ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಚಳುವಳಿಯ ಮುಂದಿನ ಭಾಗವಾಗಿ ಮಾ.26 ರಂದು ಭಾರತ್ ಬಂದ್‍ಗೆ ಕರೆ ನೀಡಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಬಂದ್ ಬದಲು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೆಳಿಗ್ಗೆ 11 ಗಂಟೆಗೆ ಕಾಯ್ದೆಗಳ ಪ್ರತಿಗಳನ್ನು ದಹಿಸುವ ಮೂಲಕ ಪ್ರತಿಭಟನಾ ಸಭೆ ನಡೆಯಲಿದೆ ಎಂದು ರೈತ ಮುಖಂಡ ಹೆಚ್.ಆರ್. ಬಸವರಾಜಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿಭಟನೆ 4 ತಿಂಗಳನ್ನು ಪೂರೈಸಿದೆ ಈ ಹಿನ್ನೆಲೆಯಲ್ಲಿ ಭಾರತ್ ಬಂದ್‍ಗೆ ಮಾ.26 ರಂದು ಕರೆ ನೀಡಲಾಗಿದೆ. ಆದರೆ ಶಿವಮೊಗ್ಗದಲ್ಲಿ ಈಗಾಗಲೇ ನಮ್ಮ ಎಲ್ಲಾ ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದೇವೆ. ಈ ಹಿನ್ನಲೆಯಲ್ಲಿ ಭಾರತ್ ಬಂದ್ ದಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿ ಅಲ್ಲಿ ಕಾಯ್ದೆಗಳ ಪ್ರತಿಯನ್ನು ಸುಡಲಾಗುವುದು. ಯಥಾ ಪ್ರಕಾರ ಎಲ್ಲಾ ರೈತ ಸಂಘಟನೆಗಳು ವಿವಿಧ ಪಕ್ಷದ ಮುಖಂಡರು ಪ್ರಗತಿಪರರು ಈ ಸಭೆಯಲ್ಲಿ ಹಾಜರಿರುತ್ತಾರೆ ಎಂದರು.
ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಶಿವಮೊಗ್ಗದಲ್ಲಿ ಮಾ.20 ರಂದು ನಡೆದ ಮಹಾ ಪಂಚಾಯತ್ ಸಮಾವೇಶದಲ್ಲಿ ಭಾಷಣ ಮಾಡಿದ ರಾಕೇಶ್ ಟಿಕಾಯತ್ ಮೇಲೆ ಪ್ರಚೋದನಕಾರಿ ಭಾಷಣ ಮಾಡಿದರು. ಎಂಬ ಹಿನ್ನಲೆಯಲ್ಲಿ ಸೆಕ್ಷನ್ 153 ರ ಪ್ರಕಾರ ಕೇಸು ದಾಖಲಿಸಿಕೊಂಡಿರುವುದು ಸರಿಯಲ್ಲ. ಇದರಿಂದ ಚಳುವಳಿ ಮತ್ತಷ್ಟು ಗಟ್ಟಿಯಾಗುತ್ತದೆ. ಅವರು ಎಲ್ಲಿಯೂ ಪ್ರಚೋದನಕಾರಿ ಭಾಷಣ ಮಾಡಿಲ್ಲ. ಅವರು ಭಾಷಣ ಮಾಡಿದ ಮೇಲೂ ಯಾವ ಪರಿಣಾಮವು ಶಿವಮೊಗ್ಗದಲ್ಲಿ ಆಗಿಲ್ಲ. ರಾಜ್ಯ ಸರ್ಕಾರ ಇಂತಹ ದುರಾಲೋಚನೆಯನ್ನು ಕೈ ಬಿಡಬೇಕು. ಪೊಲೀಸರು ಸರ್ಕಾರದ ಕೈ ಗೊಂಬೆಗಳಂತೆ ವರ್ತಿಸಿರುವುದು ಇಲ್ಲಿ ಗೊತ್ತಾಗುತ್ತದೆ. ಇದೊಂದು ಅವಿವೇಕದ ತೀರ್ಮಾನವಾಗಿದೆ. ಗೃಹ ಮಂತ್ರಿಗಳಿಗೆ ಕನಿಷ್ಠ ಪ್ರಜ್ಞೆಯೂ ಇಲ್ಲ ಎಂದರು.
ಕೆ.ಎಲ್.ಅಶೋಕ್, ಯಶವಂತರಾವ್ ಗೋರ್ಪಡೆ, ಎನ್.ರಮೇಶ್, ಯೋಗೀಶ್, ರಾಘವೇಂದ್ರ, ವಿರೇಶ್, ಕಾಶಿ ವಿಶ್ವನಾಥ್, ಜಗದೀಶ್, ಶರಚ್ಚಂದ್ರ, ಅನನ್ಯ ಶಿವು, ಪಾಲಾಕ್ಷಿ, ಹಾಲೇಶಪ್ಪ, ಶಿ.ಜು.ಪಾಷ ಮತ್ತಿತರರಿದ್ದರು.