ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿದ ನಾರಾಯಣಗುರು ಮಹಾಸಂಸ್ಥಾನದ ಪೀಠಾಧ್ಯಕ್ಷರು
ಪ್ರವರ್ಗದ 2A ದಲ್ಲಿನ ಮೀಸಲು ಪ್ರಮಾಣವನ್ನು ಶೇ.15 ರಿಂದ ಶೇ. 30ಕ್ಕೆ ಹೆಚ್ಚಿಸಿದ ಬಳಿಕವೇ ಪಂಚಮಸಾಲಿ ಸಮುದಾಯವನ್ನು 2A ವರ್ಗಕ್ಕೆ ಸೇರಿಸಬೇಕೆಂದು ನಾರಾಯಣಗುರು ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ರೇಣುಕಾನಂದ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಶ್ರೀಗಳು, 2A ವರ್ಗದಲ್ಲಿ ಈಗಾಗಲೇ ೧೦೨ ಜಾತಿಗಳಿವೆ. ಇಲ್ಲಿರುವ ಜನಸಂಖ್ಯೆಗೇ ಈ ಮೀಸಲಾತಿ ಸಾಲುತ್ತಿಲ್ಲ. ಇಂತಹ ಹೊತ್ತಿನಲ್ಲಿ ದೊಡ್ಡ ಜನಸಂಖ್ಯೆ ಇರುವ ಪಂಚಮಸಾಲಿ ಸಮುದಾಯವನ್ನು 2Aವರ್ಗಕ್ಕೆ ಸೇರಿಸಿದರೆ ಇಲ್ಲಿನ ಸಣ್ಣಪುಟ್ಟ ಜಾತಿಗಳಿಗೆ ತೊಂದರೆಯಾಗುತ್ತದೆ. ಈ ಸಮುದಾಯಗಳು ಸರಕಾರದ ಯಾವುದೇ ಸೌಲಭ್ಯ ಸಿಗದೆ ಅನ್ಯಾಯಕ್ಕೊಳಗಾಗುತ್ತವೆ ಎಂದು ಮನವಿಯಲ್ಲಿ ಶ್ರೀಗಳು ವಿವರಿಸಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೂ ನ್ಯಾಯ ಸಿಗಬೇಕು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಶ್ರೀವಚನಾನಂದ ಸ್ವಾಮೀಜಿ ಅವರು ನಡೆಸುತ್ತಿರುವ ಪಾದಯಾತ್ರೆಗೆ ನಮ್ಮ ಬೆಂಬಲ ಇದೆ. ಆದರೆ ಒಂದು ಸಮುದಾಯಕ್ಕೆ ನ್ಯಾಯ ಕೊಡುವಾಗ ಮತ್ತಷ್ಟು ವರ್ಗಕ್ಕೆ ಅನ್ಯಾಯವಾಗದಂತೆ ಸರಕಾರ ನೋಡಿಕೊಳ್ಳಬೇಕು. 2Aಪರ ಧ್ವನಿ ಎತ್ತಿರುವ ಉಜಿರೆಯ ಶ್ರೀ ಬ್ರಹ್ಮಾನಂದ ಸ್ವಾಮೀಜಿಗಳಿಗೆ ನಮ್ಮ ಬೆಂಬಲವೂ ಇದೆ. ಸರಕಾರ ೨ಎ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ ಬಳಿಕವೇ ಅರ್ಹ ಸಮುದಾಯಗಳನ್ನು ಈ ವರ್ಗಕ್ಕೆ ಸೇರಿಸಬೇಕು ಎಂದು ರೇಣುಕಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರು ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಸೂಕ್ತ ವರದಿಯನ್ನು ನೀಡಬೇಕು ಎಂದೂ ಸ್ವಾಮೀಜಿ ಮನವಿಯಲ್ಲಿ ತಿಳಿಸಿದ್ದಾರೆ.