಲವು ಪ್ರಯೋಗ ಮಾಡಿ ಉದ್ಯಮವಾಗಿ, ಅನ್ನ ನೀಡುವ ಕಲೆಯಾಗಿ ಸಹ ಕಟ್ಟಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಶಿವಮೊಗ್ಗದ ಹೆಮ್ಮೆಯ ಸಂಕೇತವಾಗಿ ಹಸೆ ಚಿತ್ತಾರ ರಾಜ್ಯಮಟ್ಟದಲ್ಲಿ ಇನ್ನಷ್ಟು ಬೆಳೆಯಬೇಕು. ಅದಕ್ಕಾಗಿ ಕನ್ನಡ ಸಂಸ್ಕೃತಿ ಇಲಾಖೆ, ವಿವಿಧ ಅಕಾಡೆಮಿಗಳು ಇತರೆ ಜನಪದ ಕಲೆಗಳಿಗೆ ನೀಡುವ ಪ್ರೋತ್ಸಾಹವನ್ನು ಹೊಸ ಚಿತ್ತಾರ ಕಲಾವಿದರಿಗೂ ನೀಡಬೇಕು ಎಂದು ಮನವಿ ಮಾಡಿದರು. ಶಿವಮೊಗ್ಗದ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಶಿವಮೊಗ್ಗ ನೆಲಮೂಲದ ಹಸೆ ಚಿತ್ತಾರ ಪ್ರೋತ್ಸಾಹಕ್ಕೆ ಆದ್ಯತೆ ನೀಡಬೇಕು ಎಂದರು.