ಬ್ರಿಟೀಷರು ಸಹ ರಸ್ತೆಗೆ ಮೊಳೆ ಹೊಡೆದು ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಿರಲಿಲ್ಲ. ಆದರೆ ಹಿರಿಯರ ತ್ಯಾಗ ಬಲಿದಾನದ ಮೂಲಕ ದೊರೆತ ಪ್ರಜಾತಂತ್ರ ವ್ಯವಸ್ಥೆಯ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ರಸ್ತೆಗೆ ಮೊಳೆ ಹೊಡೆಯುತ್ತಾರೆ ಎಂದರೆ ಇದಕ್ಕಿಂತ ದೊಡ್ಡ ಸಂವಿಧಾನ ವಿರೋಧಿ, ರೈತ ವಿರೋಧಿ, ಜನಸಾಮಾನ್ಯರ ವಿರೋಧಿ ಸರ್ಕಾರ ಮತ್ತೊಂದಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಿಡಿಕಾರಿದರು.
ಸಾಗರದಲ್ಲಿ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಕ್ಕು ಕೇಳುವ ಜನರನ್ನು, ರೈತರ ಧ್ವನಿ ಹತ್ತಿಕ್ಕುವುದು ಎಂದರೆ ಅದಕ್ಕಿಂತ ಕೆಟ್ಟ ರಾಜಕಾರಣ ಮತ್ತೊಂದಿಲ್ಲ. ಈ ಸರ್ಕಾರ ಮುಂದುವರೆದರೆ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಜನರಿಗೆ ವಿಷ ಹಾಕುತ್ತಾರೆ. ಜನರು ಎಚ್ಚರಿಕೆಯಿಂದ ಇರಬೇಕು. ಇಂತಹ ಸರ್ಕಾರ ಕೆಳಗೆ ಇಳಿಸಲು ಹೋರಾಟ ಅನಿವಾರ್ಯ ಎಂದು ಹೇಳಿದರು.
ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸ್ಥಳೀಯ ಶಾಸಕರಿಗೆ ಬಡವರು, ರೈತರ ಬಗ್ಗೆ ಕಾಳಜಿ ಇಲ್ಲ. ಗ್ರಾಮ ಪಂಚಾಯ್ತಿಗೊಂದು ಬಾರ್ ಮತ್ತು ರೆಸ್ಟೋರೆಂಟ್ ತೆಗೆಯುವಲ್ಲಿಯೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಸಾಗರ ಪ್ರಜ್ಞಾವಂತರ ಕ್ಷೇತ್ರವಾಗಿದ್ದು, ಹಾಲಿ ಶಾಸಕರ ಅಧಿಕಾರ ಅವಧಿ ಮುಗಿಯುವಷ್ಟರಲ್ಲಿ ಸಾಗರ ಹೋಗಿ ಬಾರ್ ಕ್ಷೇತ್ರವಾದರೂ ಅಚ್ಚರಿ ಪಡಬೇಕಾಗಿಲ್ಲಎಂದು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಕೃಷಿಕರ ಬದುಕಿಗೆ ಕೊಳ್ಳಿ ಇಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ರೈತರ ಬಗ್ಗೆ ಯಾವತ್ತೂ ಕಾಳಜಿ ಇರಲಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್, ಕಾಂಗ್ರೇಸ್ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್, ನಗರ ಬ್ಲಾಕ್ ಅಧ್ಯಕ್ಷ ಐ.ಎನ್.ಸುರೇಶ್ ಬಾಬು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಇನ್ನಿತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಅನಿತಾ ಕುಮಾರಿ, ಪ್ರಮುಖರಾದ ಎಲ್.ಟಿ.ತಿಮ್ಮಪ್ಪ ಹೆಗಡೆ, ಮಕ್ಬೂಲ್ ಅಹ್ಮದ್, ರಫೀಕ್ ಬಾಬಾಜಾನ್, ಮಧುಮಾಲತಿ, ಸುಮಂಗಲ ರಾಮಕೃಷ್ಣ, ಅಶೋಕ್ ಬೇಳೂರು, ವೆಂಕಟೇಶ್ ಮೆಳವರಿಗೆ, ಪ್ರಶಾಂತ್, ಪ್ರವೀಣ ಬಣಕಾರ್, ಅಬ್ದುಲ್ ಹಮೀದ್, ಎನ್.ಲಲಿತಮ್ಮ, ಕೆ.ಹೊಳೆಯಪ್ಪ ಮತ್ತಿತರರಿದ್ದರು.
previous post
next post