ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ 75ವಾರಗಳ ಕಾಲ ಜಿಲ್ಲೆಯಾದ್ಯಂತ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ಹೇಳಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಮೃತ ಮಹೋತ್ಸವ ಆಚರಣೆ ಕುರಿತು ವಿವಿಧ ಇಲಾಖೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಆಯ್ದ ಐತಿಹಾಸಿಕ ಸ್ಥಳಗಳಲ್ಲಿ, ಸ್ವಾತಂತ್ರö್ಯ ಹೋರಾಟಕ್ಕೆ ಸಂಬಂಧಿಸಿದ ತಾಣಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿ ತಿಂಗಳು ಜಿಲ್ಲಾ ಮಟ್ಟದ ಒಂದು ಕಾರ್ಯಕ್ರಮ ಇರುವುದು. ತಾಲೂಕು ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.ಸ್ವಾತಂತ್ರ್ಯ ಹೋರಾಟಕ್ಕೆ ಸಂಬAಧಿಸಿದ ಪ್ರಮುಖ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಈಸೂರು, ಬಳ್ಳಿಗಾವೆ, ಶಿವಪ್ಪ ನಾಯಕ ಅರಮನೆ, ನಗರ ಕೋಟೆ, ಕವಲೇದುರ್ಗ ಕೋಟೆ, ಕುಪ್ಪಳ್ಳಿ, ಮಹಾತ್ಮಾ ಗಾಂಧಿ ಉದ್ಯಾನವನ, ಅರಸಾಳು ಮುಂತಾದ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಎಪ್ರಿಲ್ 13ರಂದು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಹಚ್ಚಿದ ಈಸೂರಿನಲ್ಲಿ, ಮೇ 18ರಂದು ಶಿವಪ್ಪ ನಾಯಕ ಅರಮನೆಯಲ್ಲಿ, ಜೂನ್ 10ರಂದು ಅರಸಾಳು, ಜುಲೈ 5 ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ, ಕ್ವಿಟ್ ಇಂಡಿಯಾ ಚಳುವಳಿ ಹಿನ್ನೆಲೆಯಲ್ಲಿ ಆಗಸ್ಟ್ 9ರಂದು ಶಿವಮೊಗ್ಗ ಗಾಂಧಿ ಪಾರ್ಕ್ನಲ್ಲಿ, ಸೆಪ್ಟಂಬರ್ 5ರಂದು ಕವಲೆದುರ್ಗದಲ್ಲಿ ವಿದ್ಯಾರ್ಥಿಗಳಿಗೆ ಟ್ರೆಕ್ಕಿಂಗ್, 27ರಂದು ನಗರಕೋಟೆಯಲ್ಲಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ಕಾರ್ಯಕ್ರಮ, ನವೆಂಬರ್ 14ರಂದು ಕುಪ್ಪಳ್ಳಿಯಲ್ಲಿ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.
ಇದಕ್ಕೆ ಹೊರತುಪಡಿಸಿ ನಿರಂತರವಾಗಿ ಶಾಲಾ ಕಾಲೇಜುಗಳಲ್ಲಿ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಕ್ವಿಜ್, ಚಿತ್ರಕಲಾ ಸ್ಪರ್ಧೆಗಳು, ವೇಷಭೂಷಣ, ಕಿರುನಾಟಕ, ಸೈಕಲ್ ಜಾಥಾ, ಸ್ವಚ್ಛತಾ ಕಾರ್ಮಿಕರಿಗೆ ಅಭಿನಂದನೆ ಕಾರ್ಯಕ್ರಮ, ಗಾಂಧೀಜಿ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನ, ಶ್ರಮದಾನ, ಗುಡಿ ಕೈಗಾರಿಕೆಗಳಿಗೆ ಉತ್ತೇಜನ ಕಾರ್ಯಕ್ರಮ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.