Malenadu Mitra
ರಾಜಕೀಯ ರಾಜ್ಯ ಶಿವಮೊಗ್ಗ

ಸರಕಾರದ ವಿರುದ್ಧ ಗುಡುಗಿದ ಕೈ ನಾಯಕರು

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಕ್ಕಳು ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಅಧಿಕಾರದ ಮದ ಏರಿದ್ದು, ಭದ್ರಾವತಿ ಶಾಸಕ ಸಂಗಮೇಶ್ ಅವರನ್ನು ರಾಜಕೀಯವಾಗಿ ಮುಗಿಸಲು ಅಧಿಕಾರಿಗಳನ್ನು ತಮಗಿಷ್ಟ ಬಂದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ಬಿಜೆಪಿಯ ದ್ವೇಷಪೂರಿತ ಪ್ರಕರಣ ದಾಖಲು ಹಿನ್ನೆಲೆಯಲ್ಲಿ ಶಿವಮೊಗ್ಗ ಚಲೋ ಮತ್ತು ಜನಾಕ್ರೋಶ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸುಳ್ಳು ಮೊಕ್ಕದ್ದಮೆ ಹೂಡುವ ಮೂಲಕ ಸಂಗಮೇಶ್ ಅವರನ್ನು ಮುಗಿಸಲು ಸಾಧ್ಯವಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠರು ಪ್ರಕರಣದ ಬಗ್ಗೆ ಅರ್ಥಮಾಡಿಕೊಳ್ಳಬೇಕಿತ್ತು. ಭದ್ರಾವತಿಯಲ್ಲಿ ಕೋಮು ಗಲಭೆ ಹಬ್ಬಿಸುವ ಕೆಲಸಕ್ಕೆ ಬಿಜೆಪಿ ಪ್ರಚೋದನೆ ನೀಡುತ್ತಿದೆ. ಇದನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳದೆ ರಾಜಕಾರಣಿಗಳ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದರು.
ಸಂಗಮೇಶ್ ವಿರುದ್ಧ ಪ್ರಕರಣ ದಾಖಲಿಸಿ ನಂತರ ಎಸ್‌ಪಿಗೆ ಕರೆಮಾಡಿ ಕೇಸು ಹಿಂಪಡೆಯುವಂತೆ ಸೂಚಿಸಿದ್ದೆ. ಆದರೆ ಮಾರನೆಯ ದಿನವೇ ಸಂಗಮೇಶ್ ಪುತ್ರನನ್ನು ಬಂಧಿಸಿ ನನಗೆ ಸೆಡ್ಡುಹೊಡೆದರು. ಇಂತಹ ಅಧಿಕಾರಿಗಳು ಮುಂದುವರೆದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ನಾನು ಪೊಲೀಸರ ವಿರುದ್ಧ ಮಾತನಾಡುತ್ತಿಲ್ಲ. ಆದರೆ ಸರ್ಕಾರ ಹೇಳಿದಂತೆ ಪೊಲೀಸರು ಕೇಳಬೇಕೇ ವಿನಃ ರಾಜಕಾರಣಿಯ ಮಾತನ್ನಲ್ಲ. ಇದು ಹೀಗೇ ಮುಂದುವರೆದರೆ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಎಸ್‌ಪಿಗೆ ತಾಕತ್ತಿದ್ದರೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಅಕ್ರಮ ಆಸ್ತಿ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಿ. ಐಪಿಸಿ ೩೦೭ಬಗ್ಗೆ ಏನೂ ಗೊತ್ತಿಲ್ಲದ ಎಸ್‌ಪಿ ತನ್ನ ಹುದ್ದೆಯ ಘನತೆಯನ್ನು ಕಳೆಯಬಾರದು. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬಾರದೆಂದು ಎಚ್ಚರಿಸಿದರು.
ಸಮಾವೇಶದಲ್ಲಿ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ರಮೇಶ್‌ಕುಮಾರ್, ಮಾಜಿ ಸಚಿವ ಯು.ಟಿ. ಖಾದರ್, ವಿಧಾನಪಕ್ಷದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಸಂಗಮೇಶ್ ಪರ ನಿಲ್ಲುವ ಮತ್ತು ಅವರಿಗೆ ನೈತಿಕ ಬಲ ನೀಡುವುದಾಗಿ ಘೋಷಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಸಂಗಮೇಶ್, ಘಟನೆಯ ವಿವರವನ್ನು ಬಿಚ್ಚಿಟ್ಟರು. ಸುಳ್ಳು ಮೊಕದ್ದಮೆ ಹೂಡಿ, ದೌರ್ಜನ್ಯ ಮತ್ತು ಕುತಂತ್ರಗಳಿಂದ ತನ್ನನ್ನು ಮುಗಿಸಲು ಸಾಧ್ಯವಿಲ್ಲ. ೨೦೧೧ರಲ್ಲೂ ಸಹಾ ತಾನು ಬಿಜೆಪಿಗೆ ಸೇರಿಲ್ಲ ಎಂಬ ಕಾರಣದಿಂದ ತನ್ನ ಮನೆಯೊಳಗೆ ಪೊಲೀಸರನ್ನು ನುಗ್ಗಿಸಿ ದೌರ್ಜನ್ಯ ನಡೆಸಲಾಗಿತ್ತು. ಜೈಲಿಗೂ ಕಳುಹಿಸಲಾಗಿದ್ದು, ಅಂದೂ ಸಹಾ ಕಾಂಗ್ರೆಸ್ ತನಗೆ ಶಕ್ತಿ ನೀಡಿತ್ತು. ಇಂದೂ ಸಹಾ ಕಾಂಗ್ರೆಸ್ ತನ್ನ ಪರ ನಿಂತು ಬೆಂಬಲಿಸುತ್ತಿದೆ. ಭದ್ರಾವತಿಯಲ್ಲಿ ಕೋಮುವಾದ ಬೆಳೆಯಲು ಅವಕಾಶ ಕೊಡುವುದಿಲ್ಲ. ಭದ್ರಾವತಿ ಎಂದರೆ ಕಬ್ಬಿಣ. ಇಲ್ಲಿನ ಜನರು ಕಬ್ಬಿಣದಂತಿದ್ದಾರೆ ಎನ್ನುವುದನ್ನು ಬಿಜೆಪಿ ಮರೆಯಬಾರದು ಎಂದರು.
ಸಮಾರಂಭದಲ್ಲಿ ಕೆಪಿಸಿಸಿ ಕಾರ್‍ಯಾಧ್ಯಕ್ಷ ಧೃವಕುಮಾರ್, ಈಶ್ವರ್ ಖಂಡ್ರೆ, ಸಲೀಂ ಅಹಮ್ಮದ್, ಕೃಷ್ಣ ಬೈರೇಗೌಡ, ಕಿಮ್ಮನೆ ರತ್ನಾಕರ್, ರಾಮಲಿಂಗಾರೆಡ್ಡಿ, ಪ್ರತಾಪ್ ಚಂದ್ರ ಶೆಟ್ಟಿ, ಲಕ್ಷ್ಮೀ ಹೆಬ್ಬಾಳ್‌ಕರ್, ಡಾ. ಪುಷ್ಪಾ ಅಮರನಾಥ್ ಸೇರಿದಂತೆ ಸುಮಾರು ೬೦ಕ್ಕೂ ಹೆಚ್ಚು ಶಾಸಕರು ಪಾಲ್ಗೊಂಡಿದ್ದರು

ಅಧಿಕಾರ ಶಾಶ್ವತ ಅಲ್ಲ

ಅಧಿಕಾರ ಯಾವತ್ತೂ ಶಾಶ್ವತ ಅಲ್ಲ ಎನ್ನುವುದನ್ನು ಪೊಲೀಸ್ ಅಧಿಕಾರಿಗಳು ತಿಳಿದಿರಬೇಕು. ಕಾನೂನು ಚೌಕಟ್ಟು ಮೀರಿ ಕೆಲಸ ಮಾಡಿದರೆ ತಮ್ಮ ಆತ್ಮ ಶಕ್ತಿಗೂ ಅವರು ಅನ್ಯಾಯಮಾಡಿದಂತಾಗುತ್ತದೆ ಎಂದು ಕೆಪಿಸಿಸಿ ಅಧ್ಯಕಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಅವರು, ಎಸ್‌ಪಿ ಯವರು ಕಾನೂನಿನ ಬಗ್ಗೆ ಮತ್ತು ಐಪಿಸಿ ಸೆಕ್ಷನ್‌ಗಳ ಬಗ್ಗೆ ಸಮರ್ಪಕ ಮಾಹಿತಿ ಹೊಂದಿರಬೇಕು. ಅನಗತ್ಯವಾಗಿ ಕೇಸು ಹಾಕಿದಲ್ಲಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಶಾಸಕ ಸಂಗಮೇಶ್ ಪ್ರಕರಣ ಸಹಿತ ಯಾವುದೇ ಒಬ್ಬ ಕಾರ್ಯಕರ್ತನ ವಿರುದ್ಧವೂ ಸುಳ್ಳು ಮೊಕ್ಕದ್ದಮೆ ಹೂಡಿದಲ್ಲಿ ಇನ್ನಷ್ಟು ಜನಾಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.


ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಹಿತಾಸಕ್ತಿಯನ್ನು ಮರೆತು ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ನಾಯಕರು ಖಾಸಗೀಕರಣದ ಹಿಂದೆ ಬಿದ್ದಿದ್ದು, ಜನಹಿತವನ್ನು ಮರೆತಿದ್ದಾರೆ. ಕೊರೊನಾ ಕಾಲದಲ್ಲಿಯೂ ರಾಜ್ಯ ಸರ್ಕಾರ ಲೂಟಿಹೊಡೆದು ಕಟ್ಟೆ ಹೆಸರು ಪಡೆದುಕೊಂಡಿದೆ. ರೈತರ ಸಮಸ್ಯೆಯನ್ನು ಇಲ್ಲಿಯವರೆಗೂ ಬಗೆಹರಿಸಲು ಸಾಧ್ಯವಾಗಿಲ್ಲ ಎಂದರು.

ಕಸ್ತೂರಿರಂಗನ್ ವರದಿ ಬಗ್ಗೆ ಏನನ್ನೂ ಮಾಡದೆ ರಾಜ್ಯದ ಜನರನ್ನು ಕಂಗೆಡಿಸಿದ್ದಾರೆ. ಕಾಡಿನಂಚಿನಲ್ಲಿರುವ ಜನರು ತಮ್ಮನ್ನು ಒಕ್ಕಲೆಬ್ಬಿಸುವ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಡಿಕೆ ಕ್ಯಾನ್ಸರ್ ಕಾರಕ ಎಂಬ ಪ್ರಕರಣಕ್ಕೆ ಅಫಿಡೆವಿಟ್ ಸಲ್ಲಿಸಲು ಇಂದಿನವರೆಗೂ ಬಿಜೆಪಿ ಸಾಧ್ಯವಾಗಿಲ್ಲ. ಲಂಬಾಣಿ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿ ಮಾಡಿಲ್ಲ. ಅಧಿಕಾರಕ್ಕೆ ಕೂರಿಸಿದವರ ಹಿತಕಾಪಾಡಲು ಸಾಧ್ಯವಾಗದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಹೆದರುವ ಮಗ ಅಲ್ಲ
ಕೇಂದ್ರ ಸರ್ಕಾರು ರಾಜ್ಯ ಸರ್ಕಾರದ ಸಹಾಯದೊಂದಿಗೆ ತನ್ನ ವಿರುದ್ಧ ಇಡಿ, ಆದಾಯ ತೆರಿಗೆ, ಅಧಿಕ ಆಸ್ತಿ, ವಾಣಿಜ್ಯತೆರಿಗೆ ಸೇರಿದಂತೆ ಹತ್ತಾರು ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿತ್ತು. ಗುಜರಾತ್ ಶಾಸಕರಿಗೆ ಬೆಂಗಳೂರು ಬಳಿ ಆಶ್ರಯ ಕೊಟ್ಟಿದ್ದನ್ನು ನೆಪಮಾಡಿಕೊಂಡು ದ್ವೇಷ ಸಾದಿಸಿತು.

ಜೈಲಿಗೆ ಕಳುಹಿಸಿದ ದಿನವೇ ಶಿವಮೊಗ್ಗದಲ್ಲಿ ಮೊಟ್ಟಮೊದಲ ಬಾರಿ ನನ್ನನ್ನು ಬೆಂಬಲಿಸಿ, ಕೇಂದ್ರದ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿ ರಾಜ್ಯಕ್ಕೆ ಮಾದರಿಯಾಯಿತು. ಇದನ್ನು ಎಂದಿಗೂ ಮರೆಯುವುದಿಲ್ಲ. ಸರ್ಕಾರಗಳು ಎಷ್ಟೇ ಪ್ರಕರಣವನ್ನು ನನ್ನ ವಿರುದ್ಧ ಹೂಡಿದರೂ ಹೆದರುವ ಮಗ ನಾನಲ್ಲ.
ಡಿ.ಕೆ. ಶಿವಕುಮಾರ್

Ad Widget

Related posts

ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಬೇಡ: ರೈತರ ಮನವಿ

Malenadu Mirror Desk

ಹೋರಾಟದ ಸಾಗರಕ್ಕೆ,ನೂರಾರು ನದಿಗಳು

Malenadu Mirror Desk

ವಿದ್ಯಾರ್ಥಿಗಳಿಗೆ ಪದವಿ ಜತೆ ನೈತಿಕ ಶಿಕ್ಷಣವೂ ಬೇಕು , ವಿಶ್ರಾಂತ ಪ್ರಾಚಾರ್ಯ ಹಿಳ್ಳೋಡಿ ಕೃಷ್ಣಮೂರ್ತಿ ಅಭಿಮತ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.