ಪ್ರವರ್ಗಕ್ಕೆ ಸೇರಿಸುವ ಉದ್ದೇಶದಿಂದ ರಚಿಸಿರುವ ಉನ್ನತ ಮಟ್ಟದ ಸಮಿತಿ ರದ್ದುಗೊಳಿಸಬೇಕು, ಅತಿ ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ಅನುದಾನ ಕೊಡಬೇಕು ಎಂಬ ಮನವಿಯನ್ನು ಮಂಗಳವಾರ ಮುಖ್ಯಮಂತ್ರಿಗಳಿಗೆ ಅತಿ ಹಿಂದುಳಿದ ವರ್ಗಗಳ ವೇದಿಕೆಯ ನಿಯೋಗ ಮನವಿ ಮಾಡಿದೆ.
ವೇದಿಕೆಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷರಾದ ಎಂ.ಸಿ ವೇಣುಗೋಪಾಲ್ ನೇತೃತ್ವದ ನಿಯೋಗವು ಸಮಾಜಕಲ್ಯಾಣ ಸಚಿವ, ಆಯೋಗದ ಅಧ್ಯಕ್ಷರು ಮತ್ತು ಕೆಪಿಸಿಸಿ ಅಧ್ಯಕ್ಷರನ್ನೂ ಭೇಟಿ ಮಾಡಿ ತಮ್ಮ ಬೇಡಿಕೆ ಸಲ್ಲಿಸಿದೆ.
ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಈಗಾಗಲೇ ಪ್ರವರ್ಗ ೨(ಎ) ದಲ್ಲಿರುವ ಹಲವಾರು ಅತಿ ಹಿಂದುಳಿದ ಜಾತಿಗಳು ಈ ಮೀಸಲಾತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಆಗಿಲ್ಲ. ಮತ್ತೆ ಪ್ರಬಲ ಜಾತಿಗಳನ್ನು ಸೇರಿಸಿದರೆ ಇಲ್ಲಿನವರಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು
ವೇದಿಕೆಯ ಅಧ್ಯಕ್ಷ ಎಂ.ಸಿ ವೇಣುಗೋಪಾಲ್ ಮಾತನಾಡಿ, ಈಗಾಗಲೇ ಸಿದ್ಧಗೊಂಡಿರುವ ಜಾತಿವಾರು ಸಮೀಕ್ಷೆಯನ್ನು ಬಿಡುಗಡೆ ಮಾಡುವ ಮೂಲಕ ಪ್ರವರ್ಗ ೨(ಎ) ದಲ್ಲಿರುವ ಜಾತಿಗಳಿಗೆ ರಕ್ಷಣೆ ನೀಡಿ ಎಂದು ಹೇಳಿದರು.
ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ, ಕಳೆದ ಕೆಲವು ದಿನಗಳಿಂದ ಹೋರಾಟ ಮಾಡುತ್ತಿರುವ “ವೀರಶೈವ ಪಂಚಮಸಾಲಿ’ ಸಮುದಾಯ ಮತ್ತು ಇವರ ಹಾದಿಯಲ್ಲೇ ಹೊರಟ ಇತರೇ ಪ್ರಭಾವಿ ಸಮುದಾಯಗಳ ಒತ್ತಡವನ್ನು ಗಮನಿಸಿದರೆ ಈ ರಾಜ್ಯದಲ್ಲಿ ನಮ್ಮಂತಹ ಸಣ್ಣ ಪುಟ್ಟ ಸಮುದಾಯಗಳ ಭವಿಷ್ಯ ಅತ್ಯಂತ ಧಾರುಣವಾಗುವ ಸೂಚನೆಗಳು ಕಾಣುತ್ತಿವೆ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನಿಸಬೇಕು ಎಂದರು.
ಡಾ. ಸಿ.ಎಸ್ ದ್ವಾರಾಕಾನಾಥ್ ಮಾತನಾಡಿ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇಲೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಅಸ್ತಿತ್ವದಲ್ಲಿ ಇರುವಾಗ ಮತ್ತೊಂದು “ಉನ್ನತ ಮಟ್ಟದ ಸಮಿತಿ”ಯನ್ನು ಸರ್ಕಾರ ಮಾಡಹೊರಟಿರುವುದು ಅನೈತಿಕ ಮತ್ತು ಅನಾವಶ್ಯಕ. ಈಗಿನ ಮೀಸಲಾತಿ ಗೊಂದಲವನ್ನು ಸದರಿ ಆಯೋಗವೇ ಪರಿಹರಿಸಬೇಕೆಂಬುದು ನಮ್ಮ ಆಶಯ. ಈ ಕಾರಣಕ್ಕೆ ಸದರಿ ಸಮಿತಿಯನ್ನು ಈ ಕೂಡಲೇ ರದ್ದು ಪಡಿಸಬೇಕೆಂದು ಸರ್ಕಾರವನ್ನು ನಮ್ರವಾಗಿ ಒತ್ತಾಯಿಸುತ್ತೇವೆ ಎಂದರು ಹೇಳಿದರು.
ವೇದಿಕೆಯ ಉಪಾಧ್ಯಕ್ಷ ಪಿ. ಆರ್. ರಮೇಶ್, ಪ್ರೊ. ನರಸಿಂಹಯ್ಯ, ವಿಧಾನ ಪರಿಷತ್ ಸದಸ್ಯ ಕೆ.ಪಿ ನಂಜುಂಡಿ, ಪ್ರಮುಖರಾದ ಎಸ್. ಆರ್.ಯಲ್ಲಪ್ಪ, ಡಾ ಜಿ ರಮೇಶ್, ಹೆಚ್. ಸುಬ್ಬಣ್ಣ, ಸಿ. ನಂಜಪ್ಪ, ಬಿ. ವೆಂಕಟೇಶ್, ಬಸಬರಾಜು ಮತ್ತಿತರರಿದ್ದರು.
ಹೆಚ್ಚಿನ ಅನುದಾನದ ಭರವಸೆ
ನಿಯೋಗದ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು, ಈಗಾಗಲೇ ತಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಜೊತೆಗೆ ಹಿಂದುಳಿದ ವರ್ಗಗಳಿಗೆ ಇನ್ನಷ್ಟು ಹೆಚ್ಚಿನ ಅನುದಾನವನ್ನು ನೀಡುವ ಹಾಗೂ ಇನ್ನಿತರ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು.
ಮಾರ್ಚ್ ೨೪ ರಂದು ಈ ಸಂಬಂಧ ಎಲ್ಲ ಜಾತಿ ಹಾಗೂ ಸಂಘಟನೆಗಳ ಸಭೆ ಕರೆಯಲಾಗಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸಂವಿಧಾನಾತ್ಮಕ ವರದಿಯನ್ನು ಸರಕಾರಕ್ಕೆ ನೀಡಲಾಗುವುದು- ಜಯಪ್ರಕಾಶ್ ಹೆಗ್ಡೆ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ