ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮುಂದುವರಿದ ಮಹಿಳಾ ಪಾರುಪತ್ಯ ಶಿವಮೊಗ್ಗ,ಮಾ,೧೦: ಮಹಾನಗರ ಪಾಲಿಕೆಗೆ ನಿರೀಕ್ಷೆಯಂತೆ ಸುನೀತಾ ಅಣ್ಣಪ್ಪ ಅವರು ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಗನ್ನಿಶಂಕರ್ ಆಯ್ಕೆಯಾಗಿದ್ದಾರೆ. ಬುಧವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮೇಯರ್ ಹುದ್ದೆಗೆ ರೇಖಾ ರಂಗನಾಥ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಆರ್.ಸಿ.ನಾಯ್ಕ್ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಬಿಜೆಪಿಯ ಸುನೀತಾ ಎಸ್ ಅವರಿಗೆ ೨೪ ಸದಸ್ಯರು ಹಾಗೂ ರೇಖಾ ಪರವಾಗಿ ೧೧ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಉಪ ಮೇಯರ್ ಸ್ಥಾನಕ್ಕೂ ಇದೇ ಪ್ರಮಾಣದಲ್ಲಿ ಮತಗಳು ಚಲಾವಣೆಯಾದವು. ಅಂತಿಮವಾಗಿ ಪ್ರಾದೇಶಿಕ ಯುಕ್ತರದ ನವೀನ್‌ರಾಜ್ ಸಿಂಗ್ ಅವರು ಅಧಿಕೃತ ಘೋಷಣೆ ಮಾಡಿದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಡಿಸಿ ಅನುರಾಧ ಅವರು ಹಾಜರಿದ್ದರು. ಮೇಯರ್ ಆಯ್ಕೆಯಾಗುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ನೂತನ ಮೇಯರ್ ಹಾಗೂ ಉಪಮೇಯರ್‌ಗಳನ್ನು ಅಭಿನಂದಿಸಿದರು. ಆಡಳಿತ ಪಕ್ಷದ ನಾಯಕರಾಗಿ ಎಸ್.ಎನ್.ಚೆನ್ನಬಸಪ್ಪ. ಪ್ರತಿಪಕ್ಷ ಕಾಂಗ್ರೆಸ್‌ನ ಸಭಾನಾಯಕರಾಗಿ ಯಮುನಾ ರಂಗೇಗೌಡ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು.
ಸ್ಥಾಯಿ ಸಮಿತಿಗಳಿಗೆ ಆಯ್ಕೆ
ವಿವಿಧ ಸ್ಥಾಯಿಸಮಿತಿಗಳಿಗೆ ಇದೇ ಸಂದರ್ಭ ಚುನಾವಣೆ ನಡೆದಿದ್ದು, ಬಿಜೆಪಿಯ ಅನಿತಾ ರವಿಶಂಕರ್ ಕಂದಾಯ ಆಸ್ತಿತೆರಿಗೆ ಸುಧಾರಣೆ ಸ್ಥಾಯಿಸಮಿತಿ, ಪಟ್ಟಣ ಮತ್ತು ಸಾಮಾಜಿಕ ನ್ಯಾಯ ಸಮಿತಿಗೆ ಶಿವಕುಮಾರ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಗೆ ಧೀರರಾಜ್ ಹೊನ್ನವಿಲೆ ಆಯ್ಕೆಯಾಗಿದ್ದಾರೆ. ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಕಾಂಗ್ರೆಸ್‌ನ ಮಂಜುಳಾ ಶಿವಣ್ಣ ಆಯ್ಕೆಯಾಗಿದ್ದಾರೆ.
ಧರಣಿ: ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕೊಡಲಿಲ್ಲ ಎಂದು ಪಾಲಿಕೆ ಬಿಜೆಪಿ ಸದಸ್ಯ ಎಸ್.ಜಿ.ರಾಜು ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಪ್ರಹಸನವೂ ನಡೆಯಿತು. ಆಕಾಂಕ್ಷಿಯಾಗಿದ್ದ ತಮಗೆ ಪಕ್ಷದ ನಾಯಕರು ಅನ್ಯಾಯ ಮಾಡಿದ್ದಾರೆ. ಹುದ್ದೆ ಕೊಡಿ ಇಲ್ಲವಾದರೆ ನನ್ನ ರಾಜೀನಾಮೆ ಪಡೆಯಿರಿ ಎಂದು ರಾಜು ತಮ್ಮ ಹಕ್ಕು ಮಂಡನೆ ಮಾಡಿದ್ದರು. ಕೊನೆಗೆ ಪಕ್ಷದ ಹಿರಿಯ ಸದಸ್ಯರು ಮುಖಂಡರು ಸ್ಥಳಕ್ಕೆ ಬಂದು ಅವರನ್ನು ಮನವೊಲಿಸಿ ಕರೆದೊಯ್ದರು.
ಮೂರು ಬಾರಿ ಪಾಲಿಕೆ ಸದಸ್ಯಳಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಸೇವೆ ಗುರುತಿಸಿದ ಪಕ್ಷ ಗುರುತರ ಜವಾಬ್ದಾರಿ ನೀಡಿದೆ. ಇದಕ್ಕಾಗಿ ನಾಯಕರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಶಿವಮೊಗ್ಗ ನಗರದ ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ. ಸುನೀತಾ ಅಣ್ಣಪ್ಪ, ಮೇಯರ್
ಮೇಯರ್ ಹುದ್ದೆಯಂತ ಜವಾಬ್ದಾರಿ ನೀಡಿದ್ದ ಪಕ್ಷದ ಆಶಯದಂತೆ ಕೆಲಸ ಮಾಡಿದ ತೃಪ್ತಿಯಿದೆ. ಸ್ಮಾರ್‍ಟ್ ಸಿಟಿ ಯೋಜನೆಯಡಿ ನಗರದಲ್ಲಿ ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿವೆ. ಮುಂದೆಯೂ ಜನರ ನಡುವೆ ಇದ್ದು, ಕೆಲಸ ಮಾಡುವೆ. – ಸುವರ್ಣಶಂಕರ್, ನಿರ್ಗಮಿತ ಮೇಯರ್
ಉಪಮೇಯರ್ ಹುದ್ದೆಗೇರಲು ಸಹಕರಿಸಿದ ಪಕ್ಷದ ನಾಯಕರಿಗೆ ನಾನು ಋಣಿ. ಕೊರೊನ ಸಂಕಷ್ಟದಲ್ಲಿಯೂ ನಗರದ ಜನತೆಗಾಗಿ ಉತ್ತಮ ಕೆಲಸ ಮಾಡಿರುವ ತೃಪ್ತಿ ನನಗಿದೆ. ಸುರೇಖಾ ಮುರಳೀಧರ್, ನಿರ್ಗಮಿತ ಉಪಮೇಯರ್, ReplyForward