ಇತ್ತೀಚೆಗೆ ಕಬಡ್ಡಿ ಪಂದ್ಯಾವಳಿ ಸಂದರ್ಭದಲ್ಲಿ ಸಂಭವಿಸಿದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ ಮತ್ತು ಅವರ ಪುತ್ರ, ಕುಟುಂಬದವರ ಮೇಲೆ ಐಪಿಸಿ ೩೦೭ರ ಮತ್ತು ಜಾತಿನಿಂದನೆ ಅಡಿ ಕೇಸು ದಾಖಲಿಸಿ, ಪುತ್ರನನ್ನು ಬಂಧಿಸುವ ಮೂಲಕ ದ್ವೇಷ ರಾಜಕಾರಣವನ್ನು ಬಿಜೆಪಿ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ನಡೆಸುತ್ತಿದೆ ಎಂದು ಕೆಪಿಸಿಸಿ ರಾಜ್ಯ ಕಾರ್‍ಯಾಧ್ಯಕ್ಷ ಮತ್ತು ಜಿಲ್ಲಾ ಉಸ್ತುವಾರಿಯಾಗಿರುವ, ಮಾಜಿ ಸಂಸದ ಧ್ರುವನಾರಾಯಣ ಆರೋಪಿಸಿದ್ದಾಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಇತ್ತೀಚೆಗೆ ಕಲಬುರಗಿಯಲ್ಲೂ ಅಲ್ಲಿನ ಕಾಂಗ್ರೆಸ್ ಶಾಸಕರ ಮೇಲೆ ದ್ವೇಷದಿಂದ ಪ್ರಕರಣ ದಾಖಲಿಸಲಾಗಿದೆ. ಸರಕಾರದ ವಿರುದ್ಧ ಧ್ವನಿ ಎತ್ತುವ ರಾಜಕಾರಣಿ, ಚಿಂತಕರು, ಹೋರಾಟಗಾರರು ಮತ್ತು ಪತ್ರಕರ್ತರನ್ನು ದಮನಿಸುವ ಕೆಲಸ ನಡೆಯುತ್ತಿದೆ. ಅವರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗುತ್ತಿದೆ ಎಂದರು.
ಬಿ ಎಸ್. ಯಡಿಯೂರಪ್ಪ ಅಧಿಕಾರಕ್ಕೆ ಬಂದು ಒಂದು ವರ್ಷದೊಳಗೆ ಬಿಜೆಪಿಯ ಸಚಿವರು ಮತ್ತು ಮುಖಂಡರಾದ ಆರ್. ಅಶೋಕ್, ಸಿ ಟಿ ರವಿ, ಮಾಧುಸ್ವಾಮಿ, ಪ್ರತಾಪ್‌ಸಿಂಹ ಅವರ ಮೇಲೆ ಮತ್ತು ಇನ್ನೂ ಹಲವರ ವಿರುದ್ದ ಇದ್ದ ಸುಮಾರು ೪೨ ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆದಿದೆ. ಆದರೆ ಕಾಂಗ್ರೆಸ್ ಸರಕಾರವಿದ್ದಾಗ ರೈತರ ಮೇಲಿದ್ದ ಪ್ರಕರಣಗಳನ್ನು ಮಾತ್ರ ವಾಪಸ್ ಪಡೆದಿತ್ತು ಎಂದ ಅವರು, ಸರಕಾರವನ್ನು ಜನ ಪ್ರಶ್ನಿಸದ ಸ್ಥಿತಿ ಇದೆ. ಅವರ ಭ್ರಷ್ಟಾಚಾರ, ದುರಾಡಳಿತ ಸತತ ನಡೆಯುತ್ತಲೆ ಇದೆ. ಜೊತೆಗೆ ಕಾಂಗ್ರೆಸ್‌ನ್ನು ತುಳಿದು ತಾನು ಬೆಳೆಯುವ, ಶಾಸಕರನ್ನು, ಜನಪ್ರತಿನಿಧಿಗಳನ್ನು ಖರೀದಿಸುವ ಮೂಲಕ ಅಧಿಕಾರಕ್ಕೇರುವುದು ಅದರ ಗುರಿಯಾಗಿದೆ ಎಂದರು.
ಬಿಜೆಪಿ ಈ ಹಿಂದೆ ಅಧಿಕಾರದಲ್ಲಿದ್ದಾಗ ವಿಧಾನಸಭೆಯಲ್ಲಿ ಅಂದಿನ ಬಿಜೆಪಿ ಶಾಸಕನಾಗಿದ್ದ ಗೂಳಿಹಟ್ಟಿ ಶೇಖರ್ ಅಂಗಿ ಬಿಚ್ಚಿ, ಆಸನದ ಮೇಲೆ ನಿಂತು ಚೀರಾಟ ಮಾಡಿದ್ದರು. ಅಂದು ಸ್ಪೀಕರ್ ಆಗಿದ್ದ ಬೋಪಯ್ಯ ಅವರ ವಿರುದ್ದ ಕ್ರಮ ಜರುಗಿಸಲಿಲ್ಲ. ಆದರೆ ಶಾಸಕ ಸಂಗಮೇಶ್ ತನಗಾದ ನೋವನ್ನು ಹೇಳಿಕೊಂಡು ಮತ್ತು ಗಾಯವನ್ನು ತೋರಿಸಲು ಅಂಗಿ ಬಿಚ್ಚಿದರೆ ಅವರನ್ನು ಒಂದು ವಾರ ಅಮಾನತು ಮಾಡಲಾಗಿದೆ. ಸ್ವತಃ ಯಡಿಯೂರಪ್ಪ ಅವರೇ ವಿಧಾನಸಸಭೆಯಲ್ಲಿ ಅಹರ್ನಿಶಿ ಧರಣಿ ನಡೆಸಿ ಅಂಗಿ ಬಿಚ್ಚಿ ಮಲಗಿದರೆ ಅದು ಕಾನೂನುಬಾಹೀರವಾಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಇದು ಬಿಜೆಪಿಯ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದರು.
ಮಾ. ೧೩: ಬೃಹತ್ ಸಾರ್ವಜನಿಕ ಸಭೆ
ಮಾ ೧೩ರಂದು ಶಿವಮೊಗ್ಗ ಚಲೋ ಕಾರ್‍ಯಕ್ರಮಕ್ಕೆ ಕಾಂಗ್ರೆಸ್ ಕರೆ ನೀಡಿದೆ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್. ಆರ್. ಪಾಟೀಲ್, ಕಾಂಗ್ರೆಸ್‌ನ ಎಲ್ಲ ಶಾಸಕರು, ಮುಖಂಡರು, ಸಾರ್ವಜನಿಕರು ಸೇರಿದಂತೆ ಸುಮಾರು ೨೦ ಸಾವಿರದಷ್ಟು ಜನರು ಈ ಸಮಾವೇಶದಲ್ಲಿ ಭಾಗವಹಿಸುವರು. ಇದಕ್ಕಾಗಿ ಜಿಲ್ಲೆಯ ಎಲ್ಲೆಡೆ ಜಾಗೃತಿ ಸಭೆ ನಡೆಸಲಾಗಿದೆ. ಒಂದು ವಾರಕಾಲ ತಾನು ಶಿವಮೊಗ್ಗದಲ್ಲೇ ಉಳಿಯಲಿದ್ದು, ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆ ನಡೆಸಲಾಗುತ್ತಿದೆ. ಯಶಸ್ವಿ ಹೋರಾಟಕ್ಕೆ ಬೇಕಾದ ಎಲ್ಲ ಕ್ರಮವನ್ನು ರೂಪಿಸುತ್ತಿದ್ದೇನೆ. ಅಂದು ಮಧ್ಯಾಹ್ನ ೨ ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ಆರಂಭವಾಗಲಿದೆ. ೩:೩೦ಕ್ಕೆ ಸೈನ್ಸ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
- ಧ್ರುವನಾರಾಯಣ
…………………….