ಸೊರಬ ತಾಲೂಕಿನ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬ ಜಾತ್ರೆಗೆ ಭಕ್ತರ ಪ್ರವೇಶವನ್ನು ನಿಷೇಧಿಸಿ ಶಿವಮೊಗ್ಗ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಸ್ಥಳೀಯರ ಧಾರ್ಮಿಕ ಆಚರಣೆಗೆ ಮಾತ್ರ ಜಾತ್ರೆ ಸೀಮಿತವಾಗಿದೆ.
ಮಾರ್ಚ್ 19ರಿಂದ 24ರ ತನಕ ಚಂದ್ರಗುತ್ತಿ ರೇಣುಕಾಂಬ ಜಾತ್ರೆ ನಡೆಯಲಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಶ್ರೀ ರೇಣುಕಾಂಬ ದೇವಿಯ ಜಾತ್ರೆ, ರಥೋತ್ಸವಕ್ಕೆ ಭಕ್ತರ ಆಗಮನ, ದೇವರ ದರ್ಶನ ಮತ್ತು ಜಾತ್ರೆಯಲ್ಲಿ ಭಕ್ತರ ಪಾಲ್ಗೊಳ್ಳುವಿಕೆ ನಿಷೇಧಿಸಲಾಗಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಚಂದ್ರಗುತ್ತಿ ಜಾತ್ರೆಯನ್ನು ಸ್ಥಳೀಯರ ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಹಾಕಲು ಸಹ ನಿಷೇಧ ಹೇರಲಾಗಿದೆ.
ಮಾರ್ಚ್ 22ರಂದು ನಡೆಯುವ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಿದ್ದರು. ಕೋವಿಡ್ ತಡೆಗಟ್ಟಲು ಕರ್ನಾಟಕ ಸರ್ಕಾರ ಹೊರಡಿಸಿರು ಮಾರ್ಗಸೂಚಿ ಅನ್ವಯ ಜಾತ್ರೆಯಲ್ಲಿ ಭಕ್ತರು ಪಾಲ್ಗೊಳ್ಳುವುದನ್ನು ನಿಷೇಧಿಸಲಾಗಿದೆ.
ಸ್ಥಳೀಯರು ಜಾತ್ರೆಯ ದಿನ ಸಂಪ್ರದಾಯಿಕ ವಿಧಿವಿಧಾನಗಳನ್ನು ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆದೇಶವನ್ನು ಉಲ್ಲಂಘನೆ ಮಾಡುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅನ್ವಯ ಕ್ರಮವನ್ನು ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಜಿಲ್ಲಾಡಳಿತ ಆದೇಶದಿಂದಾಗಿ ಹೊರ ರಾಜ್ಯ, ಹೊರ ಜಿಲ್ಲೆಗಳ ಭಕ್ತರು ಚಂದ್ರಗುತ್ತಿ ಜಾತ್ರೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಪೊಲೀಸ್, ಆರೋಗ್ಯ ಇಲಾಖೆಯ ವರದಿಗಳನ್ನು ಆಧರಿಸಿ ಈ ತೀರ್ಮಾನವನ್ನು ಜಿಲ್ಲಾಡಳಿತ ಕೈಗೊಂಡಿದೆ.