ಒಂದು ಹಗಲು ಕಳೆದಿದ್ದರೆ ಆ ಮಗು ಬೆಂಗಳೂರು ಸೇರಿಕೊಳ್ಳುತಿತ್ತು. ಆದರೆ ಯಾರಿಗೆ ಗೊತ್ತು ಮನೆಯ ನಿತ್ಯ ಜೀವನದ ಭಾಗವೇ ಆಗಿರುವ ಅಡಕೆಯಲ್ಲಿ ಜವರಾಯ ಅಡಗಿ ಕುಂತಿದ್ದ ಎಂದು. ಕರುಣೆಯಿಲ್ಲದ ವಿಧಿ ಇಡೀ ಮನೆಯನ್ನು ನಂದನವನ ಮಾಡಿದ್ದ ಕಂದನ ಕರೆದೊಯ್ದ. ಕರುಳಕುಡಿ ಕಳೆದುಕೊಂಡು ಹೆತ್ತಮ್ಮನ ಆಕ್ರಂದನ ಕಟುಕರ ಕಣ್ಣಲ್ಲೂ ನೀರು ತರಿಸುತಿತ್ತು. ತೀರ್ಥಹಳ್ಳಿ ತಾಲೂಕು ಹೆದ್ದೂರಿನ ಸಂದೇಶ ಮತ್ತು ಅರ್ಚನಾ ಬೆಂಗಳೂರನಲ್ಲಿದ್ದರು. ಲಾಕ್‌ಡೌನ್ ಬಳಿಕ ಊರಿಗೆ ಬಂದಿದ್ದರು. ಸ್ವಲ್ಪ ದಿನಗಳ ಬಳಿಕ ಸಂದೇಶ ಮತ್ತೆ ಬೆಂಗಳೂರಿಗೆ ಹೋಗಿದ್ದರು. ಊರಿನಲ್ಲಿಯೇ ಕಿಲಕಿಲ ಆಡಿಕೊಂಡಿದ್ದ ಮಗು ಶ್ರೀಹಾನ್, ಅಮ್ಮನೊಂದಿಗೆ ಹೋಗಿ ಅಪ್ಪನನ್ನು ಕೂಡಿಕೊಳ್ಳಬೇಕಿತ್ತು. ಆ ತಯಾರಿಯೂ ಮನೆಯಲ್ಲಿ ನಡೆದಿತ್ತು.
ಶನಿವಾರ ಎಂದಿನಂತೆ ಆಡಿಕೊಂಡಿದ್ದ ಕಂದಮ್ಮ ಮಲೆನಾಡಿನ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಇರುವಂತೆ ಜಗುಲಿಯಲ್ಲಿ ಕವಳದ ತಟ್ಟೆಯಿತ್ತು. ಅಲ್ಲಿಯೇ ಆಡುತಿದ್ದ ಮಗು ಅಡಕೆಯೊಂದನ್ನು ಬಾಯಿಗೆ ಹಾಕಿಕೊಂಡಿದೆ. ಶ್ರೀಹಾನ್‌ನ ಈ ಬಾಲಲೀಲೆ ಗಮನಿಸದ ಮನೆಯವರು ಸಹಜವಾಗಿಯೇ ಇದ್ದರು. ಇದ್ದಕ್ಕಿದ್ದಂತೆ ಮಗು ಉಸಿರಾಡಲು ಕಷ್ಟ ಪಡುವುದನ್ನು ನೋಡಿ ಗಾಬರಿಯಾಗಿದ್ದಾರೆ. ತಕ್ಷಣ ತೀರ್ಥಹಳ್ಳಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕ್ರೂರ ವಿಧಿ ಬಿಡಲಿಲ್ಲ ಮಾರ್ಗಮಧ್ಯೆಯೇ ಶ್ರೀಹಾನ್ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಮಗುವಿಗೆ ಏನಾಗಿದೆ ಎಂದು ಮನೆಯವರು ಅರಿತುಕೊಳ್ಳುವ ಮುನ್ನವೇ ದೊಡ್ಡ ದುರಂತ ನಡೆದುಹೋಗಿದೆ. ಇತ್ತೀಚೆಗಷ್ಟೆ ಊರಿನಲ್ಲಿ ಆರೋಗ್ಯ ಇಲಾಖೆ ನಡೆಸಿದ್ದ ಆರೋಗ್ಯಂತ ಮಕ್ಕಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದ ಮಗು ಹೀಗೆ ಅಡಕೆ ಬಾಯಲ್ಲಿ ಹಾಕಿಕೊಂಡು ಇಹಲೋಕ ತ್ಯಜಿಸಿದೆ. ಕೊರೊನ ನೆಪದಲ್ಲಿ ಮನೆಗೆ ಬಂದ ಮಗುವಿನ ನಗುವಿನಲ್ಲೆ ಎಲ್ಲ ನೋವು ಮರೆತ ಮನೆ ಮಂದಿಗೆ ಈಗ ಆಘಾತವಾಗಿದೆ.
previous post
next post