ಹಠವಾದಿಗೆ ಒಲಿದ ಶಾರ್ಜಾದ ಬಂಪರ್ ಬಹುಮಾನ
ಅರಬ್ ಕಂಟ್ರಿಲಿ ಲಾಟರಿ ಹೊಡದದೆ, ಅಂವ ಶಿವಮೊಗ್ಗ ಮೂಲದವನಂತೆ ಅಂತ ಮಾಧ್ಯಮಗಳಲ್ಲಿ ಬರ್‍ತಿದ್ದಂತೆ ಎಲ್ಲ ಮಿಕಮಿಕ ಮಕ ನೋಡಿಕಂಡು ಯಾರಿರಬಹುದು ಎಂದು ಹುಬ್ಬೇರಿಸಿಕೊಂಡ್ರು.
ಆದರೆ ಅದೃಷ್ಟವಂತ ನಮ್ಮ ಸಾಗರ ತಾಲೂಕಿನ ಮಂಡಗಳಲೆ ಗಾಳಿ ಶಿವಮೂರ್ತಿ ಅಂತ ಗೊತ್ತಾ ನಿಮಗೆ ?
ಆತ ಹುಟ್ಟು ಛಲಗಾರ. ಕಿತ್ತು ತಿನ್ನುವ ಬಡತನವಿದ್ದರೂ ಏನಾದರೂ ಸಾಧಿಸಬೇಕು ಎನ್ನುವ ಕನಸು ಕಂಡವ. ಇದೇ ಹಠದಿಂದ ಕಲಿತದ್ದು ಎಂಜನಿಯರಿಂಗ್ !. ಸ್ವತಃ ಕೆಲಸ ಮಾಡಿ ಶಿಕ್ಷಣ ಪೂರೈಸಿದ್ದ ಶಿವಮೂರ್ತಿ ಮೆಕಾನಿಕಲ್ ಎಂಜನಿಯರಿಂಗ್ ಪದವಿಯೊಂದಿಗೆ ಅರಬ್ ಕಂಟ್ರಿಗೆ ಹಾರಿ 15 ವರ್ಷಗಳೇ ಸಂದಿವೆ.
ದುಬೈನಲ್ಲಿ ಜೀವನ ಸಾಗಿಸುತ್ತಿದ್ದ ಶಿವಮೂರ್ತಿ ಈಗ ಭಾರೀ ಬಂಪರ್ ಲಾಟರಿ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಗೆದ್ದೇ ಗೆಲುವೆ ಒಂದು ದಿನ ಅಂತ ದುಬಾರಿ ಮೊತ್ತದ ಲಾಟರಿ ಟಿಕೆಟ್ ಕೊಂಡುಕೊಳ್ಳುತ್ತಿದ್ದ ಮೂರ್ತಿಗೆ ಈಗ ಅದೃಷ್ಟಲಕ್ಷ್ಮಿ ಒಲಿದಿದ್ದಾಳೆ. ಆ ಕಷ್ಟಸಹಿಷ್ಣು ಜೀವಿ 24 ಕೋಟಿ ರೂ. ಲಾಟರಿ ವೀರ ಎನಿಸಿಕೊಂಡು ಬೀಗಿದ್ದಾನೆ.
ಗಾಳಿ ಶಿವಮೂರ್ತಿ ಫೆಬ್ರವರಿ 17 ರಂದು ಖರೀದಿ ಮಾಡಿದ ಲಾಟರಿಯಲ್ಲಿ ಬರೋಬ್ಬರಿ ೨೪ ಕೋಟಿ ಗೆದ್ದಿರುವುದಾಗಿ ಗುಲ್ಫ್ ನ್ಯೂಸ್ ವರದಿ ಮಾಡಿದೆ. ಈ ಹಣದಲ್ಲಿ ತನ್ನ ಹುಟ್ಟೂರು ಮಂಡಗಳಲೆಯಲ್ಲಿ ತಂದೆ-ತಾಯಿ ಗಳಿಗಾಗಿ ಮನೆ ನಿರ್ಮಿಸುವುದಾಗಿ ಮೂರ್ತಿ ಸಂಭ್ರಮ ಪಟ್ಟಿದ್ದಾರೆ. ಲಾಟರಿಯಲ್ಲಿ ಕಳೆದುಕೊಳ್ಳುವವರೇ ಹೆಚ್ಚಿರುವಾಗ ಗಳಿಸಿಕೊಂಡ ಮಂಡಗಳಲೆ ಶಿವಮೂರ್ತಿ ಮಲೆನಾಡಿಗೆ ಖುಷಿ ಸುದ್ದಿಕೊಟ್ಟಿದ್ದಾರೆ.