Malenadu Mitra
ಜಿಲ್ಲೆ ಮಲೆನಾಡು ಸ್ಪೆಷಲ್ ರಾಜ್ಯ

ಅನ್ಯಾಯ ಖಂಡಿಸಲು ಪಕ್ಷ ಅಡ್ಡಿಯಾಗದು

ಶಿವಮೊಗ್ಗ: ಯಾವುದೇ ಬಗೆಯ ಅನ್ಯಾಯ ನಡೆದರೂ ಜನರಲ್ಲಿ ಪ್ರತಿಭಟಿಸುವ ಮನೋಭಾವ ಕಡಿಮೆಯಾಗಿದ್ದು, ಒಂದು ರೀತಿಯ ಜಡತ್ವ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವಿಷಾದ ವ್ಯಕ್ತಪಡಿಸಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಹುಣಸೋಡು ಸ್ಫೋಟ ಕುರಿತು ವಿಧಾನಪರಿಷತ್‌ನಲ್ಲಿ ಮುಕ್ಕಾಲು ಗಂಟೆ ಮಾತನಾಡಿದ್ದೇನೆ. ಯಾವುದೇ ಒಂದು ಘಟನೆ ಸಾಮೂಹಿಕವಾಗಿ ಜನರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದಾದರೆ ಮಾತನಾಡುವುದು ತಪ್ಪಲ್ಲ. ಆಡಳಿತ ಪಕ್ಷದ ಸದಸ್ಯನಾದರೂ ಅಧಿಕಾರಿ ಶಾಹಿಗಳು ಮಾಡಿದ ತಪ್ಪನ್ನು ಸದನದಲ್ಲಿ ಬಿಡಿಸಿಟ್ಟಿದ್ದೇನೆ. ಇದು ಸರಕಾರದ ವಿರುದ್ಧ ನನ್ನ ಭಿನ್ನಮತ ಅಲ್ಲ. ಅಧಿಕಾರಿಗಳ ಹಂತದಲ್ಲಿ ಆಗುವ ತಪ್ಪುಗಳನ್ನು ಸರಿಮಾಡಲು ಸರಕಾರದ ಗಮನ ಸೆಳೆದಿದ್ದೇನೆ ಅಷ್ಟೇ ಎಂದು ಹೇಳಿದರು.
ಹಿಂದೆಲ್ಲ ನೆಲ-ಜಲದ ವಿಷಯಗಳಿಗೆ ಜನ ಮತ್ತು ಸಂಘಟನೆಗಳು ಬದ್ಧತೆಯಿಂದ ಹೋರಾಟ ಮಾಡುತ್ತಿದ್ದವು. ಇತ್ತೀಚಿನ ದಿನಮಾನಗಳಲ್ಲಿ ಅದರ ಕೊರತೆ ಇದೆ.  ಪ್ರತಿ ಧ್ವನಿ ಇಲ್ಲದಿದ್ದರೆ, ವ್ಯವಸ್ಥೆಯನ್ನು ಪ್ರಶ್ನೆ ಮಾಡುವವರೇ ಇಲ್ಲವಾಗುತ್ತಾರೆ. ಹುಣಸೋಡು ಸ್ಫೋಟವಾಗಿದ್ದರಿಂದ ಅಲ್ಲಿನ ಕಾನೂನು ಬಾಹಿರ ಕೃತ್ಯಗಳು ಬೆಳಕಿಗೆ ಬಂದಿದೆ. ಇಲ್ಲದಿದ್ದರೆ ಇನ್ನೂ ಮುಂದುವರಿಯುತಿತ್ತು. ಸ್ಫೋಟಕ ಪರವಾನಗಿ ಇಲ್ಲದೆ ಸರಬರಾಜು ಆಗುತ್ತಿರುವುದನ್ನು ಗಮನಿಸಿದರೆ ಭಯ ಆಗುತ್ತೆ. ಒಂದು ವೇಳೆ ಇದೇ ಪ್ರಮಾಣದ ಸಿಡಿಮದ್ದುಗಳು ಸಮಾಜವಿರೊಧಿ ವ್ಯಕ್ತಿಗಳಿಗೆ ಸಿಕ್ಕಿದ್ದರೆ ಏನಾಗಬಹುದಿತ್ತು ಎಂದು ಕಲ್ಪನೆ ಮಾಡಿಕೊಂಡರೆ ಭಯ ಆಗುತ್ತದೆ ಎಂದು ಮಂಜುನಾಥ್ ಹೇಳಿದರು.
ಹುಣಸೋಡು ಕಲ್ಲುಕ್ವಾರೆ ಸ್ಪೋಟ ಇಡೀ ರಾಜ್ಯಕ್ಕೆ ಒಂದು ಎಚ್ಚರಿಕೆಯ ಪಾಠವಾಗಿದೆ. ಸದನದಲ್ಲಿ ನಾನು ಈ ಬಗ್ಗೆ ವಿಸ್ತಾರವಾಗಿ ಚರ್ಚೆಮಾಡಿದ್ದೇನೆ. ಈ ಹಿನ್ನಲೆಯಲ್ಲಿ ತನಿಖೆ ಕೂಡ ೨ ಹಂತದಲ್ಲಿ ಆರಂಭವಾಗಿದೆ. ಇದರ ನಂತರ ನ್ಯಾಯಾಂಗ ತನಿಖೆಯು ನಡೆಯಬಹುದು. ಒಟ್ಟಾರೆ ಅಧಿಕಾರಿಗಳಿಂದ ಹಿಡಿದು ರಾಜಕಾರಣಿಗಳಿಗೂ ಕೂಡ ಈ ಘಟನೆ ಬಿಸಿ ಮುಟ್ಟಿಸಿರುವುದಂತೂ ನಿಜ. ಕಂದಾಯ ಮತ್ತು ಪೊಲೀಸ್ ಇಲಾಖೆಯಿಂದಲೂ ಇದು ತನಿಖೆಯಾಗುತ್ತಿದೆ. ಪ್ರಮುಖವಾಗಿ ಸ್ಪೋಟಕಗಳು ಎಲ್ಲಿಂದ ಬಂದವು ಹೇಗೆ ಬಂದವು ಎಂಬುದು ಒಂದು ಯಕ್ಷ ಪ್ರಶ್ನೆಯೇ ಆಗಿದೆ. ಏನೇ ಆಗಲಿ ಒಂದು ತಾತ್ವಿಕ ಅಂತ್ಯ ಕಾಣುತ್ತದೆ ಎಂದು ಹೇಳಿದರು.
ರಾಜಕಾರಣಿಗಳಿಗೆ ಗೊತ್ತಿಲ್ಲ ಎನ್ನಲಾರೆ:
ಜಿಲ್ಲಾ ಕೇಂದ್ರದ ಸಮೀಪದಲ್ಲಿಯೇ ಇಂತಹ ಸ್ಫೋಟಕ ಸಂಗ್ರಹವಾಗುವ ಬಗ್ಗೆ ರಾಜಕಾರಣಿಗಳಿಗೆ ಗೊತ್ತಿತ್ತು ಎಂದು ಹೇಳಲಾರೆ. ಆದರೆ ಈ ಅಕ್ರಮ ದಂಧೆಯಲ್ಲಿರುವವರಿಗೆ ರಾಜಕಾರಣಿಗಳೊಂದಿಗಿನ ಸಂಬಂಧ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಅಕ್ರಮ ಕ್ವಾರಿ ಮಾಡುವವರದು ಒಂದು ಮಾಫಿಯಾ, ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅವರೊಂದಿಗೆ ಈ ಗ್ಯಾಂಗ್ ಇರುತ್ತದೆ. ಹಾಗಾಗಿ ಕ್ವಾರಿ ಮಾಡುವವರೆಲ್ಲರೂ ಬಿಜೆಪಿ ಬೆಂಬಲಿಗರು ಎನ್ನುವುದನ್ನು ಒಪ್ಪಿಕೊಳ್ಳಲಾಗದು. ಈಗ ಅಕ್ರಮ ಕ್ವಾರಿ ಹಾಗೂ ಸ್ಫೋಟಕ ವಸ್ತು ಸಂಗ್ರಹ ,ಅದರ ಮೂಲ ಹೀಗೆ ಎರಡು ಹಂತದಲ್ಲಿ ತನಿಖೆ ನಡೆಯುತ್ತಿದೆ. ಸತ್ಯ ಹೊರಬರುವ ವಿಶ್ವಾಸವೂ ಇದೆ ಎಂದು ಆಯನೂರು ಹೇಳಿದರು.
    ಕಲ್ಲು ಗಣಿಗಾರಿಕೆ ಕಾನೂನಿನ ಚೌಕಟ್ಟಿನಲ್ಲಿರಬೇಕು. ಇಲ್ಲದೇ ಹೋದರೆ ಅದನ್ನು ಯಾವುದೇ ಪಕ್ಷದವರು ಮಾಡಿದರೂ ತಪ್ಪೇ. ಇದಕ್ಕೆ ಅಧಿಕಾರಿಗಳು ಕೂಡ ಜವಾಬ್ದಾರರೇ ಆಗಿರುತ್ತಾರೆ. ಇದೊಂದು ವಿಧ್ವಂಸಕ ಕೃತ್ಯವೇ ಸರಿ. ಈ ಬಗ್ಗೆ ಈಗಾಗಲೇ ನಾನು ಧ್ವನಿ ಎತ್ತಿದ್ದೇನೆ ಮತ್ತು ಎತ್ತುತ್ತಲೇ ಇರುತ್ತೇನೆ. ಶಿವಮೊಗ್ಗದಲ್ಲಿ ನಿರಂತರ ಜ್ಯೋತಿ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆಯಿದೆ ಎನ್ನುವುದು ನಿಜ. ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆಯಾಗಿದೆ ಎನ್ನುವುದು ನಿಜ ಮತ್ತು ಕಾರ್ಮಿಕರ,ಶಿಕ್ಷಕರ, ಜನಸಾಮಾನ್ಯರ ಸಮಸ್ಯೆಗಳಿವೆ ಎನ್ನುವುದು ಕೂಡ ಸತ್ಯವೇ ಆಗಿದೆ. ಎಲ್ಲಾ ವಿಷಯಗಳ ಬಗ್ಗೆ ನಾನಂತು ಧ್ವನಿ ಎತ್ತುತ್ತಲೆ ಇರುತ್ತೇನೆ ಎಂದರು.
    ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ ಇದ್ದರು. ಗಿರೀಶ್ ಉಮ್ರಾಯ್ ಸ್ವಾಗತಿಸಿದರು.

ಸರಕಾರದ ಪ್ರತಿನಿಧಿ ಮನವಿ ಕೊಡಬಾರದು

ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಜಾತಿಯ ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಿದ ಅವರು, ಸರಕಾರದ ಭಾಗವಾದ ಸಚಿವರು ಜನಸಾಮಾನ್ಯರ ಸಮಸ್ಯೆ ಕೇಳಬೇಕು. ಅವರೇ ಹೋಗಿ ಮನವಿ ಕೊಡುವುದು ಸರಿಯಲ್ಲ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ನಾನು ಹೀಗೆ ಹೇಳಿದ್ದೆ. ಯಾವುದೇ ಒಂದು ವಿಚಾರ ಇಟ್ಟುಕೊಂಡು ಹೇಳಿರಲಿಲ್ಲ. ಮಾಧ್ಯಮಗಳಲ್ಲಿ ಈಶ್ವರಪ್ಪ ವಿರುದ್ಧ ಮಾತನಾಡಿದ್ದೇನೆ ಎಂಬಂತೆ ಬಿಂಬಿತವಾಯಿತು. ಆದರೆ ನಾನು ಯಾರನ್ನೂ ಉದ್ದೇಶಿಸಿ ಮಾತನಾಡಿಲ್ಲ. ಹಿಂದೆ ಎಂ.ಬಿ.ಪಾಟೀಲ್ ಪ್ರಭಾವಿ ಸಚಿವರಾಗಿದ್ದುಕೊಂಡು ಲಿಂಗಾಯತ ವಿಚಾರದಲ್ಲಿ ಹೋರಾಟ ಮಾಡಿದ್ದರು. ಈ ಪರಿಪಾಠ ಒಳ್ಳೆಯದಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.
ಶಿವಮೊಗ್ಗದ ಘನತೆ ಉಳಿಬೇಕು:
ಶಿವಮೊಗ್ಗ ಹೋರಾಟದ ಭೂಮಿ, ಇಲ್ಲಿನ ಸೈದ್ಧಾಂಕಿತ ಸಂಘರ್ಷಗಳು ಮತ್ತು ವೈಚಾರಿಕತೆ ದೇಶವ್ಯಾಪಿ ಪ್ರಸಿದ್ಧಿಯಾಗಿವೆ. ಹೀಗಿರುವಾಗ ಇಲ್ಲಿನ ಘನತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯ. ಜನಪ್ರತಿನಿಧಿಯಾಗಿ ಇಲ್ಲಿ ನಡೆಯುವ ಎಲ್ಲವುಗಳ ಬಗ್ಗೆ ಪ್ರತಿಸ್ಪಂದಿಸುವುದು ನನ್ನ ಜವಾಬ್ದಾರಿ ಎಂದು ಸದನದಲ್ಲಿ ಹುಣಸೋಡು ಪ್ರಕರಣ ತನಿಖೆಗೆ ಆಗ್ರಹಿಸಿದ್ದೇನೆ. ಈ ವಿಚಾರದಲ್ಲಿ ಮುಂದೆಯೂ ಇದೇ ನಿಲುವು ಇರುತ್ತದೆ. ನಾನು ನಿಷ್ಠುರವಾಗಿ ಮಾತನಾಡುವುದು ಕೆಲವರಿಗೆ ಕಿರಿಕಿರಿಯೆನಿಸಬಹುದು ಎಂದು ಆಯನೂರು ಮಂಜುನಾಥ ಹೇಳಿದರು.

Ad Widget

Related posts

ತವರು ನೆಲದ ಋಣ ತೀರಿಸುವೆ: ಬಿಎಸ್‌ವೈ ಭಾವುಕ ನುಡಿ

Malenadu Mirror Desk

ಶಿಸ್ತು ಬದ್ಧ ಜೀವನಕ್ಕೆ ಕಾನೂನಿನ ಅರಿವು ಅವಶ್ಯಕ : ಹಿರಿಯ ಸಿವಿಲ್ ನ್ಯಾಯದೀಶೆ ಸರಸ್ವತಿ ಕೆ.ಎನ್

Malenadu Mirror Desk

ಮಲೆನಾಡಿಗೆ ಜನ ಸಾಗರ, ಜೋಗಕ್ಕೆ ಜೀವಕಳೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.