ಹೆಣ್ಣು ಮಕ್ಕಳು ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಂದ ಹೊರ ಬರಲು ಶಿಕ್ಷಣ ಪಡೆಯುವ ಅಗತ್ಯವಿದೆ ಎಂದು ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಹಾಗೂ ಸಮಾಜ ಸೇವಕ ವೇಣುಗೋಪಾಲ್ ಹೇಳಿದರು.
ಸೊರಬ ಪಟ್ಟಣದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಕನ್ನಡ ಜಾನಪದ ಪರಿಷತ್ ಸೊರಬ ಹಾಗೂ ಮಹಿಳಾ ಜ್ಞಾನವಿಕಾಸ ಕೇಂದ್ರದ ವತಿಯಿಂದ ಜಾನಪದ ಸಾಹಿತ್ಯದಲ್ಲಿ ಮಹಿಳೆ ಬಗ್ಗೆ ಬುಧವಾರ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಅಗತ್ಯವಿದ್ದು, ಶಿಕ್ಷಣದಿಂದಲೇ ಸಂಘಟಿತರಾಗಿ ತನ್ನ ಸುತ್ತಲಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದಕ್ಕೆ ಸಾಧ್ಯ ಎಂದ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಉಪನ್ಯಾಸಕ ಎಸ್.ಎಂ ನೀಲೇಶ್ ಅವರು ಕನ್ನಡ ಜಾನಪದ ಸಾಹಿತ್ಯದಲ್ಲಿ ಮಹಿಳೆ ಬಗ್ಗೆ ಉಪನ್ಯಾಸ ನೀಡಿ, ಶಿಕ್ಷಣದಿಂದ ವಂಚಿತಳಾದ ಜಾನಪದ ಮಹಿಳೆ ಕಾಯಕಕ್ಕೆ ಹೆಚ್ಚು ಮಹತ್ವ ಕೊಟ್ಟವಳು. ದಿನವಿಡಿ ಬದುಕಿನಲ್ಲಿ ದುಡಿತ ಅದರ ಮದ್ಯದಲ್ಲಿಯೆ ಸುಖ-ದುಃಖ, ತ್ಯಾಗ, ದೌರ್ಬಲ್ಯಗಳನ್ನು ದನಿ ಎತ್ತಿ ಹಾಡುವ ಮೂಲಕ ಅವಳ ಬದುಕಿನ ಪಾಡೇ ಹಾಡಾಯಿತು.
ಜನಪದ ಸಾಹಿತ್ಯದಲ್ಲಿ ಹೆಣ್ಣಿನ ವಿವಿದ ಮುಖಗಳನ್ನು ಗುರುತಿಸಲಾಗಿದೆ. ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ಪುರುಷನಿಗೆ ಸಮಾನವಾಗಿದ್ದಾಳೆ. ಜನಪದ ಮಹಿಳೆ ಉಳಿದ ಮಹಿಳೆಯರ ಹಾಗೆ ವಿದ್ಯಾಭ್ಯಾಸ ಕಲಿತವಳಲ್ಲ, ಜೀವನವೇ ಕಲಿಸಿದ ಬಾಳಿನ ವಿದ್ಯಾಭ್ಯಾಸವನ್ನು ಚೆನ್ನಾಗಿ ಅರಿತವಳು. ಬಾಳಿನ ಸಿಹಿ ಕಹಿಗಳನ್ನು ಸಮಪಾಲು ಸ್ವಿಕರಿಸಿ, ಬದುಕಿನಲ್ಲಿ ಬರುವ ಎಲ್ಲಾ ಸವಾಲು, ಸಮಸ್ಯೆಗಳಿಗೂ ಮುಗ್ದತೆಯಿಂದ ತನ್ನನ್ನು ತಾನು ಅರ್ಪಿಸಿಕೊಂಡವಳಾಗಿದ್ದಾಳೆ ಎಂದರು.
ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ರೇಣುಕಾ ಮಾತನಾಡಿ, ತಾಲೂಕಿನಲ್ಲಿ ೨೫ಕ್ಕೂ ಹೆಚ್ಚು ಜ್ಞಾನ ವಿಕಾಸ ಕೇಂದ್ರಗಳನ್ನು ಆರಂಭಿಸಿ ಮಹಿಳೆಯರಿಗೆ ಆರೋಗ್ಯ, ಶಿಕ್ಷಣ, ಕೌಶಲ್ಯ, ಕ್ರೀಡೆ ಇನ್ನಿತರೆ ವಿಷಯಗಳ ಬಗ್ಗೆ ಪರಿಪೂರ್ಣ ಮಾಹಿತಿ ನೀಡಲಾಗುತ್ತಿದೆ ಎಂದರು.
ಕನ್ನಡ ಜಾನಪದ ಪರಿಷತ್ ಗೌರವಾಧ್ಯಕ್ಷ ಹಾಗೂ ಆಕಾಶವಾಣಿ ಕಲಾವಿದ ಎಚ್.ಗುರುಮೂರ್ತಿ ಗೀತೆ ಹಾಡುವ ಮೂಲಕ ಮಹಿಳೆಯ ಶ್ರಮದ ಬಗ್ಗೆ ಮಾತನಾಡಿದರು. ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುಷ್ಪಾ ಸ್ವಾಗತಿಸಿ, ಸೇವಾ ಪ್ರತಿನಿಧಿಗಳಾದ ಸುಷ್ಮಾ ವಂದಿಸಿ, ಉಷಾ ನಿರೂಪಿಸಿದರು.