Malenadu Mitra
ರಾಜ್ಯ

ಮಧು ಕಾಂಗ್ರೆಸ್‍ಗೆ ಬಂದ್ರೆ ನಾವ್ ಹೊರ ಹೋಗ್ತೇವೆ

ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದ್ದರಿಂದ ಸಮಾನ ಮನಸ್ಕರು ಕಾಂಗ್ರೆಸ್‍ನಿಂದ ಹೊರಬಂದು ಹೊಸ ಸಂಘಟನೆ ಹುಟ್ಟುಹಾಕುವ ಬಗ್ಗೆ ಚಿಂತನೆ ನಡೆಸಲಿದ್ದೇವೆ ಎಂದು ಹಿರಿಯ ರಾಜಕಾರಣಿ ಬಾಸೂರು ಚಂದ್ರೇಗೌಡ ಹೇಳಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 40ವರ್ಷಗಳಿಂದಲೂ ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಹಾಗೂ ಅವರ ಕುಟುಂಬದವರು ಇರುವ ಪಕ್ಷದಲ್ಲಿ ಕೆಲಸ ಮಾಡಲು ಮನಸ್ಸಿಲ್ಲದೆ, ಪ್ರತಿಪಕ್ಷದ ಸ್ಥಾನದಲ್ಲಿ ಅವರ ಆಡಳಿತ ವೈಖರಿಯನ್ನು ಪ್ರಶ್ನೆ ಮಾಡಿದ್ದೇನೆ. ಈಗ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿರುವುದರಿಂದ ಅಧಿಕೃತವಾಗಿ ಜೆಡಿಎಸ್ ಅಥವಾ ಹೊಸ ಸಂಘಟನೆ ಪ್ರಾರಂಭಿಸುವ ಬಗ್ಗೆ ಸಮಾನ ಮನಸ್ಕರು ಶೀಘ್ರದಲ್ಲಿ ತೀರ್ಮಾನ ಮಾಡಲಿದ್ದೇವೆ ಎಂದು ತಿಳಿಸಿದರು.


ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸ್ಥಳೀಯವಾಗಿ ಎನ್‍ಡಿಎ ಪಕ್ಷ ಕಟ್ಟಿ ತಾಲೂಕಿನಲ್ಲಿ 4ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ನಮ್ಮ ಬೆಂಬಲಿಗರು ಗೆದ್ದ ಉದಾಹರಣೆ ಇದೆ. ಅಭಿವೃದ್ಧಿ ವಿರೋಧಿಯಾಗಿರುವ ಬಂಗಾರಪ್ಪ ಕುಟುಂಬದ ಜತೆ ಎಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಮೊದಲು ಹೋರಾಟ ಮಾಡಿದವರು ಕುಪ್ಪಗಡ್ಡೆ ಮರಿಯಪ್ಪ ಎನ್ನುವುದನ್ನು ಮರೆಯಬಾರದು ಎಂದರು.


ಜೆಡಿಎಸ್‍ನಿಂದ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿರುವುದರಿಂದ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಚರ್ಚಿಸಿ ಬೆಂಬಲಿಗರು ಜೆಡಿಎಸ್ ಸೇರುವ ಬಗ್ಗೆ ಒಲವು ವ್ಯಕ್ತಪಡಿಸಿದರೆ ಆ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ಚಿಮಣೂರು ಹುಚ್ಚಪ್ಪ ಮಾತನಾಡಿ, ತಾಲೂಕಿನ ಏತ ನೀರಾವರಿ ಯೋಜನೆಗೆ ಶಾಸಕ ಕುಮಾರ್ ಬಂಗಾರಪ್ಪ ಅವರ ಪ್ರಯತ್ನ ಕಿಂಚಿತ್ತು ಇಲ್ಲ. ಜೆ.ಎಚ್.ಪಟೇಲ್ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಮಂಜೂರಾದ ಯೋಜನೆ ಈಗ ಕಾರ್ಯಗತಗೊಂಡಿದೆ ಎಂದು ತಿಳಿಸಿದರು.
ಮುಖಂಡ ಪುಂಡಲೀಕ ಮಾತನಾಡಿ, ಬಗರ್ ಹುಕುಂ ಸಾಗುವಳಿದಾರರಿಗೆ ನೀಡಿರುವ ಹಕ್ಕುಪತ್ರವನ್ನು ವಜಾಗೊಳಿಸಿರುವುದು ಶಾಸಕರ ಸಾಧನೆ ಎಂದುಕೊಂಡಿದ್ದಾರೆ. ಸುಳ್ಳು ಭರವಸೆ ನೀಡಿ ಜನರನ್ನು ಮೋಸಗೊಳಿಸುತ್ತಿರುವ ನಾಯಕರ ವಿರುದ್ಧ ಹೊಸ ಸಂಘಟನೆ ಹುಟ್ಟುಹಾಕುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಮುಖಂಡರಾದ ಎಲ್.ಜಿ.ಗುಡ್ಡಪ್ಪ, ಶಿವಾಜಪ್ಪ, ದ್ಯಾವಪ್ಪ, ಭಾರತಿ ಶೆಣೈ, ಮುನೀರ್ ಅಹಮದ್, ಪ್ರಶಾಂತ್, ವಿಷ್ಣುಮೂರ್ತಿ, ಮಂಜಪ್ಪ, ವಕೀಲ ಬಸವರಾಜ್, ಪರಮೇಶಪ್ಪ, ಈ.ಎಚ್.ಮಂಜುನಾಥ್ ಇತರರಿದ್ದರು.

Ad Widget

Related posts

ಪ್ರಧಾನಿ ಮೋದಿ ಅವರಿಂದ ಭಾರತ ಮತ್ತಷ್ಟು ಬಲಿಷ್ಠ , ಕೇಂದ್ರ ಸರಕಾರಕ್ಕೆ 8 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೇಂದ್ರದ ಸಾಧನೆ ಕೊಂಡಾಡಿದ ಸಂಸದ ರಾಘವೇಂದ್ರ

Malenadu Mirror Desk

ಅತೀ ಹಿಂದುಳಿದವರಿಗೆ ಅನ್ಯಾಯ, ದುಬಾರಿ ವಾಚ್ ಕಟ್ಟಿಕೊಂಡು ಸಮಾಜವಾದಿ ಎನ್ನಲಾಗದು. ಅರಸು ಚಿಂತನೆ ಇರಬೇಕು, ಹಿಂದುಳಿದ ವರ್ಗದ ಸಮಾನ ಮನಸ್ಕರ ಸಭೆಯಲ್ಲಿ ಹರಿಪ್ರಸಾದ್ ವಾಗ್ದಾಳಿ

Malenadu Mirror Desk

ಎರಡನೇ ಪತ್ನಿ ದೂರವಾಗಲು ಕಾರಣ ಎಂದು ರೌಡಿಶೀಟರ್‌ನನ್ನು ಕೊಲೆಮಾಡಿದಾತ ಪೊಲೀಸರಿಗೆ ಶರಣು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.