Malenadu Mitra
ರಾಜ್ಯ ಶಿವಮೊಗ್ಗ

ಅನ್ನದಾತರ ಆಕ್ರೋಶ ಸರಕಾರ ಸುಡಲಿದೆ

ಶಿವಮೊಗ್ಗ ರೈತ ಮಹಾ ಪಂಚಾಯತ್ ನಲ್ಲಿ ರಾಕೇಶ್ ಟಿಕಾಯತ್ ಎಚ್ಚರಿಕೆ

ಶಿವಮೊಗ್ಗದ ಐತಿಹಾಸಿಕ ರೈತ ಮಹಾಪಂಚಾಯತ್ ನಿರೀಕ್ಷೆಯಂತೆ ಅಭೂತಪೂರ್ವ ಯಶಸ್ಸು ಕಂಡಿತು. ಚಳವಳಿಗಳ ತವರೂರು ಶಿವಮೊಗ್ಗದಲ್ಲಿ ಈ ಸಮಾವೇಶ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿಯೂ ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳಿಗೆ ವ್ಯಾಪಕ ವಿರೋಧ ಎಂಬುದನ್ನು ಮಹಾಪಂಚಾಯತ್ ಸಾರಿತು.
ಮಹಾ ಪಂಚಾಯತ್‍ನ ಐಕಾನ್ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ರಾಕೇಶ್‍ಸಿಂಗ್ ಟಿಕಾಯತ್, ರೈತವಿರೋಧಿ ಕಾಯಿದೆಗಳು ರದ್ದಾಗದಿದ್ದಲ್ಲಿ ರೈತರು ಅವರದೇ ಹೊಲಗಳಲ್ಲಿ ಜೀತದಾಳುಗಳಾಗಿ ದುಡಿಯುವ ದಿನ ದೂರವಿಲ್ಲ ಎಂಬ ಆತಂಕ ವ್ಯಕ್ತಪಡಿಸಿದರು.
ರೈತರ ಹಸಿವಿನ ಮೇಲೆ ವ್ಯಾಪಾರ ಮಾಡಲು ಹೊರಟಿರುವ ಕಾರ್ಪೊರೇಟ್ ಕಂಪೆನಿಗಳ ಪ್ರೇಮಿ ಕೇಂದ್ರ ಸರಕಾರದ ವಿರುದ್ಧದ ಆಂದೋಲನ ಗುರಿಮುಟ್ಟುವ ತನಕ ನಡೆಯುತ್ತದೆ. ಇದಕ್ಕೆ ದೇಶದ ಎಲ್ಲ ಅನ್ನದಾತರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರಕಾರ ರೈತ ಜೀವನಾಡಿಗಳಾದ ಹೈನುಗಾರಿಕೆ, ಕೀಟನಾಶಕ, ಬೀಜ ಹಾಗೂ ವಿದ್ಯುತ್ ಕುರಿತ ಕಾಯಿದೆಗಳನ್ನು ಜಾರಿಗೆ ತಂದಿದೆ. ಈ ಯಾವ ಕಾಯಿದೆಗಳು ಬಡವರ, ರೈತರ ಪರವಾಗಿರದೆ ಬಂಡವಾಳ ಶಾಹಿಗಳ ಪರವಾಗಿವೆ. ಇವುಗಳನ್ನು ವಿರೋಧಿಸು ಆಂದೋಲನ ದೇಶವ್ಯಾಪಿ ನಡೆಯಬೇಕು.ಅನ್ನದಾತರ ಆಕ್ರೋಶ ಸರಕಾರವನ್ನು ಸುಟ್ಟು ಹಾಕಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಣ್ಣಿನೊಂದಿಗೆ ಬೆಸುಗೆಯಾಗಲಿ
ರೈತ ಸಂಸ್ಕೃತಿ ಉಳಿಯಬೇಕು. ರೈತ ವಿರೋಧಿ ಸರಕಾರಗಳಿಗೆ ಬುದ್ದಿ ಕಲಿಸಬೇಕೆಂದರೆ ನಮ್ಮ ರೈತರ ಮಕ್ಕಳು, ವಿದ್ಯಾವಂತರು ಮಣ್ಣಿನೊಂದಿಗೆ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಅವರು ಮಹಾ ಪಂಚಾಯತ್ ಗೆ ಬರುವಾಗ ತಮ್ಮ ಹೊಲದ ಒಂದು ಮುಷ್ಟಿ ಮಣ್ಣನ್ನು ತರಬೇಕು. ಈ ಸರಕಾರ ಹದಿನೈದು ವರ್ಷ ಹಳೆಯ ಟ್ರಾಕ್ಟರ್ ಬಳಸಬೇಡಿ ಎಂಬ ಕಾನೂನು ತಂದಿದೆ. ಯಾವ ರೈತ ಪ್ರತಿ ಹತ್ತು ವರ್ಷಕ್ಕೆ ಟ್ರಾಕ್ಟರ್ ಬದಲಾಯಿಸಬಲ್ಲ ಹೇಳಿ ಎಂದು ಪ್ರಶ್ನಿಸಿದ ರಾಕೇಶ್ ಟಿಕಾಯತ್, ಕೇಂದ್ರ ಸರಕಾರ ನಡೆಸುವವರು ಖಾಸಗಿ ಕಂಪನಿಗಳ ಮಾಲೀಕರಿದ್ದಾರೆ. ಅಂಬಾನಿ ಮತ್ತು ಅದಾನಿ ಮಿತ್ರರ ಕೈಯಲ್ಲಿ ಅಧಿಕಾರ ಇದೆ. ಈ ಕಾರಣದಿಂದ ರೈತರನ್ನು ನಾಶ ಮಾಡುವ ಕಾನೂನುಗಳು ಬರುತ್ತಿವೆ. ಈ ಸರಕಾರ ಕಿತ್ತೊಗೆಯುವ ತನಕ ನಮ್ಮ ಹೋರಾಟ ಮುಂದುವರಿಯಬೇಕು ಎಂದು ಕರೆಕೊಟ್ಟರು.

ಅಂದು ಅಪ್ಪಂದಿರು, ಇಂದು ಮಕ್ಕಳು

ತುಂಗಾಮೂಲ ಉಳಿಸಿ ಹೋರಾಟ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ 21 ವರ್ಷಗಳ ಹಿಂದೆ ನಡೆದಿತ್ತು. ಅಂದು ಮಹೇಂದ್ರಸಿಂಗ್ ಟಿಕಾಯತ್ ಹಾಗೂ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಭಾಗವಹಿಸಿದ್ದರು. ಶನಿವಾರ ನಡೆದ ಐತಿಹಾಸಿಕ ಹೋರಾಟದಲ್ಲಿ ಅವರ ಮಕ್ಕಳಾದ ರಾಕೇಶ್ ಸಿಂಗ್ ಟಿಕಾಯತ್ ಮತ್ತು ಚುಕ್ಕಿ ನಂಜುಂಡಸ್ವಾಮಿ ಭಾಗವಹಿಸಿದ್ದರು.

ಡಾ.ದರ್ಶನ್ ಪಾಲ್ ಮಾತನಾಡಿ, ಉತ್ತರ ಭಾರತದವರು ನಮ್ಮ ಹೋರಾಟಕ್ಕೆ ದಕ್ಷಿಣ ಭಾರತದವರು ಯಾಕೆ ಬೆಂಬಲಿಸುತ್ತಿಲ್ಲ ಎಂದು ಕೇಳುತ್ತಿದ್ದರು. ಆದರೆ ಶಿವಮೊಗ್ಗದ ಸಮಾವೇಶ ಇದಕ್ಕೆ ಉತ್ತರ ನೀಡಿದೆ. ಜೀರೊ ಡಿಗ್ರಿ ಚಳಿಯಲ್ಲಿ ಈ ದೇಶದ ಅನ್ನದಾತರು ಧರಣಿ ಮಾಡುತ್ತಿದ್ದರೂ ಪ್ರಧಾನ ಮಂತ್ರಿ ಮಾತುಕತೆಗೆ ಬಂದಿಲ್ಲ. ರೈತರ ಸಿಟ್ಟು ಅವರ ಸರಕಾರವನ್ನು ನಾಶ ಮಾಡುತ್ತದೆ ಎಂದರು.

ಹೋರಾಟ ಹತ್ತಿಕ್ಕುವ ತಂತ್ರ

ಮೋದಿ ಸರಕಾರ ತನ್ನ ಕಾರ್ಪೊರೇಟ್ ಗೆಳೆಯರಿಗಾಗಿ ರೈತ ಹೋರಾಟವನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನ ಮಾಡಿತು. ಜಾತಿಗಳನ್ನು, ಧರ್ಮಗಳನ್ನು, ಪರಿಶಿಷ್ಟರನ್ನು ಎಲ್ಲರನ್ನು ಎತ್ತಿಕಟ್ಟಿ ಚಳವಳಿ ಮುಗಿಸಲು ಮಾಡಿದ ಎಲ್ಲಾ ಪ್ರಯತ್ನ ವಿಫಲವಾಗಿದೆ ಎಂದು ಹೇಳಿದರು.
ಮತ್ತೊಬ್ಬ ನೇತಾರ ಯುದ್ದವೀರ್ ಸಿಂಗ್ ಮಾತನಾಡಿ, ನಾವು ನಾಲ್ಕು ತಿಂಗಳು ಹೋರಾಟ ಮಾಡುತ್ತಿದ್ದೇವೆ. ನೂರಾರು ಅನ್ನದಾತರನ್ನು ಕಳೆದುಕೊಂಡಿದ್ದೇವೆ. ಆದರೆ ನಮ್ಮೊಂದಿಗೆ ಮಾತನಾಡಲು ಪುರಸೊತ್ತಿಲ್ಲದ ಪ್ರಧಾನಿ ಸಿನೆಮಾ ಮಂದಿ ಜತೆ ಟ್ವೀಟ್ ಮಾಡುತ್ತಿದ್ದಾರೆ. ದಿಲ್ಲಿಯಲ್ಲಿ ಪಂಜಾಬ್, ಹರ್ಯಾಣ ಮತ್ತು ಉತ್ತರ ಭಾರತದ ಹೋರಾಟ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಇದು ಇಡೀ ದೇಶದ ಬಡವರು, ರೈತರು, ಕೂಲಿಕಾರರರು ಸೇರಿದಂತೆ ಎಲ್ಲಾ ಜನರ ಹೋರಾಟ ಎಂದು ಹೇಳಿದರು.
ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುವ ಪ್ರಧಾನಿಗೆ ರೈತರ ಸಾಲ ಮನ್ನಾ ಮಾಡಲು ಆಗುವುದಿಲ್ಲ. ಈ ಬಂಡವಾಳ ಶಾಹಿಗಳ ಸರಕಾರ ತೊಲಗುವ ತನಕ ಹೋರಾಟ ಮುಂದುವರಿಸೋಣ ಎಂದರು.

ರಾಜ್ಯ ರೈತ ಸಂಘದ ನಾಯಕ ಕೆ.ಟಿ.ಗಂಗಾಧರ್ ಮಾತನಾಡಿ, ಒಂದೋ ಕಾಯಿದೆಯನ್ನು ಹಿಂಪಡೆಯಿರಿ. ಇಲ್ಲವೇ ಅಧಿಕಾರದಿಂದ ಕೆಳಕ್ಕೆ ಇಳಿಯಿರಿ ಎಂದು ಎಚ್ಚರಿಕೆ ನೀಡಿದರು. ಮತ್ತೊಮ್ಮೆ ನೀವು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.
ಮತ್ತೊಬ್ಬ ನಾಯಕ ಹೆಚ್‍ಆರ್ ಬಸವರಾಜಪ್ಪ ಮಾತನಾಡಿ, ರೈತ ವಿರೋಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದರೆ, ಅದಕ್ಕೆ ತಕ್ಕ ವಿರೋಧ ಮಾಡುತ್ತೇವೆ ಎನ್ನುವುದಕ್ಕೆ ಇವತ್ತಿನ ಸಮಾವೇಶ ಸಾಕ್ಷಿ. ಕೇಂದ್ರ ಹಾಗೂ ರಾಜ್ಯದ ತಲಾ ಮೂರು ಕೃಷಿ ಕಾಯಿದೆಗಳು ರೈತರಿಗೆ ಮರಣ ಶಾಸನವಾಗಿದೆ ಎಂದರು.

ಮಹಾ ಪಂಚಾಯತ್ ರೂವಾರಿ ಎಂ ಶ್ರೀಕಾಂತ್, ಮಾತನಾಡಿ ದಿಲ್ಲಿಯ ನಾಯಕರ ಹೋರಾಟಕ್ಕೆ ನಾವು ನಿರಂತರವಾಗಿ ಬೆಂಬಲ ನೀಡೋಣ ಎಂದು ಹೇಳಿದರು. ಚುಕ್ಕಿ ನಂಜುಂಡಸ್ವಾಮಿ, ಹಾಲೇಶಪ್ಪ, ನೂರ್ ಶ್ರೀಧರ್ ಮತ್ತಿತರರು ಮಾತನಾಡಿದರು. ಶೋಭಾ ಸುಂದರೇಶ್ ಅದ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥ್ ಗೌಡ, ಕಾಂಗ್ರೆಸ್ ಅದ್ಯಕ್ಷ ಸುಂದರೇಶ್, ಮಾಜಿ ಶಾಸಕಿ ಶಾರದಾಪೂರ್ಯನಾಯ್ಕ ಮತ್ತಿತರರಿದ್ದರು. ಎನ್.ರಮೇಶ್ ಸ್ವಾಗತಿಸಿದರು. ಕೆ.ಪಿ.ಶ್ರೀಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಲ್. ಅಶೋಕ್ ನಿರೂಪಿಸಿದರು. ಎಚ್.ಸಿ.ಯೋಗಿಶ್ ನಿರ್ಣಯ ಓದಿದರು. ಮಲ್ಲಿಗೆ ದಿಲ್ಲಿನಾಯಕರ ಭಾಷಣ ತರ್ಜುಮೆ ಮಾಡಿದರು. ಇದಕ್ಕೂ ಮುನ್ನ ಜನ್ನಿ(ಜನಾರ್ದನ್) ತಂಡ ರೈತಗೀತೆ ಹಾಗೂ ಕ್ರಾಂತಿಗೀತೆಗಳನ್ನು ಹಾಡಿ ಕೇಳುಗರ ಮನಸೆಳೆದರು.

ಯಾರು ಏನೆಂದರು?

ಮಾನ್ಯ ಮೋದಿಯವರೇ ಚುನಾವಣೆ ಮುಗಿಯುತ್ತದೆ ನೀವು ಪಂಜಾಬ್, ತಮಿಳುನಾಡು ಕೇರಳನೂ ಗೆಲ್ಲೋದಿಲ್ಲ. ಟಿಕಾಯತ್ ಅವರನ್ನು ಹತ್ತಿಕ್ಕಲು ಮುಂದಾಗಿದ್ದೀರಿ, ಅವರನ್ನು ಮುಟ್ಟಿ ನೋಡಿ ರೈತ ಶಕ್ತಿ ಏನೆಂದು ತೋರಿಸುತ್ತೇವೆ-
ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಹಸಿರು ಸೇನೆ ಅಧ್ಯಕ್ಷ

ರಾಕೇಶ್ ಸಿಂಗ್‍ಜಿ ನೀವು ದಿಲ್ಲಿಯಲ್ಲಿ ಕುಳಿತು ಹೇಳಿ, ನಾವಿಲ್ಲಿ ನಿಮ್ಮ ಪರ ಹೋರಾಟ ಮಾಡುತ್ತೇವೆ. ಸುಗ್ರೀವಾಜ್ಞೆಗಳು ಜನಪರವಾಗಿರಬೇಕು. ರೈತರನ್ನು ನಾಶ ಮಾಡಲು ಅಧಿಕಾರ ನಡೆಸುವವರನ್ನು ಸಹಿಸಲು ಸಾಧ್ಯವಿಲ್ಲ

ಮಧು ಬಂಗಾರಪ್ಪ ,ಮಾಜಿ ಶಾಸಕ

ನವಿಲಿಗೆ ಕಾಳು ತಿನ್ನಿಸುವ ಮೋದಿ ಅವರಿಗೆ ರೈತರ ಸಾವು ನೋವು ತಂದಿಲ್ಲ. ಇಡೀ ಜಗತ್ತಿನಲ್ಲಿ ಯಾರೂ ಈ ರೀತಿಯ ಸವಾರ್ಧಿಕಾರಿ ಆಡಳಿತ ಮಾಡಿಲ್ಲ. ಭೂಮಿಯನ್ನು ಸಮಾನವಾಗಿ ಹಂಚಿ ಇಲ್ಲವಾದರೆ ರಾಷ್ಟ್ರೀಕರಣ ಮಾಡಿ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ಮೋದಿಯವರು ಇಂದು ಭೂಮಿಯನ್ನು ಖಾಸಗೀಕರರಣ ಮಾಡುತ್ತಿದ್ದಾರೆ

  • ಎಂ.ಗುರುಮೂರ್ತಿ, ದಸಂಸ ಸಂಚಾಲಕ

ಗಮನ ಸೆಳೆದ ಭತ್ತದ ತೋರಣ

ರೈತ ಮಹಾಪಂಚಾಯತ್ ಉದ್ಘಾಟನೆಯನ್ನು ಉದ್ದನೆಯ ಭತ್ತದ ಹಾರ ಅನಾವರಣ ಮಾಡುವ ಮೂಲಕ ಉದ್ಘಾಟಿಸಲಾಯಿತು. ಸಾಗರದ ಕಲಾವಿದ ಸಿರಿವಂತೆ ಚಂದ್ರಶೇಖರ್ ಅವರು ಬುಮ್ಮಣ್ಣಿ ಬುಟ್ಟಿಯಲ್ಲಿ ಸಾಂಪ್ರದಾಯಿಕವಾಗಿ ತಂದಿದ್ದ ತೋರಣವನ್ನು ರೈತನಾಯಕರು ಅನಾವರಣಗೊಳಿಸಿ ಸಮಾವೇಶಕ್ಕೆ ಚಾಲನೆ ನೀಡಿದರು.

Ad Widget

Related posts

ಒಂದೆರಡು ದಿನಗಳಲ್ಲಿ ಹೆಚ್ಚಿನ ಕೋವಿಡ್ ಲಸಿಕೆ ಲಭ್ಯ: ಬಿ.ಎಸ್.ಯಡಿಯೂರಪ್ಪ

Malenadu Mirror Desk

ಜೋಗ ನೋಡಲು ಜನಸಾಗರ ಮಳೆನಾಡ ಸೊಬಗನ್ನು ಕಣ್ತುಂಬಿಕೊಂಡ ಪ್ರವಾಸಿಗರು

Malenadu Mirror Desk

ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಪ್ರತಿನಿತ್ಯ ಸ್ಯಾನಿಟೈಸ್: ಮೇಯರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.