ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಬಾಬು ಜಗಜೀವನರಾಮ್ ಜಯಂತಿ ಹಾಗೂ ಡಾ.ಅಂಬೇಡ್ಕರ್ ಜಯಂತಿಯನ್ನು ಈ ಬಾರಿ ಸರಳವಾಗಿ ಆಚರಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಯಂತಿ ಅಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಎಲ್ಲಾ ಜಯಂತಿಗಳನ್ನು ಸರಳವಾಗಿ ಆಚರಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಅದರಂತೆ ಜಯಂತಿ ಆಚರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತದ ವತಿಯಿಂದ ಯಾವುದೇ ಮೆರವಣಿಗೆಗಳಿಗೆ ಅವಕಾಶವಿರುವುದಿಲ್ಲ. ಜಿಲ್ಲಾಡಳಿತದ ನೂತನ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಎಪ್ರಿಲ್ 5ರಂದು ಹಸಿರುಕ್ರಾಂತಿ ಹರಿಕಾರ ಬಾಬು ಜಗಜೀವನರಾಂ ಜಯಂತಿ ಹಾಗೂ ಎಪ್ರಿಲ್ 14ರಂದು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿ ನಡೆಯಲಿದೆ. ಮಹನೀಯರ ಭಾವಚಿತ್ರಗಳಿಗೆ ಗೌರವ ಸಮರ್ಪಿಸಿ ಸಭಾ ಕಾರ್ಯಕ್ರಮ ನಡೆಯಲಿದೆ. ಅವರ ಜೀವನದ ಸಮಗ್ರ ಮಾಹಿತಿಯನ್ನು ನೀಡುವ ಉಪನ್ಯಾಸ ಅಯೋಜಿಸಲಾಗುವುದು ಎಂದರು.
ಸಭಾ ಕಾರ್ಯಕ್ರಮವನ್ನು ಶಿಚ್ಟಾಚಾರ ಪ್ರಕಾರ ನಡೆಸಬೇಕು. ಅತಿಥಿ ಗಣ್ಯರನ್ನು ಆಹ್ವಾನಿಸಬೇಕು. ಸಭಾ ಕಾರ್ಯಕ್ರಮದ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಆಯ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಪಾಹಾರ ವ್ಯವಸ್ಥೆಯನ್ನು ಕಲ್ಪಿಸುವಂತೆ ಅವರು ಸೂಚನೆ ನೀಡಿದರು.
ಅಪರ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೇಖರ್ ಹೆಚ್.ಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದು ಸಲಹೆ ಅಭಿಪ್ರಾಯಗಳನ್ನು ನೀಡಿದರು.