ಶಿವಮೊಗ್ಗ ನಗರ ಸ್ಮಾಟ್ ಆಗಲಾರಂಭಿಸಿದಾಗಿಂದ ನಗರದಲ್ಲಿ ಅನೇಕ ಅವಘಡಗಳು ಸಂಭವಿಸಿವೆ. ಬೈಕ್‌ಗಳು, ಐಷರಾಮಿ ಕಾರುಗಳು ಗುಂಡಿಗೆ ಹಾರಿ ಸೊಂಟ ಮುರಿದುಕೊಂಡಿವೆ.
ಕಳೆದ ವರ್ಷ ಮಳೆ ಸುರಿದಾಗೆಲ್ಲ ದಾರಿಹೋಕಲು ರಸ್ತೆ ಹಾಗೂ ಕೆಸರು ಒಂದಾಗಿದ್ದರಿಂದ ಗುಂಡಿಗೊಟರುಗಳಿಗೆ ವಾಹನ ಹಾರಿಸಿ ನಷ್ಟ ಮಾಡಿಕೊಂಡಿದ್ದರು. ಬಸವನಗುಡಿಯ ಒಂದಷ್ಟು ರಸ್ತೆಯಲ್ಲಿ ರಾಜಾಕಾಲುವೆಯ ಕೊಳಚೆ ನೇರವಾಗಿ ಮನೆಗಳ ಅಡುಗೆ ಕೋಣೆಗೇ ನುಗ್ಗುವುದು ಮಾಮೂಲಿಯಾಗಿದೆ. ಕಳೆದ ವಾರ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಬುಡ ಬಿಡಿಸಿದ್ದ ಮರ ಬಿದ್ದು ಜಖಂ ಆಗಿದೆ. ಬೈಕ್‌ಗಳು ಹೊಂಡ ಹಾರಿರುವ ಪ್ರಕರಣಗಳು ಸಾಕಷ್ಟಿವೆ.
ಗುರುವಾರ ರಾತ್ರಿ ವೆಂಕಟೇಶ್‌ನಗರದಲ್ಲಿ ಇನ್ನೊವ ಕಾರೊಂದು ಗುಂಡಿ ಹಾರಿ ಸೊಡ್ಡು ಮುರಿದುಕೊಂಡಿದೆ.
ನಗರ ಸ್ಮಾರ್‍ಟ್ ಆಗುವುದಕ್ಕೆ ಯಾವುದೇ ತಕರಾರಿಲ್ಲ. ಆದರೆ ಯೋಜನಾಬದ್ಧ ಕಾಮಗಾರಿಗಳು ನಡೆಯದೆ, ಸಾರ್ವಜನಿಕರು ಅದ್ವಾನಪಡುವಂತಾಗಿದೆ. ಇಡೀ ನಗರ ಧೂಳುಮಯವಾಗಿದ್ದರಿಂದ ಉಸಿರಾಟದ ತೊಂದರೆ ಮತ್ತು ಅಸ್ತಮಾ ವ್ಯಾಧಿಗೆ ತುತ್ತಾದವರ ಸಂಖ್ಯೆ ದೊಡ್ಡದಿದೆ.
ಚರಂಡಿಗೆ ಬಿದ್ದ ಮಹಿಳೆ
ಕಳೆದವಾರ ದುರ್ಗಿಗುಡಿ ಮುಖ್ಯ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಹಠಾತ್ತನೆ ಚರಂಡಿಗೆ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಬಾಕ್ಸ್ ಡ್ರೈನೇಜ್ ಕಾಮಗಾರಿ ಅರ್ಧಂಬರ್ಧ ಆಗಿದ್ದು, ನಡುವೆ ಒಂದೂವರೆ ಅಡಿ ಗ್ಯಾಪ್ ಇದ್ದದ್ದನ್ನು ನೋಡದ ಆಕೆ ಅದರಲ್ಲಿ ಕಾಲಿಟ್ಟು ಚರಂಡಿಗೆ ಬಿದ್ದು ತೀವ್ರ ಸ್ವರೂಪದ ಗಾಯಗಳಾಗಿದ್ದವು. ಮೊನ್ನೆ ಪತ್ರಕರ್ತರೊಬ್ಬರು ಮನೆಯ ಮುಂದಿನ ಚರಂಡಿಗೆ ಬಿದ್ದು ಪೆಟ್ಟುಮಾಡಿಕೊಂಡಿದ್ದರು. ಶಿವಮೊಗ್ಗ ಸ್ಮಾರ್‍ಟ್ ಸಿಟಿ ಕಾಮಗಾರಿ ಎರಡು ಮಳೆಗಾಲ ಕಳೆದರೂ ಮುಗಿಯಲಿಲ್ಲ. ಅರ್ಧಂಬರ್ಧ ಕಾಮಗಾರಿಯಲ್ಲಿ ಮತ್ತೊಂದು ಮಳೆಗಾಲವನ್ನೂ ಎದುರುಗೊಳ್ಳಲು ಸಜ್ಜಾಗಿದೆ ಇನ್ನೆಷ್ಟು ಅನಾಹುತಗಳಾಗಬೇಕೊ ದೇವರೆ ಬಲ್ಲ