ಶಿಕಾರಿಪುರ ತಾಲೂಕು ಕಾಳೇನಹಳ್ಳಿಯ ಶಿವಯೋಗ ಮಂದಿರಕ್ಕೆ ಉತ್ತರಾಧಿಕಾರಿಯಾಗಿ ಭದ್ರಾವತಿ ತಾಲೂಕು ಗೋಣಿಬೀಡು ಶೀಲಸಂಪಾದನಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಅವರನ್ನು ಉತ್ತರಾಧಿಕಾರಿಯಾಗಿ ಘೋಷಣೆ ಮಾಡಲಾಗಿದೆ.
ಮಂಗಳವಾರ ಲಿಂಗೈಕ್ಯರಾದ ಶಿವಯೋಗ ಆಶ್ರಮದ ಶ್ರೀ ರೇವಣಸಿದ್ದ ಸ್ವಾಮೀಜಿ ಅವರು ಬರೆದಿಟ್ಟಿದ್ದ ಮರಣ ಪತ್ರದಂತೆ ಬುಧವಾರ ನೆರೆದಿದ್ದ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಉಯಿಲು ಪತ್ರವನ್ನು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರು ಪ್ರಕಟಿಸಿದರು. ರೇವಣಸಿದ್ಧ ಸ್ವಾಮೀಜಿಗಳ ಅಂತಿಮ ನಮನ ಹಾಗೂ ಶ್ರದ್ದಾಂಜಲಿ ಸಭೆಯಲ್ಲಿ ರಾಜ್ಯದ ಅನೇಕ ಪ್ರತಿಷ್ಠಿತ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.
ಮೂರುಸಾವಿರ ಮಠ, ತೋಂಟದಾರ್ಯ, ಬೆಕ್ಕಿನಕಲ್ಮಠದ ಗುರುಗಳ ನೇತೃತ್ವದಲ್ಲಿ ಲಿಂಗೈಕ್ಯ ಸ್ವಾಮೀಜಿಗಳಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಂಸದ ಬಿ.ವೈ.ರಾಘವೇಂದ್ರ ಅವರು ಮೃತ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ನೆನಪು ಮಾಡಿಕೊಂಡರು.