Malenadu Mitra
ರಾಜ್ಯ

ಸಾಸ್ವೆಹಳ್ಳಿ ಸತೀಶ್ ರ ಎರಡು ಕೃತಿ ಬಿಡುಗಡೆ

ಜನರಿಗೆ ಸಾಮಾಜಿಕ ಕಾಳಜಿಯ ಅರಿವು ಮೂಡಿಸುವಲ್ಲಿ ರಂಗಭೂಮಿಯ ಪಾತ್ರ ಅನನ್ಯ ಎಂದು ಕವಯತ್ರಿ ಡಿ.ಬಿ. ರಜಿಯಾ ಶ್ಲಾಘಿಸಿದರು.ಶಿವಮೊಗ್ಗ ಹೊಂಗಿರಣ ತಂಡ ಭಾನುವಾರ ಹಮ್ಮಿಕೊಂಡಿದ್ದ ಎರಡು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಡಾ. ಸಾಸ್ವೆಹಳ್ಳಿ ಸತೀಶ್ ಅವರ ‘ಕೆಂಡದ ಮಳೆ ಕರೆವಲ್ಲಿ’ ನಾಟಕ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.ಆಧುನಿಕ ಕಾಲಘಟ್ಟದಲ್ಲೂ ರಂಗಭೂಮಿ ಹೊಸ ಸ್ವರೂಪಗಳೊಂದಿಗೆ ಜೀವಂತವಾಗಿದೆ. ಯುವ ಪೀಳಿಗೆಗೂ ಸಹಬಾಳ್ವೆಯ ಪಾಠ ಹೇಳಿಕೊಡುವ ಪ್ರಯೋಗ ಶಾಲೆಯ ರೀತಿ ಕೆಲಸ ಮಾಡುತ್ತಿದೆ. ರಂಗಭೂಮಿಯ ಸಾಕಷ್ಟು ಕಲಾವಿದರು ಇತರೆ ಕ್ಷೇತ್ರಗಳಲ್ಲೂ ಪ್ರಸಿದ್ಧರಾಗುತ್ತಿದ್ದಾರೆ ಎಂದರು.

‘ಕೆಂಡದ ಮಳೆ ಕರೆವಲ್ಲಿ’ ನಾಟಕ ಕೃತಿ ಗ್ರಾಮೀಣ ಜನರ ಬದುಕಿನ ಚಿತ್ರಣ ತೆರೆದಿಡುತ್ತದೆ. ಅಲ್ಪಸಂಖ್ಯಾತ ಕುಟುಂಬ ಅನುಭವಿಸುವ ನೋವು, ಅವರ ಮೇಲಾಗುವ ದೌರ್ಜನ್ಯ, ಅಲ್ಲಿನ ಪರಿಸರದ ಜತೆ ಹೊಂದಾಣಿಕೆ ಮಾಡಿಕೊಂಡು ಬದುಕು ನಡೆಸುವ ಅನಿವಾರ್ಯತೆ. ಅಸಹಾಯಕತೆ, ಶ್ರೀಮಂತರ ದಬ್ಬಾಳಿಕೆ, ಪೊಲೀಸರ ಭ್ರಷ್ಟಾಚಾರದ ಕಥನವನ್ನು ಸಾಸ್ವೆಹಳ್ಳಿ ಸತೀಶ್ ಅವರು ಚುರುಕು ಸಂಭಾಷಣೆಗಳ ಮೂಲಕ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ಎಂದು ವಿಶ್ಲೇಷಿಸಿದರು.

‘ತಂದೆ ಎಚ್‌. ಇಬ್ರಾಹಿಂ ಅವರು ರಂಗಭೂಮಿಗೆ ಸಾಷಕ್ಟು ನೆರವು ನೀಡುತ್ತಿದ್ದರು. ಹಲವು ನಾಟಕಗಳನ್ನು ರಂಗಕ್ಕೆ ತರಲು ಪ್ರೋತ್ಸಾಹಿಸಿದ್ದರು. ಅವರ ಜತೆ ನಾಟಕಗಳ ತಾಲೀಮು ನೋಡಲು ಹೋಗುತ್ತಿದ್ದೆ. ರಂಗದ ಮೇಲೆ ನಾಟಕಗಳ ಪ್ರದರ್ಶನ ನೋಡಿದ್ದಕ್ಕಿಂತ ತಾಲೀಮುಗಳನ್ನೇ ಅಧಿಕವಾಗಿ ನೋಡಿದ್ದೆ’ ಎಂದು ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

‘ಭಳಾರೆ ವಿಚಿತ್ರಂ’ ಕೃತಿ ಕುರಿತು ಮಾತನಾಡಿದ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್, ‘ಒಂದೂವರೆ ದಶಕಗಳ ಹಿಂದೆ ರಂಗಕ್ಕೆ ತಂದ ಕುಂ. ವೀರಭದ್ರಪ್ಪ ಅವರ ಕಥೆಗಳನ್ನು ಆಧರಿಸಿದ ‘ಭಳಾರೆ ವಿಚಿತ್ರಂ’ ರಂಗಾಸ್ತಕರಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ನಾಟಕದ ವಿಷಯ ವಸ್ತುಗಳು ಹಲವರ ಕೆಂಗಣ್ಣಿಗೂ ಗುರಿಯಾಗಿದ್ದವು. ಸಾಕಷ್ಟು ಪ್ರದರ್ಶನ ಕಂಡ ಬಳಿಕವೂ ಕಲಾವಿದರಿಗೆ ಯಾವುದೇ ತೊಂದರೆಯಾಗಲಿಲ್ಲ ಎನ್ನುವುದೇ ಸಮಾಧಾನದ ವಿಷಯ’ ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

ಅಂದು ನಾಟಕದಲ್ಲಿ ಅಭಿನಯಿಸಲು ಉದಯೋನ್ಮುಖ ಕಲಾವಿದರ ದಂಡೇ ಸೇರುತ್ತಿತ್ತು. ಈ ನಾಟಕದಲ್ಲಿ ಪಾತ್ರ ಮಾಡಿದ ಹಲವು ಕಲಾವಿದರು ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅಂತಹ ಶಕ್ತಿಯನ್ನು ನಾಟಕ ಕಲಾವಿದರಲ್ಲಿ ತುಂಬಿತ್ತು ಎಂದು ಸ್ಮರಿಸಿದರು.

17 ವರ್ಷಗಳ ಹಿಂದೆ ದೇಸಿ ಉತ್ಸವಕ್ಕಾಗಿ ‘ಭಳಾರೆ ವಿಚಿತ್ರಂ’ ನಾಟಕ ಮೂಡಿಬಂತು. ವಿಮರ್ಶಕ ಕೀ.ರಂ. ನಾಗರಾಜ್ ಅವರು ಮೆಚ್ಚುಗೆಯ ಮಾತು ಹೇಳಿದ್ದರು. ಕಥೆಯೊಳಗಿನ ಸತ್ವವನ್ನು ಪರಿಣಾಮಕಾರಿಯಾಗಿ ರಂಗದ ಮೇಲೆ ತರುವುದು ಅಷ್ಟು ಸುಲಭದ ಕೆಲಸವಲ್ಲ. ಹಳ್ಳಿಗಾಡಿನ ಅನುಭವಗಳು ನಾಟಕ ಕೃತಿಯ ಮೇಲೆ ಸಾಕಷ್ಟು ಪ್ರಭಾವ ಬೀರಿವೆ. ಇಂದಿನ ಯುವಪೀಳಿಗೆಗೆ ಮಾತುಗಳೇ ಪಥ್ಯವಾಗುತ್ತಿಲ್ಲ ಎನ್ನುವುದು ಕಳವಳದ ವಿಷಯ ಎಂದರು.

‘ಭಳಾರೆ ವಿಚಿತ್ರಂ’ ನಾಟಕ ಕೃತಿಯನ್ನು ರಂಗ ಕಲಾವಿದ ವಿಕ್ರಂ ವಾಸು ಬಿಡುಗಡೆ ಮಾಡಿದರು. ಕೆಂಡದ ಮಳೆ ಕರೆವಲ್ಲಿ ಕುರಿತು ಪತ್ರಕರ್ತ ಚಂದ್ರಹಾಸ ಹಿರೇಮಳಲಿ ಮಾತನಾಡಿದರು. ಹೊಂಗಿರಣ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು.

Ad Widget

Related posts

160 ಕೋಟಿ ವೆಚ್ಚದಲ್ಲಿ ಸರ್ವಋತು ಜೋಗ ಜಲಪಾತ

Malenadu Mirror Desk

ನಾರಾಯಣಗುರು ವಿಚಾರವೇದಿಕೆ ಮಹಿಳಾ ವೇದಿಕೆ ಅಸ್ತಿತ್ವಕ್ಕೆ
ಅಧ್ಯಕ್ಷರಾಗಿ ಪ್ರಭಾವತಿ, ಮಾನಸ ಪ್ರಧಾನ ಕಾರ್ಯದರ್ಶಿ

Malenadu Mirror Desk

ಶಾಂತಿ, ಸೌಹಾರ್ದತೆ ಮೂಡಿಸುವಲ್ಲಿ ಧರ್‍ಮಪೀಠಗಳ ಜವಾಬ್ದಾರಿ ಹೆಚ್ಚು : ಶಾಂತಿಗಾಗಿ ನಾವು ಸಭೆಯಲ್ಲಿ ವಿವಿಧ ಮಠಾಧೀಶರ, ಮೌಲ್ವಿ, ಫಾದರ್ ಅಭಿಮತ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.