ಶಿವಮೊಗ್ಗ ಸಮೀಪದ ಉಂಬ್ಳೇಬೈಲ್ ಸಮೀಪ ರೈತರ ಹೊಲಗದ್ದೆಗಳಿಗೆ ನುಗ್ಗಿ ತೊಂದರೆ ಕೊಡುತ್ತಿದ್ದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಅಟ್ಟುವಲ್ಲಿ ಸಕ್ರೆಬೈಲ್ ಆನೆ ಬಿಡಾರದ ಆನೆಗಳು ಯಶಸ್ವಿಯಾಗಿವೆ.
ಸಾಕಾನೆಗಳೊಂದಿಗೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಡಾನೆಗಳನ್ನು ದೂರ ಕಳಿಸುವಲ್ಲಿ ಯಶ ಕಂಡಿದ್ದಾರೆ.
ಭದ್ರಾ ಅಭಯಾರಣ್ಯದಿಂದ ಬಂದಿದ್ದ ಮೂರು ಕಾಡಾನೆಗಳು ಉಂಬ್ಳೇಬೈಲ್ ಸುತ್ತಮುತ್ತಲ ಪ್ರದೇಶದಲ್ಲಿ ಸುಗ್ಗಿ ಕಾಲವನ್ನು ಆತಂಕದಿಂದಲೇ ಕಳೆಯುವಂತೆ ಮಾಡಿದ್ದವು. ಗ್ರಾಮಸ್ಥರ ಒತ್ತಡದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು ಹದಿನಾಲ್ಕು ಕಿ.ಮೀಟರ್ ಕಾಲ್ನಡಿಗೆಯಲ್ಲಿ ಸಾಗಿ ಆನೆಗಳನ್ನು ಬೆನ್ನಟ್ಟಿ ಕಾಡಿಗೆ ಕಳಿಸಿದ್ದಾರೆ. ಕಾಡಾನೆಗಳ ಮಾರ್ಗವನ್ನು ಸರಿಯಾಗಿ ಪತ್ತೆ ಹಚ್ಚಿದ ಇಲಾಖೆ ಸಿಬ್ಬಂದಿ ಮೂರು ಆನೆಗಳೂ ಚದುರದಂತೆ ನೋಡಿಕೊಂಡು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.
ಸಿಸಿಎಫ್ ರವಿಶಂಕರ್ ಮಾರ್ಗದರ್ಶನದಲ್ಲಿ ವನ್ಯಜೀವಿ ವೈದ್ಯ ಡಾ.ವಿನಯ್‌ಕುಮಾರ್, ಭದ್ರಾವತಿ ಡಿಎಫ್‌ಒ ಗಾಮನಗಟ್ಟಿ, ಎಸಿಎಫ್ ಕೆ.ವಿ.ಸುಬ್ರಹ್ಮಣ್ಯ, ಆರ್.ಎಫ್.ಮಂಜುನಾಥ್ ನೇತೃತ್ವದ ತಂಡ ನುರಿತ ಮಾವುತರೂ ಹಾಗೂ ಸಿಬ್ಬಂದಿಗಳ ಸಹಾಯದಿಂದ ಕಾರ್ಯಾಚರಣೆ ಮಾಡಿದ್ದು, ಆನೆ ಕಾಟದಿಂದ ತೊಂದರೆಗೊಳಗಾಗಿದ್ದ ಗ್ರಾಮಸ್ಥರು ತಾತ್ಕಾಲಿಕವಾಗಿ ನಿಟ್ಟುಸಿರು ಬಿಟ್ಟಿದ್ದಾರೆ
previous post